ಚಾಂಪಿಯನ್ಸ್ ಟ್ರೋಫಿ: ಪಾಕ್ಗೆ ಹೋಗಲ್ಲ, ಹೈಬ್ರಿಡ್ ಮಾದರಿಗೆ ಓಕೆ ಎಂದ ಬಿಸಿಸಿಐ; ಭಾರತ ಬಹಿಷ್ಕರಿಸಿದರೆ ಯಾರಿಗೆ ಅವಕಾಶ?
ICC Champions Trophy 2025: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಭಾರತ ಪ್ರಯಾಣಿಸಲು ಅನುಮತಿ ನೀಡದ ಕಾರಣ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ, ಐಸಿಸಿಗೆ ಮನವಿ ಮಾಡಿದೆ.

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy 2025) ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನ ದೇಶಕ್ಕೆ ಭಾರತ ತಂಡ ಪ್ರಯಾಣಿಸುವುದಕ್ಕೆ ಸಂಬಂಧಿಸಿ ಚರ್ಚೆಗಳು ಮತ್ತೆ ಬಿರುಸುಗೊಂಡಿವೆ. ಪಾಕಿಸ್ತಾನದಲ್ಲೇ ಟೂರ್ನಿ ಆಯೋಜನೆಗೊಂಡರೆ ಭಾರತ ತಂಡ ಪ್ರಯಾಣಿಸುವುದಿಲ್ಲ ಎಂದಿರುವ ಬಿಸಿಸಿಐ, ತಮ್ಮ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿದೆ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವಂತೆ ಕೇಳಿದೆ.
ಹಾಗಾಗಿ, ಕಳೆದ ವರ್ಷ ಏಷ್ಯಾಕಪ್ ಮಾದರಿಯಲ್ಲೇ ಭಾರತ ತಂಡದ ಪಂದ್ಯಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಬಿಸಿಸಿಐ, ಐಸಿಸಿಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ, ಟೀಮ್ ಇಂಡಿಯಾ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಬಹುದು ಎಂದು ವರದಿಯಾಗಿದೆ. ಅದರಂತೆ ಶ್ರೀಲಂಕಾ ಮತ್ತು ದುಬೈಗೆ ಭಾರತದ ಪಂದ್ಯಗಳು ಸ್ಥಳಾಂತರವಾಗುವ ಸಾಧ್ಯತೆ ಇದೆ. ಭದ್ರತೆ ಮತ್ತು ಸುರಕ್ಷತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಆಟಗಾರರನ್ನು ಕಳುಹಿಸುವುದಿಲ್ಲ.
2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ. ದುಬೈ ಅಥವಾ ಶ್ರೀಲಂಕಾದಲ್ಲಿ ಪಂದ್ಯಗಳನ್ನು ನಡೆಸುವಂತೆ ಐಸಿಸಿಗೆ ಮನವಿ ಮಾಡಲಾಗಿದೆ ಎಂದು ಬಿಸಿಸಿಐ ಮೂಲವೊಂದು ಎಎನ್ಐಗೆ ತಿಳಿಸಿದೆ. ಆದರೆ ಪಾಕ್ ಅದಕ್ಕೂ ಒಂದು ಯೋಜನೆ ರೂಪಿಸಿದೆ. ಆಟಗಾರರ ಪ್ರಯಾಣ ಕಡಿತಗೊಳಿಸಲು ಭಾರತ ತಂಡದ ಎಲ್ಲಾ ಪಂದ್ಯಗಳನ್ನು ಒಂದೇ ನಗರದಲ್ಲಿ ಆಯೋಜಿಸುವುದಾಗಿ ಪ್ರಸ್ತಾಪಿಸಿದೆ. ಈ ಬೆಳವಣಿಗೆಯ ನಂತರ ಬಿಸಿಸಿಐ, ಐಸಿಸಿಗೆ ಮನವಿ ಮಾಡಿದೆ.
ಲಾಹೋರ್ನಲ್ಲೇ ಆಯೋಜಿಸಲು ಪಿಸಿಬಿ ಯೋಜನೆ
ಭಾರತ ತಂಡದ ಎಲ್ಲಾ ಪಂದ್ಯಗಳನ್ನು ಲಾಹೋರ್ನಲ್ಲೇ ಆಯೋಜಿಸಲು ಪಿಸಿಬಿ, ಐಸಿಸಿಗೆ ಸೂಚಿಸಿದೆ. ಆದಾಗ್ಯೂ, ಭಾರತ, ಪಾಕಿಸ್ತಾನಕ್ಕೆ ಪ್ರಯಾಣಿಸುವ ಸಾಧ್ಯತೆಯ ಬಗ್ಗೆ ಆಸಕ್ತಿ ಹೊಂದಿಲ್ಲ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೆಬ್ರವರಿಯಿಂದ ಮಾರ್ಚ್ವರೆಗೆ ಪಾಕಿಸ್ತಾನದಲ್ಲಿ ನಡೆಯಲಿದೆ. 2008ರ ಏಷ್ಯಾಕಪ್ ಬಳಿಕ ಭಾರತ ತಂಡ ಪಾಕಿಸ್ತಾನದಲ್ಲಿ ಯಾವುದೇ ಕ್ರಿಕೆಟ್ ಟೂರ್ನಿಗಳನ್ನು ಆಡಿಲ್ಲ.
2012 ರಿಂದ ಜನವರಿ 2013 ರವರೆಗೆ ಭಾರತದಲ್ಲಿ ನಡೆದ ದ್ವಿಪಕ್ಷೀಯ ಸರಣಿಯು ಉಭಯ ದೇಶಗಳ ನಡುವಿನ ಕೊನೆಯ ಸರಣಿಯಾಗಿದೆ. ಅಂದಿನಿಂದ, ಎರಡೂ ದೇಶಗಳು ಐಸಿಸಿ ಟೂರ್ನಿ ಮತ್ತು ಏಷ್ಯಾ ಕಪ್ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಚಾಂಪಿಯನ್ಸ್ ಟ್ರೋಫಿ ಶ್ರೀಲಂಕಾ ಅಥವಾ ಯುಎಇಗೆ ಸ್ಥಳಾಂತರಗೊಂಡರೆ ಕಳೆದ 1 ವರ್ಷದಲ್ಲಿ ಪಾಕಿಸ್ತಾನಕ್ಕೆ ಭಾರತ ಪ್ರಯಾಣಿಸದ ಕಾರಣ ಪಾಕ್ನಿಂದ ಹೊರ ಹೋಗುವ ಎರಡನೇ ಬಹುರಾಷ್ಟ್ರೀಯ ಪಂದ್ಯಾವಳಿಯಾಗಲಿದೆ.
ರಾಜೀವ್ ಶುಕ್ಲಾ ಏನು ಹೇಳಿದ್ದರು?
2023ರ ಏಷ್ಯಾ ಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಭಾರತದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗಿತ್ತು. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮೇ ತಿಂಗಳಲ್ಲಿ ಹೇಳಿದ್ದರು.
'ಚಾಂಪಿಯನ್ಸ್ ಟ್ರೋಫಿಯ ವಿಷಯದಲ್ಲಿ ಭಾರತ ಸರ್ಕಾರವು ನಮಗೆ ಏನು ಹೇಳುತ್ತದೆಯೋ ಅದನ್ನು ನಾವು ಮಾಡುತ್ತೇವೆ. ಭಾರತ ಸರ್ಕಾರ ನಮಗೆ ಅನುಮತಿ ನೀಡಿದಾಗ ಮಾತ್ರ ನಾವು ನಮ್ಮ ತಂಡವನ್ನು ಕಳುಹಿಸುತ್ತೇವೆ. ಆದ್ದರಿಂದ ನಾವು ಭಾರತ ಸರ್ಕಾರದ ನಿರ್ಧಾರದ ಪ್ರಕಾರ ಹೋಗುತ್ತೇವೆ ಎಂದು ಹೇಳಿದರು. 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಹಾಲಿ ಚಾಂಪಿಯನ್ ಆಗಿತ್ತು.
ಭಾರತ ಹಿಂದೆ ಸರಿದರೆ ಯಾರಿಗೆ ಅವಕಾಶ?
ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಏಕದಿನ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಶ್ರೀಲಂಕಾಗೆ ಈ ಅವಕಾಶ ಸಿಗಲಿದೆ. ಯಾವುದೇ ತಂಡವು ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡಕ್ಕೆ ಈ ಅವಕಾಶ ಸಿಗಲಿದೆ. ಹೀಗಾಗಿ ಶ್ರೀಲಂಕಾ ಈ ಅರ್ಹತೆ ಪಡೆಯಲು ಕಾದು ಕುಳಿತಿದೆ.
