ಕನ್ನಡ ಸುದ್ದಿ  /  Cricket  /  Bcci Declares Rishabh Pant Fit As Wicketkeeper And Batter For Ipl 2024 Set To Play Delhi Capitals Vs Punjab Kings Jra

ವಿಕೆಟ್ ಕೀಪರ್-ಬ್ಯಾಟರ್ ಆಗಿ ರಿಷಭ್ ಪಂತ್ ಸಂಪೂರ್ಣ ಫಿಟ್, ಬಿಸಿಸಿಐ ಅಧಿಕೃತ ಘೋಷಣೆ; ಐಪಿಎಲ್‌ನಲ್ಲಿ ಫೈಟರ್‌ ಅಖಾಡಕ್ಕೆ

Rishabh Pant IPL 2024: ಐಪಿಎಲ್ 2024ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಆಡ‌ಲು ರಿಷಭ್ ಪಂತ್ ಸಜ್ಜಾಗಿದ್ದಾರೆ. ಎನ್‌ಸಿಎ ಗ್ರೀನ್‌ ಸಿಗ್ನಲ್‌ ಕೊಟ್ಟ ಬೆನ್ನಲ್ಲೇ ಬಿಸಿಸಿಐ ಕೂಡಾ ಫಿಟ್‌ ಎಂದು ಘೋಷಿಸಿದೆ. ಬರೋಬ್ಬರಿ 14 ತಿಂಗಳ ಬಳಿಕ ಪಂತ್‌ ಮೈದಾನಕ್ಕಿಳಿಯುತ್ತಿದ್ದು, ಅಭಿಮಾನಿಗಳು ಕೂಡಾ ಕಾಯುತ್ತಿದ್ದಾರೆ.

ರಿಷಭ್ ಪಂತ್ ಸಂಪೂರ್ಣ ಫಿಟ್ ಎಂದು ಬಿಸಿಸಿಐ ಅಧಿಕೃತ ಘೋಷಣೆ
ರಿಷಭ್ ಪಂತ್ ಸಂಪೂರ್ಣ ಫಿಟ್ ಎಂದು ಬಿಸಿಸಿಐ ಅಧಿಕೃತ ಘೋಷಣೆ (PTI)

ಬರೋಬ್ಬರಿ 449 ದಿನಗಳ ನಂತರ ಕ್ರಿಕೆಟ್‌ ಮೈದಾನಕ್ಕಿಳಿಯಲು ರಿಷಭ್ ಪಂತ್ ಸಜ್ಜಾಗಿದ್ದಾರೆ. ಎನ್‌ಸಿಎ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ, ಬಿಸಿಸಿಐ ಕೂಡಾ ಪಂತ್‌ ಅವರನ್ನು ಫಿಟ್‌ ಎಂದು ಘೋಷಿಸಿದೆ. ಐಪಿಎಲ್‌ 2024ರ ಆವೃತ್ತಿ ಮೂಲಕ ರಿಷಭ್ ಪಂತ್ ಮತ್ತೆ ಕ್ರಿಕೆಟ್‌ ಆಡಲಿದ್ದಾರೆ. ಐಪಿಎಲ್‌ ಪಂದ್ಯಾವಳಿಯಲ್ಲಿ ಆಡಲು ಶೇಕಡಾ 100ರಷ್ಟು ಫಿಟ್‌ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಹಿಂದಿನಂತೆಯೇ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ಆಗಿ ಮೈದಾನಕ್ಕೆ ಮರಳಲು ಭಾರತದ ಪ್ರತಿಭಾವಂತ ಆಟಗಾರ ಸಜ್ಜಾಗಿದ್ದಾರೆ.

2022ರ ಡಿಸೆಂಬರ್‌ ತಿಂಗಳಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ, ಪಂತ್‌ ಗಂಭೀರ ಗಾಯಕ್ಕೊಳಗಾಗಿದ್ದರು. ಹೀಗಾಗಿ, ಭಾರತ ತಂಡವು ಮೇಲಿಂದ ಮೇಲೆ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿದ್ದರೂ, ಅವೆಲ್ಲದರಿಂದ ಪಂತ್‌ ಹೊರಬಿದ್ದರು. ಇದೀಗ ವರ್ಷಗಳ ಬಳಿಕ ಪಂತ್‌ ಕ್ರಿಕೆಟ್‌ ಆಡಲಿದ್ದಾರೆ. ಅದು ಕೂಡಾ ಐಪಿಎಲ್‌ ಮೂಲಕ. ಇದೇ ತಿಂಗಳ ಮಾರ್ಚ್ 23ರಂದು ಮೊಹಾಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಪಂತ್‌ ಐಪಿಎಲ್ ಅಭಿಯಾನ ಮರು ಆರಂಭಿಸಲಿದ್ದಾರೆ.

"2022ರ ಡಿಸೆಂಬರ್ 30ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದ ನಂತರ, 14 ತಿಂಗಳ ಕಾಲ ಪುನರ್ವಸತಿ ಮತ್ತು ಚೇತರಿಕೆ ಪ್ರಕ್ರಿಯೆಗೆ ಒಳಗಾಗಿದ್ದ ರಿಷಬ್‌ ಪಂತ್‌ ಈಗ ಮುಂಬರುವ ಐಪಿಎಲ್‌ 2024ರ ಆವೃತ್ತಿಗೆ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಫಿಟ್ ಆಗಿದ್ದಾರೆ" ಎಂದು ಬಿಸಿಸಿಐ ತಿಳಿಸಿದೆ.

ಇದನ್ನೂ ಓದಿ | ಡೆಲ್ಲಿಗೆ ರೋಚಕ 1 ರನ್ ಗೆಲುವು, ಹೋರಾಡಿ ಸೋತ ಆರ್​​ಸಿಬಿ; ಪ್ಲೇಆಫ್​ಗೆ ಕ್ಯಾಪಿಟಲ್ಸ್, ಸಂಕಷ್ಟದಲ್ಲಿ ಸ್ಮೃತಿ ಮಂಧಾನ ಪಡೆ

2022ರ ಡಿಸೆಂಬರ್‌‌ ತಿಂಗಳಲ್ಲಿ ಅಪಘಾತದ ಬಳಿಕ 2023ರ ಮೊದಲಾರ್ಧದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಪಂತ್, ಸ್ಥಿರವಾಗಿ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ಆಗಾಗ ನೆಟ್ ಸೆಷನ್‌ಗಳಲ್ಲಿ ಹಾಜರಾಗಿ ಆಡಿದ್ದಾರೆ. ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಮತ್ತು ನಿರ್ದೇಶಕ ಸೌರವ್ ಗಂಗೂಲಿ, ಐಪಿಎಲ್ 2024ಕ್ಕೆ ಪಂತ್ ಮರಳುವ ಬಗ್ಗೆ ಅಪ್ಡೇಟ್‌ ನೀಡುತ್ತಾ ಬಂದಿದ್ದರು. ಇದೀಗ ಅದರಂತೆಯೇ ಪಂತ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ.

ಬ್ಯಾಟಿಂಗ್ ಮಾತ್ರವಲ್ಲ

ಈ ನಡುವೆ, ಪಂತ್ ಕೇವಲ ಬ್ಯಾಟರ್‌ ಆಗಿ ಮಾತ್ರ ಆಡುತ್ತಾರೆಯೇ ಅಥವಾ ವಿಕೆಟ್ ಕೀಪಿಂಗ್ ಕೂಡಾ ಮಾಡುತ್ತಾರಾ ಎಂಬು ಕುರಿತು ಗೊಂದಲಗಳು ಇದ್ದವು. ಇದೀಗ ಈ ಎರಡೂ ಕೆಲಸಗಳಿಗೂ ಪಂತ್‌ ನೂರಕ್ಕೆ ನೂರರಷ್ಟು ಫಿಟ್‌ ಇರುವುದರಿಂದ ಅಭಿಮಾನಿಗಳಿಗೆ ಖುಷಿಯಾಗಿದೆ.

ಟಿ20 ವಿಶ್ವಕಪ್‌ ತಂಡಕ್ಕೆ‌ ರಿಷಬ್ ಪಂತ್‌ ಆಯ್ಕೆ ಫಿಕ್ಸ್

ಪಂತ್‌ ಐಪಿಎಲ್ ಆಡಬಹುದು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮಾರ್ಚ್ 10ರ ಭಾನುವಾರ ರಾತ್ರಿ ಫಿಟ್​ ಅಂಡ್ ಫೈನ್​ ಸರ್ಟಿಫಿಕೇಟ್​ ನೀಡಿತ್ತು. ಅದರ ಬೆನ್ನಲ್ಲೇ ಬಿಸಿಸಿಐ ಇದನ್ನು ಘೋಷಿಸಿದೆ. ಈ ಘೋಷಣೆಯೊಂದಿಗೆ, ಪಂತ್ ನೇರವಾಗಿ ಭಾರತ ಟಿ20 ವಿಶ್ವಕಪ್ ತಂಡದ ಆಯ್ಕೆಗೂ ಲಭ್ಯವಾಗಿದ್ದಾರೆ. ನಿನ್ನೆಯಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಪಂತ್ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಾದರೆ ಅವರು ವಿಶ್ವಕಪ್ ಆಡುತ್ತಾರೆ ಎಂದು ಹೇಳಿದ್ದರು. ಪಂತ್‌ ಭಾರತ ಕ್ರಿಕೆಟ್‌ ತಂಡದ ದೊಡ್ಡ ಆಸ್ತಿ. ಆವರು ಆಡಿದರೆ ಅದು ದೊಡ್ಡ ವಿಷಯ ಎಂದು ಗಮನ ಸೆಳೆದಿದ್ದರು. ಹೀಗಾಗಿ 26 ವರ್ಷದ ಆಟಗಾರ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ವಿಮಾನ ಹತ್ತುವುದು ಬಹುತೇಕ ಖಚಿತ. ಐಪಿಎಲ್‌ ಮುಗಿಯುತ್ತಿದ್ದಂತೆಯೇ ಜೂನ್ 1ರಿಂದ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.‌

ಇದನ್ನೂ ಓದಿ | 449 ದಿನಗಳ ನಂತರ ಕ್ರಿಕೆಟ್​ಗೆ ಮರಳಲಿದ್ದಾರೆ ರಿಷಭ್ ಪಂತ್; ಎನ್​ಸಿಎ ಕಡೆಯಿಂದ ಸಿಕ್ತು ಗ್ರೀನ್ ಸಿಗ್ನಲ್

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point