ಬಿಸಿಸಿಐನಲ್ಲಿ ಹೆಚ್ಚುತ್ತಿದೆ ಬದಲಾವಣೆಯ ಹೊಗೆ; ‘ಎ’ ಪ್ಲಸ್ ದರ್ಜೆಯಿಂದ ರೋಹಿತ್, ಕೊಹ್ಲಿ ಔಟ್? ಜಡೇಜಾಗೂ ಹಿಂಬಡ್ತಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಬದಲಾವಣೆಯ ಹೊಗೆ ಏರುತ್ತಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಕೇಂದ್ರ ಒಪ್ಪಂದಗಳ ಹಿಂಬಡ್ತಿ ಪಡೆಯುವ ಸಾಧ್ಯತೆ ಇದೆ.

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪುರುಷರ ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರು ಟಿ20ಐ ಕ್ರಿಕೆಟ್ನಿಂದ ನಿವೃತ್ತರಾದ ಕಾರಣ ವಾರ್ಷಿಕ ಒಪ್ಪಂದದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಇದೆ. ಕೊಹ್ಲಿ ಮತ್ತು ರೋಹಿತ್ ಎ-ಪ್ಲಸ್ ದರ್ಜೆಯನ್ನು ಕಳೆದುಕೊಳ್ಳಬಹುದು ಎನ್ನಲಾಗಿದೆ.
ಮಾರ್ಚ್ 24ರ ಸೋಮವಾರ ಎ, ಬಿ, ಸಿ ದರ್ಜೆಯಲ್ಲಿ 16 ಮಹಿಳಾ ಆಟಗಾರ್ತಿಯರಿರುವ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಶೀಘ್ರದಲ್ಲೇ ಪುರುಷರ ವಾರ್ಷಿಕ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಕಳೆದ ಬಾರಿ ಪುರುಷರ ಪಟ್ಟಿಯಲ್ಲಿ 30 ಹೆಸರುಗಳಿದ್ದವು. ಆದರೆ ಈ ಪಟ್ಟಿಯಲ್ಲಿ ಕೆಲವು ಹೆಸರು ಮಾಯವಾಗಬಹುದು, ಅದೇ ರೀತಿ ಕೆಲವು ಹೆಸರು ಪಟ್ಟಿಯಲ್ಲಿ ಅವಕಾಶ ಪಡೆದುಕೊಳ್ಳುವ ನಿರೀಕ್ಷೆಯೂ ಇದೆ.
ರಾಷ್ಟ್ರೀಯ ಆಯ್ಕೆ ಸಮಿತಿಯು ಮುಖ್ಯ ಕೋಚ್ ಮತ್ತು ಕಾರ್ಯದರ್ಶಿ (ದೇವಜಿತ್ ಸೈಕಿಯಾ) ಅವರೊಂದಿಗೆ ಸಮಾಲೋಚಿಸಿ ಕೇಂದ್ರ ಒಪ್ಪಂದಗಳನ್ನು ರೂಪಿಸುತ್ತದೆ. ಇದನ್ನು ಅನುಮೋದನೆಗಾಗಿ ಅಪೆಕ್ಸ್ ಕೌನ್ಸಿಲ್ ಮುಂದೆ ಇಡಲಾಗುತ್ತದೆ. ಎ ಪ್ಲಸ್ ವಿಭಾಗದಲ್ಲಿ ಕೊಹ್ಲಿ, ರೋಹಿತ್, ಜಡೇಜಾ ಉಳಿಸಿಕೊಳ್ಳುವ ವಿಷಯದಲ್ಲಿ ಎಲ್ಲಾ ಪಾಲುದಾರರು ಒಮ್ಮತದಿಂದಿಲ್ಲ ಎಂದು ತಿಳಿದುಬಂದಿದೆ. ಈ ವಿಭಾಗದಲ್ಲಿ ಎಲ್ಲಾ 3 ಸ್ವರೂಪಗಳ ತಂಡದಲ್ಲಿ ಸ್ಥಾನ ಬಹುತೇಕ ಖಚಿತವಾಗಿದೆ.
ಕೊಹ್ಲಿ, ರೋಹಿತ್, ಜಡೇಜಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದು, ಈಗ ಎರಡು ಸ್ವರೂಪದ ಆಟಗಾರರಾಗಿದ್ದಾರೆ. ಬುಮ್ರಾ ಮಾತ್ರ ಎಲ್ಲಾ 3 ಸ್ವರೂಪಗಳಲ್ಲಿ ಸ್ವಯಂಚಾಲಿತ ಸ್ಥಾನಕ್ಕಾಗಿ ಸ್ಪರ್ಧಿಯಾಗಿದ್ದಾರೆ. ಆದಾಗ್ಯೂ, ಕೊಹ್ಲಿ-ರೋಹಿತ್ ಅವರು ಬಿಸಿಸಿಐನ ಪ್ರಭಾವಿ ವಿಭಾಗವು ಎ ಪ್ಲಸ್ ವಿಭಾಗದಲ್ಲಿ ಮುಂದುವರೆಸಬೇಕು ಎಂದು ಬಯಸುತ್ತದೆ. ರವಿಚಂದ್ರನ್ ಅಶ್ವಿನ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ಅವರು ವಾರ್ಷಿಕ ಒಪ್ಪಂದದಿಂದ ಹೊರಬಿದ್ದಿದ್ದಾರೆ.
ಅಕ್ಷರ್ಗೆ ಬಡ್ತಿ ನಿರೀಕ್ಷೆ
ಇಂಗ್ಲೆಂಡ್ ಟಿ20ಐ ಸರಣಿಗೆ ಉಪನಾಯಕನಾಗಿ ಹೆಸರಿಸಲ್ಪಟ್ಟ ಅಕ್ಷರ್ ಪಟೇಲ್ಗೆ ಬಿ ವರ್ಗದಿಂದ ಎ ವರ್ಗಕ್ಕೆ ಬಡ್ತಿ ಸಿಗುವ ಸಾಧ್ಯತೆ ಇದೆ. ಅಕ್ಷರ್ ಟೆಸ್ಟ್, ಏಕದಿನ, ಟಿ20ಐ ತಂಡಗಳ ನಿಯಮಿತ ಸದಸ್ಯರಾಗಿದ್ದಾರೆ. ಕಳೆದ ಋತುವಿನಲ್ಲಿ ಕೈಬಿಡಲ್ಪಟ್ಟಿದ್ದ ಶ್ರೇಯಸ್ ಅಯ್ಯರ್ ಈ ವರ್ಗಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಆವೃತ್ತಿಯಲ್ಲಿ 11 ಒಡಿಐ ಆಡಿದ್ದಾರೆ. ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಒಬ್ಬ ಆಟಗಾರ ಕ್ಯಾಲೆಂಡರ್ ವರ್ಷದಲ್ಲಿ 3 ಟೆಸ್ಟ್ ಅಥವಾ 8 ಏಕದಿನ ಅಥವಾ 10 ಟಿ20 ಆಡಬೇಕಾಗುತ್ತದೆ.
ಯುವ ಯಶಸ್ವಿ ಜೈಸ್ವಾಲ್ ತಮ್ಮ ವರ್ಗದಿಂದ ಬಡ್ತಿ ಪಡೆಯುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ. ಅವರು ಎಲ್ಲಾ ಸ್ವರೂಪಗಳಲ್ಲಿ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಬಂಗಾಳದ ಯುವ ವೇಗದ ಬೌಲರ್ ಆಕಾಶ್ ದೀಪ್ (7 ಟೆಸ್ಟ್), ಸರ್ಫರಾಜ್ ಖಾನ್ (3 ಟೆಸ್ಟ್) ಮತ್ತು ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ (5 ಟೆಸ್ಟ್ ಮತ್ತು 4 ಟಿ20ಐ ಪಂದ್ಯಗಳು) ಹೊಸ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಜ್ಜಾಗಿದ್ದಾರೆ. ಶಾರ್ದೂಲ್ ಠಾಕೂರ್, ಋತುರಾಜ್ ಗಾಯಕ್ವಾಡ್ರನ್ನು ಕೈಬಿಡಬಹುದು. ಏಕೆಂದರೆ ಈ ಇಬ್ಬರು ಕ್ಯಾಲೆಂಡರ್ ವರ್ಷದಲ್ಲಿ ಪಂದ್ಯಗಳನ್ನು ಆಡಿಲ್ಲ.
ಯಾವ ದರ್ಜೆಗೆಷ್ಟು ವೇತನ?
ಎ ಪ್ಲಸ್ ವಿಭಾಗದಲ್ಲಿ ಸ್ಥಾನ ಪಡೆಯುವ ಶುಲ್ಕ 7 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಎ ವಿಭಾಗದಲ್ಲಿ 5 ಕೋಟಿ, 'ಬಿ' ದರ್ಜೆ ಆಟಗಾರರಿಗೆ 3 ಕೋಟಿ, 'ಸಿ' ದರ್ಜೆ ಆಟಗಾರರಿಗೆ 1 ಕೋಟಿ ವೇತನ ನೀಡಲಾಗುವುದು.
