ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ, ಎ+ ಗ್ರೇಡ್ಗೆ ಮತ್ತೊಬ್ಬ ಸೇರ್ಪಡೆ; ಕಳ್ಕೊಂಡಿದ್ದ ಸ್ಥಾನ ಮರಳಿದ ಪಡೆದ ಅಯ್ಯರ್-ಇಶಾನ್
2024-25ರ ಋತುವಿಗೆ ವಾರ್ಷಿಕ ಕೇಂದ್ರ ಒಪ್ಪಂದಗಳನ್ನು ಬಿಸಿಸಿಐ ಪ್ರಕಟಿಸಿದ್ದು, ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಜೊತೆಗೆ ರವೀಂದ್ರ ಜಡೇಜಾ ಅವರನ್ನು ಎ+ ವಿಭಾಗದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಮವಾರ 2024-25ರ ಋತುವಿನ ಪುರುಷರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಅವರ ಜೊತೆಗೆ ಗ್ರೇಡ್ ‘ಎ+’ ವಿಭಾಗದಲ್ಲಿ ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ನಿರೀಕ್ಷೆಯಂತೆ ಶ್ರೇಯಸ್ ಅಯ್ಯರ್ ಮತ್ತು ಅಚ್ಚರಿಯಂತೆ ಇಶಾನ್ ಕಿಶನ್ ಕೇಂದ್ರ ಗುತ್ತಿಗೆ ಪಟ್ಟಿಗೆ ಮರಳಿದ್ದಾರೆ.
ಶ್ರೇಯಸ್ ಅಯ್ಯರ್ ‘ಬಿ’ ವಿಭಾಗದಲ್ಲಿದ್ದರೆ, ಇಶಾನ್ ಕಿಶನ್ ‘ಸಿ’ ವಿಭಾಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಬಿಸಿಸಿಐ ನಿಯಮಗಳನ್ನು ಗಾಳಿಗೆ ತೂರಿದ್ದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ತಮ್ಮ ಕೇಂದ್ರ ಒಪ್ಪಂದಗಳನ್ನು ಕಳೆದುಕೊಂಡಿದ್ದರು. ರಣಜಿ ಆಡುವಂತೆ ಸೂಚಿಸಿದ್ದರೂ ನಿರ್ಲಕ್ಷ್ಯ ತೋರಿದ್ದ ಇಬ್ಬರ ವಿರುದ್ಧವೂ ಬಿಸಿಸಿಐ ಕ್ರಮ ಕೈಗೊಂಡಿತ್ತು. ಬಿಸಿಸಿಐ ವಾರ್ಷಿಕ ಒಪ್ಪಂದದಿಂದ ಇಬ್ಬರನ್ನೂ ಕೈಬಿಟ್ಟಿತ್ತು. ಬಳಿಕ ಅಯ್ಯರ್ ರಣಜಿಗೆ ಮರಳಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಇಶಾನ್ ಕ್ಯಾರೆ ಎನ್ನಲಿಲ್ಲ.
ಗಾಯದ ಕಾರಣದಿಂದ ಶ್ರೇಯಸ್ ಅಯ್ಯರ್ 2024ರ ಫೆಬ್ರವರಿಯಲ್ಲಿ ರಣಜಿ ಟ್ರೋಫಿ ಪಂದ್ಯಕ್ಕೆ ಹಾಜರಾಗಿರಲಿಲ್ಲ. ಆದರೆ ಇಶಾನ್ ಕಿಶನ್ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಸಣ್ಣ ವಿರಾಮ ತೆಗೆದುಕೊಂಡ ನಂತರ ಜಾರ್ಖಂಡ್ ಪರ ರಣಜಿಯಿಂದ ಹೊರಗುಳಿದಿದ್ದರು. ಬಿಸಿಸಿಐ ನೀತಿಯ ಪ್ರಕಾರ, ನಿಗದಿತ ಅವಧಿಯೊಳಗೆ ಕನಿಷ್ಠ 3 ಟೆಸ್ಟ್ ಅಥವಾ ಎಂಟು ಏಕದಿನ ಅಥವಾ 10 ಟಿ20 ಪಂದ್ಯಗಳನ್ನು ಆಡುವ ಮಾನದಂಡಗಳನ್ನು ಪೂರೈಸುವ ಕ್ರಿಕೆಟಿಗರನ್ನು ಸ್ವಯಂಚಾಲಿತವಾಗಿ ಗ್ರೇಡ್ ‘ಸಿ’ಗೆ ಸೇರಿಸಲಾಗುತ್ತದೆ.
ಯಾರಿಗೆಷ್ಟು ವೇತನ?
ಬಿಸಿಸಿಐ ‘ಎ+’ ದರ್ಜೆ ಆಟಗಾರರಿಗೆ ವಾರ್ಷಿಕ 7 ಕೋಟಿ ರೂಪಾಯಿ, ‘ಎ’ ದರ್ಜೆ ಆಟಗಾರರಿಗೆ 5 ಕೋಟಿ ರೂಪಾಯಿ, ‘ಬಿ’ ದರ್ಜೆ ಕ್ರಿಕೆಟಿಗರಿಗೆ 3 ಕೋಟಿ ರೂಪಾಯಿ, ‘ಸಿ’ ದರ್ಜೆ ಕ್ರಿಕೆಟಿಗರಿಗೆ ತಲಾ 1 ಕೋಟಿ ರೂಪಾಯಿ ವೇತನ ಸಿಗಲಿದೆ. ಒಟ್ಟು 34 ಆಟಗಾರರು ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯಲ್ಲಿ ವೀರೋಚಿತ ಪ್ರದರ್ಶನ ನೀಡಿದ ನಂತರ ವರುಣ್ ಚಕ್ರವರ್ತಿ ಬಿಸಿಸಿಐನ ಕೇಂದ್ರ ಗುತ್ತಿಗೆ ಪಟ್ಟಿಗೆ ಹೊಸದಾಗಿ ಪ್ರವೇಶಿಸಿದ್ದಾರೆ. 2024ರ ಡಿಸೆಂಬರ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿಲ್ಲ. ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ಅಭಿಷೇಕ್ ಶರ್ಮಾ ಕೂಡ ತಮ್ಮ ಮೊದಲ ಬಿಸಿಸಿಐ ಕೇಂದ್ರ ಗುತ್ತಿಗೆ ಪಡೆದಿದ್ದಾರೆ.
ಯಾವ ಗ್ರೇಡ್ನಲ್ಲಿ ಯಾರಿದ್ದಾರೆ?
ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಗ್ರೇಡ್ ‘ಬಿ’ ವಿಭಾಗದಲ್ಲಿದ್ದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗ್ರೇಡ್ ‘ಎ’ ವಿಭಾಗದಲ್ಲಿದ್ದರೆ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಗ್ರೇಡ್ ‘ಎ’ ನಲ್ಲಿದ್ದಾರೆ. ಇದಕ್ಕೂ ಮುನ್ನ ಪಂತ್ ಬಿ ಗ್ರೇಡ್ನಲ್ಲಿದ್ದರು.
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಆಲ್ರೌಂಡರ್ ಅಕ್ಷರ್ ಪಟೇಲ್ ಗ್ರೇಡ್ ‘ಬಿ’ ವಿಭಾಗದಲ್ಲಿದ್ದಾರೆ. ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅರ್ಷದೀಪ್ ಸಿಂಗ್ ಮತ್ತು ಋತುರಾಜ್ ಗಾಯಕ್ವಾಡ್ ಗ್ರೇಡ್ ‘ಸಿ’ ಪಟ್ಟಿಯಲ್ಲಿದ್ದಾರೆ.
ಗ್ರೇಡ್ ಎ+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ
ಗ್ರೇಡ್ ಎ: ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ರಿಷಭ್ ಪಂತ್
ಗ್ರೇಡ್ ಬಿ: ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್
ಗ್ರೇಡ್ ಸಿ: ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟೀದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.