ಕೋವಿಡ್ ಸಮಯದಲ್ಲಿ ನಿಷೇಧಿಸಿದ್ದ ನಿಯಮ ಮತ್ತೆ ಜಾರಿ, ಬೌಲರ್‌ಗಳಿಗೆ ಲಾಭ; ಈ ಬಾರಿಯ ಐಪಿಎಲ್ ಮತ್ತಷ್ಟು ರೋಚಕ
ಕೋವಿಡ್19 ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಾಲಾರಸ ಹಚ್ಚುವುದನ್ನು ಐಸಿಸಿ ನಿಷೇಧಿಸಿತ್ತು. ಐಪಿಎಲ್‌ನಲ್ಲಿಯೂ ಈ ನಿಯಮವನ್ನು ಪರಿಚಯಿಸಲಾಯ್ತು. ಇದೀಗ ಐಪಿಎಲ್ 2025ರ ಆವೃತ್ತಿಯಲ್ಲಿ ನಿಷೇಧಿತ ನಿಯಮವನ್ನು ಮತ್ತೆ ಪರಿಚಯಿಸಲಾಗಿದೆ. ಈ ಬಾರಿ ಚೆಂಡಿಗೆ ಲಾಲಾರಸ ಹಚ್ಚಬಹುದು ಎಂದು ಬಿಸಿಸಿಐ ಹೇಳಿದೆ.

18ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯು ಮತ್ತಷ್ಟು ರೋಚಕವಾಗಿರಲಿದೆ. ಇದಕ್ಕಾಗಿ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈವರೆಗೂ ಐಪಿಎಲ್ ಪಂದ್ಯಗಳಲ್ಲಿ ಚೆಂಡಿನ ಮೇಲೆ ಲಾಲಾರಸವನ್ನು (ಸಲೈವಾ)ಹಚ್ಚುವುದನ್ನು ನಿಷೇಧಿಸಲಾಗಿತ್ತು. ಕೋವಿಡ್ 19 ಸಾಂಕ್ರಮಿಕ ಆವರಿಸಿದ್ದ ಸಮಯದಲ್ಲಿ ಚೆಂಡಿನ ಮೇಲೆ ಲಾಲಾರಸ ಸವರುವುದಕ್ಕೆ ನಿಷೇಧ ಹೇರಲಾಗಿತ್ತು. ಕಳೆದ ಆವೃತ್ತಿಯವರೆಗೂ ಇದ್ದ ಆ ನಿಷೇಧವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ (ಮಾ. 20) ತೆಗೆದುಹಾಕಿದೆ.
ಚೆಂಡನ್ನು ಹೊಳೆಯಿಸಲು ಮತ್ತು ಬೌಲರ್ ಚೆಂಡಿನ ಮೇಲೆ ನಿಯಂತ್ರಣ ಪಡೆಯಲು ಲಾಲಾರಸವನ್ನು ಹಚ್ಚಲಾಗುತ್ತದೆ. ಆಟಗಾರರು ಬೌಲಿಂಗ್ ಮಾಡುವಾಗ, ಫೀಲ್ಡಿಂಗ್ ಮಾಡುತ್ತಿರುವ ತಂಡದ ಸದಸ್ಯರು ಚೆಂಡಿನ ಮೇಲೆ ಬಾಯಿಯಿಂದ ಎಂಜಲು ತೆಗೆದು ಹಚ್ಚುವುದನ್ನು ನೀವು ನೋಡಿರಬಹುದು. ಆದರೆ, ಕೋವಿಡ್ -19 ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಾಲಾರಸ ಹಚ್ಚುವ ಹಳೆಯ ಅಭ್ಯಾಸವನ್ನು ಐಸಿಸಿ ನಿಷೇಧಿಸಿತ್ತು. ಆ ನಂತರ ಐಪಿಎಲ್‌ನಲ್ಲಿಯೂ ಇದೇ ನಿಯಮವನ್ನು ಪರಿಚಯಿಸಿ, ಸಲೈವ ಹಚ್ಚುವುದನ್ನು ನಿಷೇಧಿಸಲಾಯ್ತು. ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿದ್ದವು.
ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ, ಲಾಲಾರಸ ನಿಷೇಧವನ್ನು ತೆಗೆದುಹಾಕುವಂತೆ ಬಿಸಿಸಿಐ ಅಧಿಕಾರಿಗಳನ್ನು ಒತ್ತಾಯಿಸಿದ್ದರು. “ನಾವು ರಿವರ್ಸ್ ಸ್ವಿಂಗ್ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಚೆಂಡಿನ ಮೇಲೆ ಲಾಲಾರಸ ಬಳಸಲು ಅನುಮತಿ ಇಲ್ಲ. ಲಾಲಾರಸ ಹಚ್ಚಲು ನಮಗೆ ಅವಕಾಶ ನೀಡಬೇಕು ಎಂದು ನಾವು ಮನವಿ ಮಾಡುತ್ತಲೇ ಇದ್ದೇವೆ. ಆಗ ನಾವು ಆಟದಲ್ಲಿ ರಿವರ್ಸ್ ಸ್ವಿಂಗ್ ಮಾಡಬಹುದು. ಆಗ ಪಂದ್ಯವೂ ಆಸಕ್ತಿದಾಯಕವಾಗುತ್ತದೆ” ಎಂದು ಈ ತಿಂಗಳ ಆರಂಭದಲ್ಲಿ ದುಬೈನಲ್ಲಿ ನಡೆದ ಭಾರತದ ಚಾಂಪಿಯನ್ಸ್ ಟ್ರೋಫಿ ಅಭಿಯಾನದ ಸಂದರ್ಭದಲ್ಲಿ ಶಮಿ ಹೇಳಿದ್ದರು. ಈ ಹೇಳಿಕೆಯನ್ನು ಅನುಭವಿ ವೇಗದ ಬೌಲರ್‌ಗಳಾದ ವೆರ್ನಾನ್ ಫಿಲಾಂಡರ್ ಮತ್ತು ಟಿಮ್ ಸೌಥಿ ಕೂಡಾ ಪ್ರತಿಧ್ವನಿಸಿದರು.
“ಲಾಲಾರಸ ಬಳಕೆ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ. ಹೆಚ್ಚಿನ ನಾಯಕರು ಈ ಕ್ರಮದ ಪರವಾಗಿದ್ದರು,” ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
