ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯ ನಿರ್ಧರಿಸುವಂತೆ ರೋಹಿತ್ ಶರ್ಮಾಗೆ ಬಿಸಿಸಿಐ ಸೂಚನೆ, ಕೊಹ್ಲಿಗಿಲ್ಲ ಆತಂಕ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರೋಹಿತ್ ಶರ್ಮಾಗೆ ಬಿಸಿಸಿಐ ನಿವೃತ್ತಿಯ ಗಡುವು ನೀಡಿದೆ. ಆದರೆ ಈ ವಿಚಾರದಲ್ಲಿ ವಿರಾಟ್ ಕೊಹ್ಲಿಗೆ ಯಾವುದೇ ಆತಂಕ ಇಲ್ಲ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಬಿಸಿಸಿಐ (BCCI) ನಿವೃತ್ತಿಯ ಗಡುವು ನೀಡಿದೆ. ಫೆಬ್ರವರಿ 19ರಿಂದ ಶುರುವಾಗುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ (ICC Champions Trophy 2025) ನಂತರ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಐಸಿಸಿ ಈವೆಂಟ್ನಲ್ಲಿ ಭಾರತ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ಲೆಕ್ಕಿಸದೆ, ಭಾರತದ ನಾಯಕನನ್ನು ಅವರ ಭವಿಷ್ಯದ ಬಗ್ಗೆ ಚರ್ಚಿಸಲು ಕೇಳಲಾಗಿದೆ. ಆದರೆ ವಿರಾಟ್ ಕೊಹ್ಲಿಗೆ (Virat Kohli) ಇಂತಹ ಯಾವುದೇ ಸೂಚನೆ ನೀಡಿಲ್ಲ ಎಂದು ವರದಿಯಾಗಿದೆ.
38 ವರ್ಷದ ರೋಹಿತ್ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ತಂಡದ ಪರ ಆಡುವ ಸಾಧ್ಯತೆ ಬಹುತೇಕ ಕಡಿಮೆ ಎಂದು ವರದಿಗಳು ಹೇಳುತ್ತಿವೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯದೆ ಹಿಂದೆ ಸರಿದಾಗಲೇ ಈ ವದಂತಿಗಳು ಹುಟ್ಟಿಕೊಂಡಿದ್ದವು. ಆದರೆ ಅಂದು ಮಾತನಾಡಿ, ನನ್ನ ನಿವೃತ್ತಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹಿಟ್ಮ್ಯಾನ್ ತನ್ನ ವಿರುದ್ಧ ಕೇಳಿಬಂದ ಗಾಸಿಪ್ಗಳಿಗೆ ಖಡಕ್ ಉತ್ತರ ಕೊಟ್ಟಿದ್ದರು. ಇದೀಗ ಭವಿಷ್ಯ ನಿರ್ಧರಿಸುವಂತೆ ಬಿಸಿಸಿಐನಿಂದಲೇ ಪ್ರಶ್ನೆ ಬಂದಿರುವುದು ಅಂದಿನ ವದಂತಿಗಳಿಗೆ ಪುಷ್ಠಿ ನೀಡಿದೆ.
ಅತ್ಯಂತ ಕೆಟ್ಟ ಪ್ರದರ್ಶನ ನೀಡುತ್ತಿರುವ ಹಿಟ್ಮ್ಯಾನ್, ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಅಸಾಧ್ಯವಾದ ಬ್ಯಾಟಿಂಗ್ ನಡೆಸಿದರೂ ಜೂನ್ನಲ್ಲಿ ಇಂಗ್ಲೆಂಡ್ಗೆ ಹೋಗುವ ಸಾಧ್ಯತೆಗಳು ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ. ಅಷ್ಟರೊಳಗೆ ಭಾರತದ ಮುಂದಿನ ನಾಯಕನನ್ನು ಅಂತಿಮಗೊಳಿಸಬೇಕಿರುವ ಕಾರಣ ಬಿಸಿಸಿಐ, ಚಾಂಪಿಯನ್ಸ್ ಟ್ರೋಫಿ ಬಳಿಕ ತಮ್ಮ ಭವಿಷ್ಯದ ಕುರಿತು ಅಪ್ಡೇಟ್ ನೀಡುವಂತೆ ತಿಳಿಸಿದೆ. ಈ ಬಗ್ಗೆ ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದೆ.
ಬಿಸಿಸಿಐ ಮೂಲಗಳು ಹೇಳಿದ್ದೇನು?
ಕಳೆದ ಆಯ್ಕೆ ಸಮಿತಿ ಸಭೆಯ ಸಮಯದಲ್ಲಿ ಆಯ್ಕೆದಾರರು ಮತ್ತು ಮಂಡಳಿ ಸದಸ್ಯರು ರೋಹಿತ್ ಅವರೊಂದಿಗೆ ಈ ಚರ್ಚೆ ನಡೆಸಿದ್ದರು. ಚಾಂಪಿಯನ್ಸ್ ಟ್ರೋಫಿಯ ನಂತರ ತಮ್ಮ ಭವಿಷ್ಯ ಹೇಗೆ ಯೋಜಿಸಲು ಬಯತ್ತೀರಿ ಎಂಬುದನ್ನು ನಿರ್ಧರಿಸುವಂತೆ ಅವರಿಗೆ ತಿಳಿಸಲಾಗಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಆವೃತ್ತಿ, ಮುಂದಿನ ಏಕದಿನ ವಿಶ್ವಕಪ್ಗೆ ತಂಡ ಸಜ್ಜುಗೊಳಿಸುವ ಮತ್ತು ನೂತನ ಸಾರಥಿ ನೇಮಕ ಸೇರಿ ಕೆಲವು ಯೋಜನೆಗಳನ್ನು ಹೊಂದಿದ್ದೇವೆ. ಹಾಗಾಗಿ ನಿಮ್ಮಿಂದ ಖಚಿತ ಮಾಹಿತಿಗೆ ಕಾಯುತ್ತೇವೆ ಎಂದು ಸಭೆಯಲ್ಲಿ ಕೇಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.
2027ಕ್ಕೆ ರೋಹಿತ್ಗೆ 40 ವರ್ಷ
ನಾಯಕ ರೋಹಿತ್ ಶರ್ಮಾ ಮತ್ತು ಭಾರತ ತಂಡಕ್ಕೆ ಏಕದಿನ ಮಾದರಿಯಲ್ಲಿ ಐಸಿಸಿ ಟ್ರೋಫಿ ಗೆಲ್ಲುವ ಕನಸು ನನಸಾಗಿಯೇ ಉಳಿದುಕೊಂಡಿದೆ. 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಿತ್ತು. ತದನಂತರ 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೋತು ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಮತ್ತೆ ಏಕದಿನ ವಿಶ್ವಕಪ್ ಜರುಗುವುದು 2027ರಲ್ಲಿ. ಆದರೆ ಅಷ್ಟೊತ್ತಿಗೆ ರೋಹಿತ್ಗೆ 40 ವರ್ಷ ತುಂಬುತ್ತದೆ. ಅಲ್ಲದೆ, ಅವರ ಫಿಟ್ನೆಸ್ ಸಹ ಇನ್ನಷ್ಟು ದುರ್ಬಲವಾಗುತ್ತದೆ. ಇದೇ ಕಾರಣಕ್ಕೆ ಭವಿಷ್ಯದ ಕುರಿತು ಚರ್ಚಿಸುವಂತೆ ಬಿಸಿಸಿಐ ತಿಳಿಸಿದೆ.
ರೋಹಿತ್ ಫಾರ್ಮ್ ಸಮಸ್ಯೆ
ಆದಾಗ್ಯೂ, ದೊಡ್ಡ ಸಮಸ್ಯೆ ಏನೆಂದರೆ ರೋಹಿತ್ ಅವರ ಫಾರ್ಮ್. ಇಂಗ್ಲೆಂಡ್ ವಿರುದ್ಧ 3 ಏಕದಿನ ಪಂದ್ಯಗಳು, ನಂತರ ಚಾಂಪಿಯನ್ಸ್ ಟ್ರೋಫಿ ಇರುವುದರಿಂದ ನಾಯಕ ಮತ್ತೆ ಫಾರ್ಮ್ಗೆ ಮರಳಬೇಕಿದೆ. ಇತ್ತೀಚೆಗೆ ರಣಜಿ ಆಡಿದ್ದ ರೋಹಿತ್, ಅಲ್ಲೂ ಕೆಟ್ಟ ಪ್ರದರ್ಶನ ಮುಂದುವರೆಸಿದ್ದರು. ಮೊದಲ ಇನ್ನಿಂಗ್ಸ್ 3, ಎರಡನೇ ಇನ್ನಿಂಗ್ಸ್ನಲ್ಲಿ 28 ರನ್ಗಳಿಗೆ ಔಟಾಗಿದ್ದರು. ಇದೀಗ ಭಾರತ ತಂಡಕ್ಕೆ ಮರಳಿರುವ ಹಿಟ್ಮ್ಯಾನ್, ಮುಂದಿನ ಪಂದ್ಯಗಳಲ್ಲಿ ತನ್ನ ಭವಿಷ್ಯವೇ ಬದಲಾಗುವಂತೆ ಪ್ರದರ್ಶನ ನೀಡಬೇಕು.
ರೋಹಿತ್ ಅವರಂತೆ ವಿರಾಟ್ ಕೊಹ್ಲಿ ಕೂಡ ಫಾರ್ಮ್ಗೆ ಮರಳಲು ಹೆಣಗಾಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್ ಸರಣಿಯನ್ನು 9 ಇನ್ನಿಂಗ್ಸ್ಗಳಿಂದ 190 ರನ್ ಗಳಿಸಿ ಕೆಟ್ಟ ಪ್ರದರ್ಶನ ನೀಡಿದ್ದರು. ಇದರಲ್ಲಿ ಒಂದು ಶತಕವೂ ಸೇರಿದೆ. ಆದರೆ ಆಯ್ಕೆದಾರರು ಮತ್ತು ಬಿಸಿಸಿಐ ಕೊಹ್ಲಿ ಭವಿಷ್ಯದ ಕುರಿತು ಯಾವುದೇ ಚಕಾರ ಎತ್ತಿಲ್ಲ. ‘ವಿರಾಟ್ ಕೊಹ್ಲಿಗೆ ಸಂಬಂಧಿಸಿ ಆಯ್ಕೆದಾರರು ಇನ್ನಷ್ಟು ಕಾಯುವುದಾಗಿ ತಿಳಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
