ಕನ್ನಡ ಸುದ್ದಿ  /  Cricket  /  Bcci Considering Restoring Shreyas Iyers Annual Central Contract After Ranji Trophy Final Heroics Ishan Kishan Prs

ವಾರ್ಷಿಕ ಗುತ್ತಿಗೆಗೆ ಶ್ರೇಯಸ್ ಅಯ್ಯರ್ ಹೆಸರು ಸೇರಿಸಲು ಬಿಸಿಸಿಐ ಚಿಂತನೆ; ಇಶಾನ್​ ಕಿಶನ್​​ ಕುರಿತು ನಡೆದಿಲ್ಲ ಚರ್ಚೆ

Shreyas Iyer: ಶ್ರೇಯಸ್ ಅಯ್ಯರ್ ಅವರಿಗೆ ಮತ್ತೆ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಅವಕಾಶ ನೀಡಬೇಕು ಎಂದು ಬಿಸಿಸಿಐ, ಚಿಂತನೆ ನಡೆಸಿದೆ. ಆದರೆ ಇಶಾನ್ ಕಿಶನ್ ಅವರಿಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆದಿಲ್ಲ.

ವಾರ್ಷಿಕ ಗುತ್ತಿಗೆಗೆ ಶ್ರೇಯಸ್ ಅಯ್ಯರ್ ಹೆಸರು ಸೇರಿಸಲು ಬಿಸಿಸಿಐ ಚಿಂತನೆ
ವಾರ್ಷಿಕ ಗುತ್ತಿಗೆಗೆ ಶ್ರೇಯಸ್ ಅಯ್ಯರ್ ಹೆಸರು ಸೇರಿಸಲು ಬಿಸಿಸಿಐ ಚಿಂತನೆ (PTI)

ರಣಜಿ ಟ್ರೋಫಿ ಆಡುವಂತೆ ಆದೇಶಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದ ಟೀಮ್ ಇಂಡಿಯಾ ಬ್ಯಾಟಿಂಗ್​ ಸ್ಟಾರ್​ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ಇಶಾನ್ ಕಿಶನ್ (Ishan Kishan) ಅವರನ್ನು ಬಿಸಿಸಿಐ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ (BCCI Annual Central Contract) ಕಿತ್ತು ಹಾಕಲಾಯಿತು. ಇದೀಗ ಶ್ರೇಯಸ್ ಅಯ್ಯರ್ ವಿಚಾರದಲ್ಲಿ ನಿಲುವು ಬದಲಿಸಲು ಬಿಸಿಸಿಐ ನಿರ್ಧರಿಸಿದೆ. ವಾರ್ಷಿಕ ಒಪ್ಪಂದದ ಪಟ್ಟಿಗೆ ಸೇರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚಿಂತಿಸುತ್ತಿದೆ.

ವೈಯಕ್ತಿಕ ಕಾರಣಗಳಿಂದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಸ್ವದೇಶಕ್ಕೆ ಹಿಂದಿರುಗಿದ ನಂತರ ಇಶಾನ್ ಕಿಶನ್ ವೃತ್ತಿಪರ ಕ್ರಿಕೆಟ್‌ನಿಂದ ದೂರ ಉಳಿದಿದ್ದು, ರಣಜಿ ಟ್ರೋಫಿಯಲ್ಲಿ ಒಂದೇ ಒಂದು ಪಂದ್ಯ ಆಡಲಿಲ್ಲ. ಶ್ರೇಯಸ್ ಅವರ ಪ್ರಕರಣವು ಕಿಶನ್​​ಗಿಂತ ವಿಭಿನ್ನ ಆಗಿದೆ. ಅಯ್ಯರ್​ ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದರೂ ಆರಂಭದಲ್ಲಿ ರಣಜಿ ಆಡಿರಲಿಲ್ಲ. ಹೀಗಾಗಿ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಇಬ್ಬರನ್ನೂ ಹೊರಗಿಡಲಾಯಿತು. ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ತಂಡದಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡ ನಂತರ ಮುಂಬೈ ಪರ ಕೊನೆಯ ಎರಡು ಲೀಗ್ ಹಂತದ ಪಂದ್ಯ ಮತ್ತು ಕ್ವಾರ್ಟರ್-ಫೈನಲ್ ಆಡದೆ ಶ್ರೇಯಸ್ ನಿರ್ಲಕ್ಷಿಸಿದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ವೈದ್ಯರು, ಫಿಟ್ ಎಂದು ಘೋಷಿಸಿದ್ದರೂ ಅಯ್ಯರ್​ ಗಾಯದ ಸಮಸ್ಯೆ ಉಲ್ಲೇಖಿಸಿದ್ದರು. ಆದಾಗ್ಯೂ, ಶ್ರೇಯಸ್ ರಣಜಿ ಟ್ರೋಫಿ ಸೆಮಿ-ಫೈನಲ್ ಮತ್ತು ಫೈನಲ್‌ನಲ್ಲಿ ಕಾಣಿಸಿಕೊಂಡರು. ಫೈನಲ್​ನ 2ನೇ ಇನ್ನಿಂಗ್ಸ್‌ನಲ್ಲಿ 95 ರನ್‌ಗಳ ಮ್ಯಾಚ್-ವಿನ್ನಿಂಗ್ ಇನ್ನಿಂಗ್ಸ್​ ಕಟ್ಟುವ ಮೂಲಕ ಗಮನ ಸೆಳೆದರು.

ಇದೀಗ ಅಯ್ಯರ್​ ರಣಜಿ ಆಡಿದ ಕಾರಣಕ್ಕೆ ಬಿಸಿಸಿಐ ತನ್ನ ನಿರ್ಧಾರವನ್ನು ಬದಲಿಸಲು ಚಿಂತಿಸಿದೆ. ಅಯ್ಯರ್ ಅವರಿಗೆ ಮತ್ತೆ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಅವಕಾಶ ನೀಡಬೇಕು ಎಂದು ಬಿಸಿಸಿಐ, ಚಿಂತನೆ ನಡೆಸಿದೆ ಎಂಬುದನ್ನು RevSportz ವರದಿ ಮಾಡಿದೆ. ಆದರೆ ಇಶಾನ್​ಗೆ ಅವಕಾಶ ನೀಡುವ ಕುರಿತಂತೆ ಬಿಸಿಸಿಐ ಯಾವುದೇ ಚರ್ಚೆ ನಡೆಸಿಲ್ಲ ಎಂದು ಇದೇ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದಾಗ್ಯೂ, ವರದಿಗಳ ಮಧ್ಯೆ ಶ್ರೇಯಸ್ ಅವರು ರಣಜಿ ಟ್ರೋಫಿಯ 4 ಮತ್ತು 5ನೇ ದಿನಗಳಲ್ಲಿ ಮೈದಾನಕ್ಕಿಳಿಯದ ನಂತರ ಅವರ ಫಿಟ್ನೆಸ್ ಸ್ಥಿತಿಯ ಬಗ್ಗೆ ಭಯದ ಹೊರತಾಗಿಯೂ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್‌ನ ಮೊದಲ ಐಪಿಎಲ್ 2024 ಪಂದ್ಯಕ್ಕೆ ಫಿಟ್ ಆಗಿರುತ್ತಾರೆ ಎಂದು ವರದಿ ತಿಳಿಸಿದೆ. ಐಪಿಎಲ್​ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಕೆಲಸದ ಹೊರೆ ಇಳಿಸುವ ಸಲುವಾಗಿ ಫೈನಲ್​​ನ 4 ಮತ್ತು 5ನೇ ದಿನದಲ್ಲಿ ಫೀಲ್ಡಿಂಗ್ ನಡೆಸಲು ಮೈದಾನಕ್ಕೆ ಬರಲಿಲ್ಲ. ಹೀಗಾಗಿ ಐಪಿಎಲ್​ ಆರಂಭದೊಳಗೆ ಫಿಟ್​ ಆಗುವ ಸಾಧ್ಯತೆ ಇದೆ.

ಕಳೆದ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿ ಸಮಯದಲ್ಲಿ ಗಾಯದ ನಂತರ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಶ್ರೇಯಸ್ ಐಪಿಎಲ್‌ನ 2023ರ ಋತುವನ್ನು ಕಳೆದುಕೊಂಡಿದ್ದರು. ಈಗ 2024ರ ಐಪಿಎಲ್​ನಲ್ಲಿ ಕೆಕೆಆರ್​ ತಂಡವನ್ನು ಮುನ್ನಡೆಸಲು ಮರಳಲು ಸಜ್ಜಾಗಿದ್ದಾರೆ. ಅಯ್ಯರ್ ಅಲಭ್ಯತೆಯಲ್ಲಿ ಕಳೆದ ವರ್ಷ ನಿತೀಶ್ ರಾಣಾ ನಾಯಕನಾಗಿ ಸೇವೆ ಸಲ್ಲಿಸಿದ್ದರು.