ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ನ್ಯೂಜಿಲೆಂಡ್ ಸರಣಿಗೆ ಭಾರತ ತಂಡ ಪ್ರಕಟ; ಪರೀಕ್ಷೆ ಕಾರಣ ಸ್ಟಾರ್ ಆಟಗಾರ್ತಿ ಅಲಭ್ಯ
India Women Squad: ಅಕ್ಟೋಬರ್ 26ರಿಂದ ಶುರುವಾಗುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಬಲಿಷ್ಠ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಲೀಗ್ನಿಂದಲೇ ಹೊರಬಿದ್ದ ಭಾರತ ತಂಡ, ಇದೀಗ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದೆ. ಈ ಸರಣಿಗೆ ಬಿಸಿಸಿಐ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಸಲ ನಾಲ್ವರು ಹೊಸಬರು ತಂಡಕ್ಕೆ ಸೇರ್ಪಡೆಯಾಗಿದ್ದು, ಪೂಜಾ ವಸ್ತ್ರಕರ್, ಆಶಾ ಶೋಭಾನಾ ಸ್ಥಾನ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, ಟಿ20 ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆ ನಾಯಕತ್ವದಿಂದ ವಜಗೊಳಿಸಲಾಗಿದೆ ಎಂಬ ವರದಿಗಳ ನಡುವೆ ಹರ್ಮನ್‌ಪ್ರೀತ್ ಕೌರ್ಗೆ ಪಟ್ಟ ಕಟ್ಟಲಾಗಿದೆ.
ಅಕ್ಟೋಬರ್ 24ರಿಂದ ಸರಣಿ ಆರಂಭವಾಗಲಿದ್ದು, ಅಕ್ಟೋಬರ್ 17ರ ಗುರುವಾರ 16 ಸದಸ್ಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಯುವ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅವರಿಗೆ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿರುವ ಕಾರಣ ಸರಣಿ ತಪ್ಪಿಸಿಕೊಂಡಿದ್ದಾರೆ. ಪೂಜಾ ವಸ್ತ್ರಾಕರ್‌ಗೆ ವಿಶ್ರಾಂತಿ ನೀಡಲಾಗಿದೆ. ಆಶಾ ಶೋಭನಾ ಅವರು ಪ್ರಸ್ತುತ ಗಾಯದಿಂದ ಬಳಲುತ್ತಿದ್ದು, ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಬಹಿರಂಗಪಡಿಸಿದೆ. ಟಿ20 ವಿಶ್ವಕಪ್ ಅಭಿಯಾನದಲ್ಲಿ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ.
ತೇಜಲ್ ಹಸಾಬ್ನಿಸ್, ಸೈಮಾ ಠಾಕೋರ್, ಪ್ರಿಯಾ ಮಿಶ್ರಾ ಮತ್ತು ಸಯಾಲಿ ಸತ್ಗರೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದು, ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇವರ ಜೊತೆಗೆ ವಿಕೆಟ್ ಕೀಪರ್ ಉಮಾ ಚೆಟ್ರಿ ಮತ್ತು ವೇಗಿ ಆಲ್ ರೌಂಡರ್ ಅರುಂಧತಿ ರೆಡ್ಡಿ ಅವರು ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಪೈಪೋಟಿಯಲ್ಲಿದ್ದಾರೆ. ಅಹಮದಾಬಾದ್‌ನಲ್ಲಿ ಪ್ರಾರಂಭವಾಗುವ 3 ಏಕದಿನಗಳಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಈ ಸರಣಿಯಲ್ಲಿ ಗೆದ್ದು ಟಿ20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ಮಹಿಳಾ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕ), ಸ್ಮೃತಿ ಮಂಧಾನ (ಉಪನಾಯಕ), ಶಫಾಲಿ ವರ್ಮಾ, ದಯಾಲನ್ ಹೇಮಲತಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸಯಾಲಿ ಸತ್ಗರೆ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ತೇಜಲ್ ಹಸಾಬ್ನಿ ಠಾಕೂರ್, ಪ್ರಿಯಾ ಮಿಶ್ರಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್.
ಭಾರತ vs ನ್ಯೂಜಿಲೆಂಡ್ ಏಕದಿನ ಸರಣಿಯ ಪಂದ್ಯಗಳು
- ಮೊದಲ ಏಕದಿನ - ಅಕ್ಟೋಬರ್ 24, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ
- ಎರಡನೇ ಏಕದಿನ - ಅಕ್ಟೋಬರ್ 27, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ
- ಮೂರನೇ ಏಕದಿನ - ಅಕ್ಟೋಬರ್ 29, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ
ಇದನ್ನೂ ಓದಿ: ಅಪಘಾತಕ್ಕೊಳಗಾಗಿದ್ದ ರಿಷಭ್ ಪಂತ್ ಬಲ ಮೊಣಕಾಲಿಗೆ ಗಂಭೀರ ಗಾಯ; ಮೈದಾನ ತೊರೆದ ವಿಕೆಟ್ ಕೀಪರ್, ಭಾರತಕ್ಕೆ ಗಾಯದ ಮೇಲೆ ಬರೆ