ಡಿಪಿಎಲ್ ಪಂದ್ಯದ ಮಧ್ಯದಲ್ಲಿ ತಮೀಮ್ ಇಕ್ಬಾಲ್‌ಗೆ ಹೃದಯಾಘಾತ; ತುರ್ತು ಆಸ್ಪತ್ರೆಗೆ ದಾಖಲು
ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್ ಪಂದ್ಯದ ಮಧ್ಯದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ಆಟಗಾರ ತಮೀಮ್ ಇಕ್ಬಾಲ್‌ಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ (Tamim Iqbal), ದಿಢೀರ್ ಹೃದಯಾಘಾತದಿಂದಾಗಿ ಪಂದ್ಯದ ಮಧ್ಯದಲ್ಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ (ಮಾ.24) ಸಾವರ್ ಎಂಬಲ್ಲಿನ ಬಿಕೆಎಸ್‌ಪಿ ಮೈದಾನದಲ್ಲಿ ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್ ಪಂದ್ಯ ನಡೆಯುತ್ತಿದ್ದಾಗ ಘಟನೆ ನಡೆದಿದೆ. ಮಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಶೈನೆಪುಕುರ್ ಕ್ರಿಕೆಟ್ ಕ್ಲಬ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗಲೇ ತಮೀಮ್‌ಗೆ ತೀವ್ರ ಹೃದಯಾಘಾತವಾಗಿದೆ. ಹೀಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
50 ಓವರ್‌ಗಳ ಪಂದ್ಯದ ಮೊದಲ ಇನ್ನಿಂಗ್ಸ್ ನಡೆಯುತ್ತಾಗ ತಮೀಮ್ ಫೀಲ್ಡಿಂಗ್ ಮಾಡುತ್ತಿದ್ದರು. ಆಗ ಈ ಘಟನೆ ಸಂಭವಿಸಿದೆ. ಆರಂಭದಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಯಿತು. ಆದರೆ ಸ್ಥಳದಿಂದ ಹೆಲಿಕಾಪ್ಟರ್ ಹಾರಲು ಸಾಧ್ಯವಾಗಲಿಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೆ ಅವರನ್ನು ಸ್ಥಳೀಯ ಫಾಜಿಲತುನ್ನೀಸಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
“ಎದೆನೋವು ಆಗುತ್ತಿರುವ ಬಗ್ಗೆ ಹೇಳಿಕೊಂಡರು. ಹೀಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಪರೀಕ್ಷಿಸಲಾಗಿ ಇಸಿಜಿಗೆ ಒಳಪಡಿಸಲಾಯಿತು” ಎಂದು ಬಿಸಿಬಿ ಮುಖ್ಯ ವೈದ್ಯ ದೇಬಶಿಶ್ ಚೌಧರಿ ದೃಢಪಡಿಸಿದ್ದಾರೆ. "ಒಂದು ಸಣ್ಣ ಸಮಸ್ಯೆ ಇತ್ತು. ಆದರೆ ಹೃದಯದ ಸ್ಥಿತಿ ಏನು ಎಂಬುದುರ ಕುರಿತು ಕೆಲವೊಮ್ಮೆ ತಕ್ಷಣ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
ಎರಡನೇ ಬಾರಿ ಆಸ್ಪತ್ರೆಗೆ ದಾಖಲು
“ಮೊದಲು ರಕ್ತ ಪರೀಕ್ಷೆ ನಡೆಸಿದಾಗ ಸಮಸ್ಯೆ ಕಂಡುಬಂತು. ಆರೋಗ್ಯ ಸರಿ ಇಲ್ಲ ಎಂಬುದು ತಿಳಿಯಿತು. ಢಾಕಾಗೆ ಹಿಂತಿರುಗಲು ಬಯಸುವುದಾಗಿ ಅವರು ಹೇಳಿದರು. ಆಸ್ಪತ್ರೆಯಿಂದ ಮೈದಾನಕ್ಕೆ ಹಿಂದಿರುಗುತ್ತಿದ್ದಾಗ, ಅವರ ಎದೆಯಲ್ಲಿ ಮತ್ತೆ ನೋವು ಕಾಣಿಸಿಕೊಂಡಿತು. ಹೀಗಾಗಿ ಅವರನ್ನು ಎರಡನೇ ಬಾರಿಗೆ ಮತ್ತೆ ಆಸ್ಪತ್ರೆಗೆ ಕರೆತರಲಾಯಿತು. ಅವರಿಗೆ ಭಾರಿ ಹೃದಯಾಘಾತವಾಗಿದೆ ಎಂದು ತೋರುತ್ತದೆ. ಈಗ ಅವರು ಫಜಿಲಾತುನ್ನೀಸಾ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ” ಎಂದು ಚೌಧರಿ ಹೇಳಿದ್ದಾರೆ.
ಜನವರಿಯಲ್ಲಿ ನಿವೃತ್ತಿ
ತಮೀಮ್ ಈ ವರ್ಷದ ಜನವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 2007ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ತಮೀಮ್, 243 ಏಕದಿನ, 70 ಟೆಸ್ಟ್ ಮತ್ತು 78 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಎಲ್ಲಾ ಸ್ವರೂಪಗಳಲ್ಲಿ 15,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 25 ಶತಕಗಳು ಕೂಡಾ ಸೇರಿವೆ.
