ಬಿಸಿಸಿಐ ಕಠಿಣ ನಿರ್ಧಾರ: ಭಾರತ ಎ ತಂಡದಲ್ಲಿ ಕೊಹ್ಲಿ, ರೋಹಿತ್ಗೆ ಸ್ಥಾನ, ಕರುಣ್ ನಾಯರ್ಗೂ ಅವಕಾಶ?
BCCI: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆಯ ಭಾಗವಾಗಿ ಮೇ-ಜೂನ್ ಅವಧಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ಲಯನ್ಸ್ ಎದುರಿನ ಭಾರತ ಎ ಪಂದ್ಯಗಳು ನಡೆಯಲಿವೆ.

ಜೂನ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತೀಯ ಟೆಸ್ಟ್ ತಂಡದ ಪ್ರಮುಖ ಆಟಗಾರರು 'ಎ' ತಂಡದ ಭಾಗವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಿಳಿಸಿದೆ. ಎರಡು ನಾಲ್ಕು ದಿನಗಳ ಪಂದ್ಯಗಳಲ್ಲಿ ಲಯನ್ಸ್ ತಂಡವನ್ನು ಎದುರಿಸಲು ಈ ಆಟಗಾರರು ಆಯ್ಕೆಯಾಗುವ ನಿರೀಕ್ಷೆಯಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆಯಾಗಿ ಈ ಪಂದ್ಯಗಳು ಮೇ-ಜೂನ್ ಅವಧಿಯಲ್ಲಿ ನಡೆಯಲಿವೆ. ಹೆಡ್ಡಿಂಗ್ಲಿಯಲ್ಲಿ ಜೂನ್ 20 ರಿಂದ ಹಿರಿಯ ತಂಡದ ಅಭಿಯಾನ ಆರಂಭವಾಗಲಿದೆ.
2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದ ಆರಂಭವನ್ನು ಗುರುತಿಸುವ ಈ ಸರಣಿಗೆ ಮುನ್ನ, ಭಾರತ ಎ ಮೇ 30 ರಿಂದ ಎರಡು ಪ್ರವಾಸ ಪಂದ್ಯಗಳನ್ನು ಆಡಲಿದೆ. ‘ಮೊದಲ 4 ದಿನಗಳ ಪಂದ್ಯವನ್ನು ಮೇ 30 ರಿಂದ ಕ್ಯಾಂಟರ್ಬರಿಯಲ್ಲಿರುವ ದಿ ಸ್ಪಿಟ್‌ಫೈರ್ ಗ್ರೌಂಡ್, ಸೇಂಟ್ ಲಾರೆನ್ಸ್‌ನಲ್ಲಿ ಆಯೋಜಿಸಲಾಗುವುದು. 2ನೇ ಪಂದ್ಯವು ಜೂನ್ 6 ರಂದು ನಾರ್ಥಾಂಪ್ಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ಆರಂಭವಾಗಲಿದೆ’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಹೇಳಿಕೆಯಲ್ಲಿ ತಿಳಿಸಿದೆ.
ಪಿಟಿಐ ವರದಿಯ ಪ್ರಕಾರ, ಕೆಲವು ಪ್ರಮುಖ ಭಾರತೀಯ ಟೆಸ್ಟ್ ಆಟಗಾರರು ಪ್ರವಾಸ ಪಂದ್ಯಗಳಿಗೆ 'ಎ' ತಂಡದ ಭಾಗವಾಗಲಿದ್ದಾರೆ. ಇದು ಪ್ರಸ್ತುತ ತಮ್ಮ ತಮ್ಮ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಹೊಂದಿರುವ ಆಟಗಾರರಿಗೆ ಇದು ಒತ್ತಡವನ್ನು ಉಂಟು ಮಾಡಬಹುದು. ಐಪಿಎಲ್ 2025ರ ಪ್ಲೇಆಫ್‌ಗಳು ಮೇ 20, 21 ಮತ್ತು 23 ರಂದು ನಡೆಯಲಿದ್ದು, ಫೈನಲ್ ಮೇ 25ರಂದು ನಡೆಯಲಿದೆ. ಐಪಿಎಲ್ ನಾಕೌಟ್ ಹೊತ್ತಿನಲ್ಲಿ ಭಾರತ ಎ ತಂಡವನ್ನು ಪ್ರಕಟಿಸಬಹುದು.
ರೋಹಿತ್-ಕೊಹ್ಲಿ ಕಳಪೆ ಪ್ರದರ್ಶನ
ಭಾರತ ‘ಎ’ ಪರ ಆಡಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ಬಿಸಿಸಿಐ ಕೇಳಬಹುದು. ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅವರ ಕಳಪೆ ಫಾರ್ಮ್ ಹೊಂದಿರುವ ಕಾರಣ ಮಹತ್ವದ ಸರಣಿಗೂ ಮುನ್ನ ಲಯಕ್ಕೆ ಕಂಡುಕೊಳ್ಳಲು ಈ ಅಭ್ಯಾಸ ಪಂದ್ಯಗಳನ್ನು ಆಡುವಂತೆ ಈ ಸ್ಟಾರ್ ಆಟಗಾರರಿಗೆ ಕೇಳಬಹುದು. ಭಾರತದ ನಾಯಕ ಸೆಪ್ಟೆಂಬರ್ನಿಂದ ತಂಡ ಆಡಿದ 3 ಟೆಸ್ಟ್ ಸರಣಿಗಳಲ್ಲಿ ಕೇವಲ 164 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ 31 ರನ್ ಗಳಿಸಿದ್ದೂ ಇದರಲ್ಲಿ ಸೇರಿದೆ. ಮತ್ತೊಂದೆಡೆ, ಪರ್ತ್‌ನಲ್ಲಿ ಶತಕ ಗಳಿಸಿದ್ದರೂ ಆಸ್ಟ್ರೇಲಿಯಾ ಸರಣಿಯಲ್ಲಿ ಕೊಹ್ಲಿ ಸರಾಸರಿ ಕೇವಲ 23.75 ರಷ್ಟಿತ್ತು.
ಕರುಣ್ ನಾಯರ್ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ?
ಲಯನ್ಸ್ ವಿರುದ್ಧದ 2 ಪಂದ್ಯಗಳಿಗೆ ಭಾರತ ಎ ತಂಡದಲ್ಲಿ ಕರುಣ್ ನಾಯರ್ ಅವರನ್ನು ಸೇರಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ಪರ ಕಣಕ್ಕಿಳಿದಿದ್ದ ಕನ್ನಡಿಗ ಕರುಣ್ ನಾಯರ್, ಟನ್ಗಟ್ಟಲ್ಲೇ ರನ್ ಗಳಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಗ್ರ ಸ್ಕೋರರ್ ಆಗಿದ್ದ ನಾಯರ್, ರಣಜಿ ಟ್ರೋಫಿಯಲ್ಲಿ 9 ಪಂದ್ಯಗಳಿಂದ 863 ರನ್ ಗಳಿಸಿ 4ನೇ ಹೆಚ್ಚು ರನ್ ಗಳಿಸಿದವರಾಗಿದ್ದರು. ಸರಾಸರಿ 54 ಮತ್ತು ನಾಲ್ಕು ಶತಕ ಮತ್ತು ಎರಡು ಅರ್ಧಶತಕ ಸಿಡಿಸಿದ್ದರು.
