ಆಟಗಾರರ ವಾರ್ಷಿಕ ಒಪ್ಪಂದ ಪ್ರಕಟಿಸಿದ ಬಿಸಿಸಿಐ; ಇಶಾನ್-ಅಯ್ಯರ್ಗೆ ಗೇಟ್ಪಾಸ್, ಜಡೇಜಾ, ರಿಂಕು ಸೇರಿ ಹಲವರಿಗೆ ಬಡ್ತಿ
BCCI Annual Contract List : ಆಟಗಾರರ ವಾರ್ಷಿಕ ಒಪ್ಪಂದದ ನೂತನ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ರವೀಂದ್ರ ಜಡೇಜಾ ಸೇರಿ ಹಲವರು ಬಡ್ತಿ ಪಡೆದಿದ್ದಾರೆ. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2023-24ರ ಋತುವಿನ (ಅಕ್ಟೋಬರ್ 1, 2023 ರಿಂದ ಸೆಪ್ಟೆಂಬರ್ 30, 2024ರವರೆಗೆ) ಟೀಮ್ ಇಂಡಿಯಾ (ಹಿರಿಯ ಪುರುಷರು) ವಾರ್ಷಿಕ ಆಟಗಾರರ ಒಪ್ಪಂದ ಬುಧವಾರ (ಫೆ 28) ಪ್ರಕಟಿಸಿದೆ. ಪ್ರಮುಖ ಆಟಗಾರರಿಗೆ ಬಡ್ತಿ ಸಿಕ್ಕಿದ್ದರೆ, ಇನ್ನು ಕೆಲವರನ್ನು ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಹೊರಹಾಕಲಾಗಿದೆ. ಒಂದು ವರ್ಷದಿಂದ ಕ್ರಿಕೆಟ್ಗೆ ದೂರವಾಗಿದ್ದರೂ ರಿಷಭ್ ಪಂತ್ ಗುತ್ತಿಗೆ ಪಟ್ಟಿಯಲ್ಲೇ ಉಳಿದಿದ್ದಾರೆ. ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆಯನ್ನೂ ಕೈಬಿಡಲಾಗಿದೆ.
ರಣಜಿ ಆಡಲು ಪದೆಪದೇ ಹಿಂದೇಟು ಹಾಕಿದ್ದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ. ರವೀಂದ್ರ ಜಡೇಜಾಗೆ ಎ ಗ್ರೇಡ್ನಿಂದ ಎ+ ಗ್ರೇಡ್ಗೆ ಮುಂಬಡ್ತಿ ಸಿಕ್ಕಿದೆ. ಯುವ ಆಟಗಾರರು ಸಹ ಸೆಂಟ್ರಲ್ ಕಾಂಟ್ರಾಕ್ಟ್ ಪಟ್ಟಿಯಲ್ಲಿ ಅವಕಾಶ ಪಡೆಯಲು ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರನ್ನು ಶಿಫಾರಸ್ಸು ಕೂಡ ಮಾಡಲಾಗಿದೆ.
ಆಟಗಾರರ ವಾರ್ಷಿಕ ಒಪ್ಪಂದದ ನೂತನ ಪಟ್ಟಿ
ಗ್ರೇಡ್ A+ (4 ಕ್ರಿಕೆಟಿಗರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ (ಬಡ್ತಿ).
ಗ್ರೇಡ್ ಎ (6 ಕ್ರಿಕೆಟಿಗರು): ಆರ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ (5 ಕ್ರಿಕೆಟಿಗರು): ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ (15 ಕ್ರಿಕೆಟಿಗರು): ರಿಂಕು ಸಿಂಗ್ (ಹೊಸ ಸೇರ್ಪಡೆ), ತಿಲಕ್ ವರ್ಮಾ (ಹೊಸ ಸೇರ್ಪಡೆ), ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟೀದಾರ್ (ಹೊಸ ಸೇರ್ಪಡೆ).
ಸರ್ಫರಾಜ್-ಧ್ರುವ್ ಜುರೆಲ್ಗೂ ಅವಕಾಶ
ಹೆಚ್ಚುವರಿಯಾಗಿ ನಿಗದಿತ ಅವಧಿಯೊಳಗೆ ಕನಿಷ್ಠ 3 ಟೆಸ್ಟ್‌ಗಳು ಅಥವಾ 8 ಏಕದಿನಗಳು ಅಥವಾ 10 ಟಿ20ಐ ಆಡುವ ಮಾನದಂಡದ ಆಧಾರದ ಮೇಲೆ ಕ್ರೀಡಾಪಟುಗಳನ್ನು ಸ್ವಯಂಚಾಲಿತವಾಗಿ ಅನುಪಾತದ ಆಧಾರದ ಮೇಲೆ ಗ್ರೇಡ್ ಸಿಗೆ ಸೇರಿಸಲಾಗುತ್ತದೆ.
ಉದಾಹರಣೆಗೆ ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ಅವರು ಇಲ್ಲಿಯವರೆಗೆ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದರೆ ಗ್ರೇಡ್ ಸಿಗೆ ಸೇರ್ಪಡೆಗೊಳ್ಳುತ್ತಾರೆ, ಅಂದರೆ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯ 5ನೇ ಟೆಸ್ಟ್ ಪಂದ್ಯ.
ಅಯ್ಯರ್-ಇಶಾನ್ ಔಟ್
ರಣಜಿ ಆಡದೆ ಹಿಂದೆ ಸರಿದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಈ ಸುತ್ತಿನ ಶಿಫಾರಸುಗಳಲ್ಲಿ ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ. ಬಿಸಿಸಿಐ, ಸೆಲೆಕ್ಟರ್ಸ್, ರಾಹುಲ್ ದ್ರಾವಿಡ್ ಎಚ್ಚರಿಸಿದ್ದರೂ ರಣಜಿ ಆಡಲು ನಿರಾಕರಿಸಿದ್ದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರಣಜಿ ಆಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.
ಆಯ್ಕೆ ಸಮಿತಿಯು ಈ ಅಥ್ಲೀಟ್‌ಗಳಿಗೆ ವೇಗದ ಬೌಲಿಂಗ್ ಒಪ್ಪಂದಗಳನ್ನು ಶಿಫಾರಸು ಮಾಡಿದೆ - ಆಕಾಶ್ ದೀಪ್, ವಿಜಯ್‌ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ. ಎಲ್ಲಾ ಕ್ರೀಡಾಪಟುಗಳು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅವಧಿಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಆದ್ಯತೆ ನೀಡಬೇಕು ಎಂದು ಬಿಸಿಸಿಐ ಶಿಫಾರಸು ಮಾಡಿದೆ.