T20 World Cup: ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ಆಯ್ಕೆ ಕುರಿತು ಅಜಿತ್ ಅಗರ್ಕರ್ ಮಹತ್ವದ ಸುಳಿವು
Ajit Agarkar on Virat Kohli: ಮುಂಬರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಸಜ್ಜಾಗಿದೆ. ಈ ನಡುವೆ ಆರ್‌ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಕುರಿತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮಾತನಾಡಿದ್ದಾರೆ.
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಆಡ್ತಾರಾ? ಅಥವಾ ಇಲ್ವಾ? ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳ ಉದ್ದಗಲಕ್ಕೂ ಸುಳಿಯುತ್ತಿವೆ. ಚುಟುಕು ವಿಶ್ವಸಮರದಲ್ಲಿ ಆರ್‌ಸಿಬಿ ಆಟಗಾರನ ಭಾಗವಹಿಸುವಿಕೆ ಸದ್ಯ ಜಾಗತಿಕ ಕ್ರಿಕೆಟ್‌ನಲ್ಲಿ ಹೆಚ್ಚು ಸುದ್ದಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಕೊಹ್ಲಿ ಒಂದೇ ಒಂದು ಐಸಿಸಿ ಟೂರ್ನಮೆಂಟ್ ಕೂಡಾ ಮಿಸ್ ಮಾಡಿಕೊಂಡಿಲ್ಲ. ಅಂತಹದರಲ್ಲಿ ಈ ಬಾರಿ ಜೂನ್ 1ರಿಂದ ಆರಂಭವಾಗುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್‌ಗೆ ಸ್ಥಾನ ನೀಡುವುದು ಇನ್ನೂ ಗೊಂದಲಮಯವಾಗಿದೆ. ಸದ್ಯ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಮಾಜಿ ನಾಯಕ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುವುದು ಖಚಿತವಾಗಿದೆ. 2022ರ ನವೆಂಬರ್ ತಿಂಗಳ ಬಳಿಕ ಭಾರತದ ಪರ ಕೇವಲ ಎರಡು ಟಿ20 ಪಂದ್ಯಗಳಲ್ಲಿ ಆಡಿದ್ದರೂ, ವಿರಾಟ್ ಫಾರ್ಮ್ ಮಾತ್ರ ಇನ್ನೂ ಬಲಿಷ್ಠವಾಗಿದೆ.
ಸದ್ಯ ಐಪಿಎಲ್ ಪಂದ್ಯಾವಳಿ ನಡೆಯುತ್ತಿದ್ದು, ಆರ್‌ಸಿಬಿ ತಂಡದ ಪರ ಕೊಹ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ, ಟಿ20 ವಿಶ್ವಕಪ್ ಆರಂಭವಾಗಲಿದೆ. ಇದಕ್ಕಾಗಿ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಭಾರತದ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ.
ಮಹತ್ವದ ಟೂರ್ನಿಯಲ್ಲಿ ಆಡಲು ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ಗೆ ಕೊಹ್ಲಿ ಪ್ರಯಾಣಿಸಲ್ಲ ಎಂಬ ಕುರಿತು ಸಾಕಷ್ಟು ವರದಿಗಳಿವೆ. ಈ ನಡುವೆ, ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನೀಡಿರುವ ಹೇಳಿಕೆಯು, ವಿರಾಟ್ ಅಭಿಮಾನಿಗಳಿಗೆ ತುಸು ಸಮಾಧಾನ ತಂದಿದೆ. ಭಾರತದ ಮಾಜಿ ಆಲ್‌ರೌಂಡರ್ ಅಗರ್ಕರ್, ಕೊಹ್ಲಿಯ ಫಿಟ್‌ನೆಸ್ ಮತ್ತು ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ರೂಪಿಸುವಲ್ಲಿ ಅದು ವಹಿಸಿದ ಮಹತ್ವದ ಪಾತ್ರವನ್ನು ಶ್ಲಾಘಿಸಿದ್ದಾರೆ. ಸ್ಪೋರ್ಟಿಫೈ ವಿದ್ PRG ಪಾಡ್‌ಕ್ಯಾಸ್ಟ್‌ನೊಂದಿಗೆ ಹೇಳಿದ್ದಾರೆ.
ಫಿಟ್‌ನೆಟ್ ವಿಚಾರದಲ್ಲಿ ಕೊಹ್ಲಿಗೆ ಸರಿಸಾಟಿ ಯಾರೂ ಇಲ್ಲ
“ವಿರಾಟ್ ಕೊಹ್ಲಿ ಅವರನ್ನು ನೋಡಿ. ಫಿಟ್‌ನೆಸ್ ವಿಚಾರದಲ್ಲಿ ಹೊಸ ಮಾನದಂಡವನ್ನು ನಿಗದಿಪಡಿಸಿದ ವ್ಯಕ್ತಿಗಳಲ್ಲಿ ಅವರು ಪ್ರಮುಖರು. ಅವರ ವೃತ್ತಿಜೀವನದ 10-15 ವರ್ಷಗಳಲ್ಲಿ ಅವರೊಬ್ಬರೇ ಫಿಟ್ ಆಗಿದ್ದಾರೆ. ಆ ಫಲಿತಾಂಶ ಕಣ್ಣಮುಂದೆ ಇದೆ” ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ಸೂರ್ಯ, ರಿಂಕು ಜೊತೆ ಸಿಎಸ್‌ಕೆ ಸ್ಟಾರ್ ಬೇಕೆಂದ ಮಾಜಿ ಕ್ರಿಕೆಟಿಗ; ಹಾರ್ದಿಕ್ ಪಾಂಡ್ಯ ಹೆಸರೇ ಇಲ್ಲ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಕೊಹ್ಲಿ, ಈವರೆಗೆ ಆಡಿರುವ ಐದು ಪಂದ್ಯಗಳಿಂದ 105ರ ಸರಾಸರಿಯೊಂದಿಗೆ ಬ್ಯಾಟ್ ಬೀಸಿದ್ದಾರೆ. 146ರ ಸ್ಟ್ರೈಕ್ ರೇಟ್‌ನಲ್ಲಿ ಆಡಿರುವ ವಿರಾಟ್, 316 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಜೇಯ 113 ರನ್ ಗಳಿಸುವ ಮೂಲಕ ಈ ಋತುವಿನ ಮೊದಲ ಶತಕವನ್ನು ತಮ್ಮ ಖಾತೆಗೆ ಹಾಕಿಕೊಂಡರು.