ಟಿ20 ವಿಶ್ವಕಪ್‌ಗೆ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ; ಶಾಂಟೊ ನಾಯಕ, ಶಕೀಬ್ ಅಲ್ ಹಸನ್‌ಗೆ ಸ್ಥಾನ-bangladesh cricket team for icc t20 world cup 2024 najmul hossain shanto to captain shakib al hasan included jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್‌ಗೆ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ; ಶಾಂಟೊ ನಾಯಕ, ಶಕೀಬ್ ಅಲ್ ಹಸನ್‌ಗೆ ಸ್ಥಾನ

ಟಿ20 ವಿಶ್ವಕಪ್‌ಗೆ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ; ಶಾಂಟೊ ನಾಯಕ, ಶಕೀಬ್ ಅಲ್ ಹಸನ್‌ಗೆ ಸ್ಥಾನ

ಮುಂಬರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಬಾಂಗ್ಲಾದೇಶವು 15 ಆಟಗಾರರ ತಂಡವನ್ನು ಮಂಗಳವಾರ ಪ್ರಕಟಿಸಿದೆ. ನಜ್ಮುಲ್ ಹುಸೇನ್ ಶಾಂಟೊ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಜೂನ್ 1ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟೂರ್ನಿ ಆರಂಭವಾಗಲಿದೆ.

ಟಿ20 ವಿಶ್ವಕಪ್‌ಗೆ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ
ಟಿ20 ವಿಶ್ವಕಪ್‌ಗೆ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ (AFP)

ಟಿ20 ವಿಶ್ವಕಪ್ 2024ಕ್ಕೆ ಬಾಂಗ್ಲಾದೇಶ ಕ್ರಿಕೆಟ್‌ ತಂಡವನ್ನು (Bangladesh Cricket Team) ತಡವಾಗಿ ಪ್ರಕಟಿಸಲಾಗಿದೆ. ಮೇ 14ರ ಮಂಗಳವಾರ 15 ಸದಸ್ಯರ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದ್ದು, ನಜ್ಮುಲ್ ಹುಸೇನ್ ಶಾಂಟೊ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು ಬಾಂಗ್ಲಾದೇಶವು 4-1 ಅಂತರದಿಂದ ಗೆದ್ದ ನಂತರ ಅಳೆದು ತೂಗಿ ತಂಡವನ್ನು ಪ್ರಕಟಿಸಲಾಗಿದೆ.

ಜೂನ್ 1ರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿದೆ. ಬಾಂಗ್ಲಾದೇಶ ತಂಡವು ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನೆದರ್ಲೆಂಡ್ಸ್ ಮತ್ತು ನೇಪಾಳ ತಂಡಗಳೊಂದಿಗೆ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಜೂನ್ 7ರಂದು ಡಲ್ಲಾಸ್‌ನಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತನ್ನ ಚುಟುಕು ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ.

ಇದಕ್ಕಾಗಿ 15 ಸದಸ್ಯರ ಬಾಂಗ್ಲಾದೇಶ ತಂಡದಲ್ಲಿ ಅನುಭವಿ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್ ಸ್ಥಾನ ಪಡೆದಿದ್ದಾರೆ. ಜಿಂಬಾಬ್ವೆ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಆಡುವ ಮೂಲಕ, ಸುಮಾರು ಒಂದು ವರ್ಷದ ನಂತರ ಬಾಂಗ್ಲಾದೇಶ ಪರ ಅವರು ಟಿ20 ಸ್ವರೂಪದಲ್ಲಿ ಕಾಣಿಸಿಕೊಂಡರು. ಪಂದ್ಯದಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶವು 5 ರನ್‌ಗಳ ರೋಚಕ ಗೆಲುವು ಸಾಧಿಸುಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅವರ ಅನುಭವವು ವಿಶ್ವಕಪ್‌ನಲ್ಲೂ ತಂಡಕ್ಕೆ ನೆರವಾಗಲಿದೆ.

ತಂಝಿದ್ ಹಸನ್ ಮತ್ತು ತೌಹಿದ್ ಹ್ರಿದೋಯ್, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದರು. ತಂಜೀದ್ ಐದು ಪಂದ್ಯಗಳಲ್ಲಿ 40ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿ 160 ರನ್ ಗಳಿಸಿದರೆ, 140 ರನ್ ಗಳಿಸಿದ ತೌಹೀದ್ ಸರಣಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಬೌಲಿಂಗ್ ವಿಭಾಗದಲ್ಲಿ ತಸ್ಕಿನ್ ಅಹ್ಮದ್ ಮತ್ತು ಮೊಹಮ್ಮದ್ ಸೈಫುದ್ದೀನ್ ತಲಾ 8 ವಿಕೆಟ್ ಪಡೆದು ಮಿಂಚಿದರು. ಅಮೋಘ ಪ್ರದರ್ಶನದ ಹೊರತಾಗಿಯೂ, ಸೈಫುದ್ದೀನ್ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ.

ತಂಡದಲ್ಲಿ ಹೆಚ್ಚಿನ ಆಟಗಾರರು ಟಿ20 ಸರಣಿಯಲ್ಲಿ ಕಾಣಿಸಿಕೊಂಡವರೇ ಆಗಿದ್ದಾರೆ. ಎಡಗೈ ವೇಗಿ ಶೋರಿಫುಲ್ ಇಸ್ಲಾಂ ಕೂಡ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸತತವಾಗಿ ರನ್ ಗಳಿಸಲು ಹೆಣಗಾಡುತ್ತಿರುವ ಲಿಟ್ಟನ್ ದಾಸ್ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಲ್‌ರೌಂಡರ್ ಅಫಿಫ್ ಹುಸೇನ್ ಮತ್ತು ಬಲಗೈ ವೇಗಿ ಹಸನ್ ಮಹಮೂದ್ ಅವರನ್ನು ಇಬ್ಬರು ಮೀಸಲು ಆಟಗಾರರಾಗಿ ಹೆಸರಿಸಲಾಗಿದೆ.

‌ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡ

ನಜ್ಮುಲ್ ಹುಸೇನ್ ಶಾಂಟೊ, ತಸ್ಕಿನ್ ಅಹ್ಮದ್, ಲಿಟ್ಟನ್ ದಾಸ್, ಸೌಮ್ಯ ಸರ್ಕಾರ್, ತಂಜಿದ್ ಹಸನ್ ತಮೀಮ್, ಶಕೀಬ್ ಅಲ್ ಹಸನ್, ತೌಹಿದ್ ಹೃದೋಯ್, ಮಹಮುದುಲ್ಲಾ ರಿಯಾದ್, ಜಾಕರ್ ಅಲಿ ಅನಿಕ್, ತನ್ವೀರ್ ಇಸ್ಲಾಂ, ಶಕ್ ಮಹೆದಿ ಹಸನ್, ರಿಷದ್ ಹುಸೇನ್, ಮುಸ್ತಾಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.

ಮೀಸಲು ಆಟಗಾರರು: ಅಫಿಫ್ ಹುಸೇನ್, ಹಸನ್ ಮಹಮೂದ್.