ನಿಯಮ ಸಡಿಲಿಸಿದ ಬಿಸಿಸಿಐ; ಚಾಂಪಿಯನ್ಸ್ ಟ್ರೋಫಿಯಲ್ಲಿ ಆಟಗಾರರು ಪತ್ನಿಯರ ಜತೆಗಿರಲು ಅವಕಾಶ, ಆದರೆ ಕಂಡೀಷನ್ ಅಪ್ಲೈ
ICC Champions Trophy 2025: ಪತ್ನಿ, ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವಂತಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದ ಬಿಸಿಸಿಐ ಈಗ ನಿಯಮ ಸಡಿಲಿಸಿದೆ. ಜೊತೆಗೆ ಷರತ್ತನ್ನೂ ವಿಧಿಸಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy) ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ (Team India) ಸೋಲಿನ ನಂತರ ವಿಧಿಸಿದ್ದ ಕಟ್ಟುನಿಟ್ಟಿನ 10 ನಿಯಮಗಳ ಪೈಕಿ ಒಂದನ್ನು ಬಿಸಿಸಿಐ (BCCI) ಸಡಿಲಗೊಳಿಸಿದೆ. ಈ ನಿಯಮಗಳನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೇ ಜಾರಿಗೆ ತಂದಿರುವ ಬಿಸಿಸಿಐ ಹಿರಿಯ ಆಟಗಾರರ ಮನವಿ ಪುನರ್ಪರಿಶೀಲಿಸಿ ನಿಯಮ ಸಡಿಸಿಲಿದೆ. ಪತ್ನಿ, ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ಯುವಂತಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದ ಬಿಸಿಸಿಐ ಇದೀಗ ತನ್ನ ಮಾತಿನಿಂದ ಹಿಂದೆ ಸರಿದಿದೆ. ಅವಕಾಶ ನೀಡುವುದರ ಜೊತೆಗೆ ಷರತ್ತೊಂದನ್ನು ವಿಧಿಸಿದೆ. ಆದರೆ ಈ ಬದಲಾವಣೆಗೆ ಕಾರಣ ಏನೆಂಬುದು ಬೆಳಕಿಗೆ ಬಂದಿಲ್ಲ.
ಸಡಿಲಿಕೆ ಮಾಡುವುದಕ್ಕೂ ಮುನ್ನ ಹೇಳಿದ್ದೇನು?
ನಿಯಮದ ಪ್ರಕಾರ, ಚಾಂಪಿಯನ್ಸ್ ಟ್ರೋಫಿಗೆ ದುಬೈನಲ್ಲಿ ಭಾರತದ ಆಟಗಾರರೊಂದಿಗೆ ಕುಟುಂಬಗಳು ಹೋಗುವಂತಿಲ್ಲ. 45 ದಿನಗಳು ಅಥವಾ ಅದಕ್ಕಿಂತ ಹೆಚ್ಚು ದಿನಗಳ ವಿದೇಶಿ ಪ್ರವಾಸ ಕೈಗೊಂಡರೆ ಕೈಗೊಂಡರೆ ಪತ್ನಿ, ಮಕ್ಕಳು, ಕುಟುಂಬ ಸದಸ್ಯರು, ಬಾಣಸಿಗ, ವೈಯಕ್ತಿಕ ಸಿಬ್ಬಂದಿಯನ್ನು 2 ವಾರಗಳ ಕಾಲ ತಮ್ಮೊಂದಿಗಿರಿಸಿಕೊಳ್ಳಲು ಅವಕಾಶವಿತ್ತು. ಅದಕ್ಕಿಂತ ಕಡಿಮೆ ಅವಧಿಯ ಪ್ರವಾಸಕ್ಕೆ ಕುಟುಂಬಗಳಿಗೆ ಅವಕಾಶ ಇಲ್ಲ ಎಂದು ಈ ನಿಯಮ ಹೇಳಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದರೂ ಇಡೀ ಟೂರ್ನಿ ನಡೆಯುವ ಅವಧಿ 3 ವಾರಗಳಷ್ಟೆ. ಆದ್ದರಿಂದ ಬಿಸಿಸಿಐ ಪ್ರವಾಸದಲ್ಲಿ ಆಟಗಾರರೊಂದಿಗೆ ಕುಟುಂಬ ಕರೆದೊಯ್ಯಲು ಅನುಮತಿಸಿರಲಿಲ್ಲ.
ಪ್ರಸ್ತುತ ಹೇಳುತ್ತಿರುವುದೇನು ಬಿಸಿಸಿಐ?
ಆದರೀಗ ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಈ ಟೂರ್ನಿಯಲ್ಲಿ ಪಂದ್ಯವೊಂದಕ್ಕೆ ಪತ್ನಿ, ಮಕ್ಕಳನ್ನು ಕರೆದುಕೊಂಡು ಹೋಗಲು ಅವಕಾಶ ನೀಡಿದೆ. ಈ ಬಗ್ಗೆ ದೈನಿಕ್ ಜಾಗರಣ್ ವರದಿ ಮಾಡಿದೆ. ಇತ್ತೀಚೆಗೆ ತಂಡದ ಹಿರಿಯ ಆಟಗಾರರು ಪತ್ನಿಯರ ಜೊತೆಗಿರಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಮೊದಲು ಈ ಮನವಿ ತಿರಸ್ಕರಿಸಿದ್ದ ಬಿಸಿಸಿಐ ಈಗ ಯೂ-ಟರ್ನ್ ಹೊಡೆದಿದೆ. ಚಾಂಪಿಯನ್ಸ್ ಟ್ರೋಫಿ ಸಲುವಾಗಿ ಒಂದು ಪಂದ್ಯಕ್ಕಷ್ಟೆ ಕುಟುಂಬ ಸದಸ್ಯರನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಅವಕಾಶ ನೀಡಲಾಗಿದ್ದು, ಅನುಮತಿ ಕೋರಿ ಪತ್ರ ಬರೆಯುವಂತೆ ಆಟಗಾರರಿಗೆ ತಿಳಿಸಲಾಗಿದೆ. ಆದರೆ ಈ ದಿಢೀರ್ ನಿರ್ಧಾರಕ್ಕೆ ಕಾರಣ ಏನೆಂಬುದು ಇನ್ನಷ್ಟೆ ಹೊರಬರಬೇಕಿದೆ.
ಮಾಹಿತಿ ನೀಡಿದ ಬಿಸಿಸಿಐ
ಮೂಲವೊಂದು ದೈನಿಕ್ ಜಾಗರಣ್ ಗೆ ಮಾಹಿತಿ ನೀಡಿದ್ದು, ‘ತಂಡದ ನಿರ್ವಹಣೆಯ ಉನ್ನತ ಅಧಿಕಾರಿಯೊಬ್ಬರು ದುಬೈಗೆ ಹೋಗುವ ಮೊದಲು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರೊಂದಿಗೆ ಮಾತನಾಡಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಆಟಗಾರನು ಈಗ ತನ್ನ ಕುಟುಂಬವನ್ನು ಒಂದು ಪಂದ್ಯಕ್ಕಾಗಿ ಕರೆದೊಯ್ಯಬಹುದು. ಆಟಗಾರರು ಈಗ ಬಿಸಿಸಿಐನ ಅನುಮತಿ ಪಡೆಯಬೇಕು. ತಂಡದ ಆಡಳಿತವು ಮಂಡಳಿಗೆ ಪಟ್ಟಿಯನ್ನು ಸಲ್ಲಿಸುವ ನಿರೀಕ್ಷೆಯಿದೆ’ ಎಂದು ವರದಿ ತಿಳಿಸಿದೆ.
ಈ ನಿರ್ಧಾರಕ್ಕೂ ಮೊದಲೇ ಆಟಗಾರರು ದುಬೈ ಪ್ರಯಾಣಿಸಿದ ಕಾರಣ ಯಾರೊಬ್ಬರು ಸಹ ತಮ್ಮ ಕುಟುಂಬವನ್ನು ಕರೆದುಕೊಂಡು ಹೋಗಿಲ್ಲ ಎಂದು ಇದೇ ಮೂಲಗಳು ತಿಳಿಸಿವೆ. ತಮ್ಮ ಕುಟುಂಬವು ಅವರೊಂದಿಗೆ ಪಂದ್ಯಕ್ಕೆ ಹೋಗುತ್ತದೆಯೇ ಎಂದು ಆಯ್ಕೆ ಮಾಡುವುದು ಆಟಗಾರನಿಗೆ ಬಿಟ್ಟದ್ದು ಎಂದು ಹೇಳಿದೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ಫೆ 20) ಬಾಂಗ್ಲಾದೇಶ ವಿರುದ್ಧ ಭಾರತ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ನಂತರ ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೆಣಸಾಣ ನಡೆಸಲಿದೆ.
