ODI World Cup 2023: ಬಿಸಿಸಿಐಗೆ ಮತ್ತೆ ಬಿಕ್ಕಟ್ಟು, ವೇಳಾಪಟ್ಟಿ ಬದಲಾವಣೆಗೆ ಎಚ್‌ಸಿಎ ಮನವಿ; ಈ ಬಾರಿಯೂ ಪಾಕ್ ಪಂದ್ಯದ್ದೇ ಸಮಸ್ಯೆ
ODI World Cup 2023: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ), ಏಕದಿನ ವಿಶ್ವಕಪ್ 2023ರ ವೇಳಾಪಟ್ಟಿಯಲ್ಲಿ ಬದಲಾವಣೆಗೆ ತಡವಾಗಿ ಬೇಡಿಕೆ ಇಟ್ಟಿದ್ದು, ಬಿಸಿಸಿಐ (BCCI) ಜೊತೆಗೆ ಐಸಿಸಿಯನ್ನೂ (ICC) ಒತ್ತಡಕ್ಕೆ ಸಿಲುಕಿಸಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 5 ರಿಂದ ಕ್ರಿಕೆಟ್ಗೆ ಜಾತ್ರೆಗೆ ಚಾಲನೆ ಸಿಗಲಿದೆ. ಈಗಾಗಲೇ ಎರಡು ಬಾರಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದೆ. ಇದೀಗ ಮತ್ತೊಂದು ಪಂದ್ಯದ ಬದಲಾವಣೆಗೆ ಮನವಿಯೊಂದು ಬಂದಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (Hyderabad Cricket Association) ಅಧಿಕಾರಿಗಳು ಪಂದ್ಯದ ದಿನಾಂಕ ಬದಲಿಸಲು ಬಿಸಿಸಿಐಗೆ ಮನವಿ ಮಾಡಿದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ), ಏಕದಿನ ವಿಶ್ವಕಪ್ 2023ರ ವೇಳಾಪಟ್ಟಿಯಲ್ಲಿ ಬದಲಾವಣೆಗೆ ತಡವಾಗಿ ಬೇಡಿಕೆ ಇಟ್ಟಿದ್ದು, ಬಿಸಿಸಿಐ (BCCI) ಜೊತೆಗೆ ಐಸಿಸಿಯನ್ನೂ (ICC) ಒತ್ತಡಕ್ಕೆ ಸಿಲುಕಿಸಿದೆ. ವಿಶ್ವಕಪ್ ಆರಂಭಕ್ಕೆ ಕೇವಲ ಒಂದೂವರೆ ತಿಂಗಳು ಮತ್ತು ಟಿಕೆಟ್ ಮಾರಾಟ ಪ್ರಾರಂಭವಾಗಲು ಒಂದು ವಾರ ಬಾಕಿ ಇರುವಾಗ, ಬಿಸಿಸಿಐ ಮತ್ತು ಐಸಿಸಿಗೆ ಎಚ್‌ಸಿಎ, ದೊಡ್ಡ ಆಘಾತ ನೀಡಿದೆ.
ವಿಶ್ವಕಪ್ ವೇಳಾಪಟ್ಟಿಯಲ್ಲಿ ಐಸಿಸಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿ ಕೇವಲ ಒಂದು ವಾರವಾಗಿದೆ. ಅತಿಥೇಯ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಬ್ಲಾಕ್‌ಬಸ್ಟರ್ ಪಂದ್ಯ ಸೇರಿದಂತೆ ಒಂಬತ್ತು ಪಂದ್ಯಗಳ ದಿನಾಂಕ ಬದಲಾವಣೆ ಮಾಡಲಾಗಿದೆ. ಅಭಿಮಾನಿಗಳು ಟಿಕೆಟ್ಗಳನ್ನು ಬುಕಿಂಗ್ ಮಾಡಿಕೊಳ್ಳಲು ಸಿದ್ದರಾಗಿರುವ ಈ ವೇಳೆ, ಮತ್ತೊಂದು ಮನವಿ ಬಂದಿರುವುದು ಬಿಸಿಸಿಐಗೆ ತಲೆನೋವು ಹೆಚ್ಚಿಸಿದೆ.
ಮತ್ತೆ ಭದ್ರತಾ ಸಮಸ್ಯೆ
ಅಕ್ಟೋಬರ್ 9ರಂದು ನ್ಯೂಜಿಲೆಂಡ್ ಮತ್ತು ನೆದರ್ಲೆಂಡ್ಸ್ ತಂಡಗಳ ನಡುವೆ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕಾದಾಟ ನಡೆಯಲಿದೆ. ಮರುದಿನ ಇದೇ ಮೈದಾನದಲ್ಲಿ ಅ.10ರಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಪಂದ್ಯ ನಡೆಯಲಿದೆ. ಆರಂಭಿಕ ವೇಳಾಪಟ್ಟಿ ಪ್ರಕಾರ ಈ ಪಂದ್ಯ ಅ.12 ರಂದು ನಡೆಯಬೇಕಿತ್ತು. ಆದರೆ, ಪರಿಷ್ಕೃತ ವೇಳಾಪಟ್ಟಿಯಲ್ಲಿ 9 ಪಂದ್ಯಗಳ ದಿನಾಂಕ ಬದಲಾವಣೆ ಸಮಯದಲ್ಲಿ ಈ ಮೈದಾನಕ್ಕೆ ಸತತ ಎರಡು ದಿನಗಳ ಪಂದ್ಯ ಆಯೋಜನೆಯಾಗಿದೆ.
ಆದರೆ ಇಲ್ಲೂ ಭದ್ರತೆ ತಲೆದೋರಿದೆ. ಬ್ಯಾಕ್ ಟು ಬ್ಯಾಕ್ ಪಂದ್ಯಗಳಿಗೆ ಭದ್ರತೆ ಒದಗಿಸುವುದು ಕಷ್ಟ. ಪಾಕಿಸ್ತಾನ ತಂಡ ತಂಗಲಿರುವ ಹೊಟೇಲ್‌ನಲ್ಲಿ ಭಾರಿ ಸಂಖ್ಯೆಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಒಂದು ಆಟಕ್ಕೆ ಸರಿಸುಮಾರು 3,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಬೇಕಿದೆ ಎಂದು ಹೈದರಾಬಾದ್ ಪೊಲೀಸರು, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ಗೆ ತಿಳಿಸಿದ್ದಾರೆ. ಹಾಗಾಗಿ, ಪಂದ್ಯದ ದಿನಾಂಕ ಬದಲಾಯಿಸುವಂತೆ, ಎಚ್‌ಸಿಎ ಬಿಸಿಸಿಐಗೆ ಮನವಿ ಮಾಡಿದೆ.
ಪಾಕಿಸ್ತಾನ-ಭಾರತ ಪಂದ್ಯಕ್ಕೂ ಇದೇ ಸಮಸ್ಯೆಯಾಗಿತ್ತು!
ಅಕ್ಟೋಬರ್ 15ರಂದು ಉತ್ತರ ಪ್ರದೇಶದಲ್ಲಿ ನವರಾತ್ರಿ ಆಚರಣೆ ಕಾರಣ ಅಂದು ನಡೆಯಬೇಕಿದ್ದ ಭಾರತ-ಪಾಕಿಸ್ತಾನ ಪಂದ್ಯವನ್ನು ಒಂದು ದಿನ ಹಿಂದಕ್ಕೆ ಅಂದರೆ, ಅಕ್ಟೋಬರ್ 14ಕ್ಕೆ ಬದಲಿಸಲಾಗಿದೆ. ಒಂದೇ ದಿನ ಭದ್ರತಾ ವ್ಯವಸ್ಥೆ ಕೈಗೊಳ್ಳುವುದು ಕಷ್ಟವೆಂದು ತಿಳಿದು ಪೊಲೀಸರು, ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಮೂಲಕ ಬಿಸಿಸಿಐಗೆ ತಿಳಿಸಿದ್ದರು. ಹಾಗಾಗಿ 2 ವಾರಗಳ ಹಿಂದಷ್ಟೇ ಭದ್ರತಾ ದೃಷ್ಟಿಯಿಂದ ಇಂಡೋ-ಪಾಕ್ ಸೇರಿ 9 ಪಂದ್ಯಗಳನ್ನ ದಿನಾಂಕ ಬದಲಿಸಲಾಗಿತ್ತು.
ಅಕ್ಟೋಬರ್ 5ರಿಂದ ಟೂರ್ನಿ ಆರಂಭ
ಉದ್ಘಾಟನಾ ಪಂದ್ಯವು ಅಕ್ಟೋಬರ್ 5ರಿಂದ ಶುರುವಾಗಲಿದೆ. ನವೆಂಬರ್ 19ಕ್ಕೆ ಕ್ರಿಕೆಟ್ಗೆ ಮುಗಿಯಲಿದೆ. 10 ತಂಡಗಳ ನಡುವೆ 48 ಪಂದ್ಯಗಳು ನಡೆಯಲಿದೆ. ಅಕ್ಟೋಬರ್ 8ರಿಂದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯವು ಚೆನ್ನೈನ ಚಿದಂಬರಂ ಮೈದಾನದಲ್ಲಿ ಜರುಗಲಿದೆ.