ಆಟಗಾರರಿಗೆ ಬಿಸಿಸಿಐ ಬಂಪರ್ ಆಫರ್; ವರ್ಷಪೂರ್ತಿ ಟೆಸ್ಟ್ ಆಡಿದರೆ ದೊಡ್ಡ ಮೊತ್ತದ ಪ್ರೋತ್ಸಾಹ ನೀಡಲು ಮುಂದಾದ ಮಂಡಳಿ
BCCI : ಆಟಗಾರರನ್ನು ಟೆಸ್ಟ್ ಕ್ರಿಕೆಟ್ ಕಡೆಗೆ ಉತ್ತೇಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆರ್ಥಿಕ ಪ್ರೋತ್ಸಾಹ ನೀಡಲು ಚಿಂತನೆ ನಡೆಸಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಬಿಸಿಸಿಐ ಇತ್ತೀಚೆಗಷ್ಟೇ ಭಾರತೀಯ ಆಟಗಾರರ ವಾರ್ಷಿಕ ಒಪ್ಪಂದದ ಪಟ್ಟಿಯನ್ನು ಪ್ರಕಟಿಸಿದೆ. ಕೆಲವರಿಗೆ ಬಡ್ತಿ, ಇನ್ನೂ ಕೆಲವರಿಗೆ ಹಿಂಬಡ್ತಿ ಮತ್ತು ಹಲವರನ್ನು ಗುತ್ತಿಗೆ ಪಟ್ಟಿಯಿಂದಲೇ ಹೊರಗಿಡಲಾಗಿದೆ. ಇದೇ ವೇಳೆ ಟೆಸ್ಟ್ ಕ್ರಿಕೆಟ್ ಆಡಲು ಆಸಕ್ತಿ ಹೆಚ್ಚಿಸುವ ಸಲುವಾಗಿ ಬಿಸಿಸಿಐ ಹೊಸ ಕ್ರಮಕ್ಕೆ ಮುಂದಾಗಿದೆ. ಭಾರತ ತಂಡದ ಆಟಗಾರರಿಗೆ ಬಂಪರ್ ಆಫರ್ ಘೋಷಿಸಲು ಬಿಸಿಸಿಐ ನಿರ್ಧರಿಸಿದೆ.
ಆಟಗಾರರನ್ನು ಟೆಸ್ಟ್ ಕ್ರಿಕೆಟ್ ಕಡೆಗೆ ಉತ್ತೇಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆರ್ಥಿಕ ಪ್ರೋತ್ಸಾಹ ನೀಡಲು ಚಿಂತನೆ ನಡೆಸಿದೆ. ಹೆಡ್ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಮತ್ತು ಚೀಫ್ ಸೆಲೆಕ್ಟರ್ ಈ ಕುರಿತು ಚರ್ಚೆ ನಡೆಯುತ್ತಿದೆ. ಟೆಸ್ಟ್ ಪಂದ್ಯಗಳಿಗೆ ಪ್ರತಿ ಪಂದ್ಯದ ಶುಲ್ಕ ಹೆಚ್ಚಿಸುವ ಸಾಧ್ಯತೆಯಿದೆ. ವರ್ಷದಲ್ಲಿ ಎಲ್ಲಾ ಟೆಸ್ಟ್ ಸರಣಿಗಳನ್ನು ಆಡುವ ಆಟಗಾರರಿಗೆ ಅವರು ಬಹುಮಾನ ನೀಡಲಿದ್ದಾರೆ.
ಮಂಡಳಿಯ ಮೂಲಗಳ ಪ್ರಕಾರ, ಒಬ್ಬ ಆಟಗಾರ ವರ್ಷ ಪೂರ್ತಿ ರಣಜಿ ಟ್ರೋಫಿಯ ಎಲ್ಲಾ ಪಂದ್ಯಗಳಲ್ಲಿ ಕಣಕ್ಕಿಳಿದರೆ 75 ಲಕ್ಷ ರೂಪಾಯಿ, ಅದೇ ಆಟಗಾರ ವರ್ಷದಲ್ಲಿ ಎಲ್ಲಾ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದರೆ 15 ಕೋಟಿ ರೂಪಾಯಿ ಪ್ರೋತ್ಸಾಹ ನೀಡಲು ನಿರ್ಧರಿಸಿದೆ. ಟೆಸ್ಟ್ ಕ್ರಿಕೆಟ್ ಜಯಪ್ರಿಯತೆ ಹೆಚ್ಚಿಸುವ ಗುರಿಯನ್ನು ಬಿಸಿಸಿಐ ಹೊಂದಿದೆ.
ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರಂತಹ ಆಟಗಾರರು ರಣಜಿ ಟ್ರೋಫಿಯಲ್ಲಿ ತಮ್ಮ ರಾಜ್ಯಗಳಿಗಾಗಿ ಆಡದಿರಲು ನಿರ್ಧರಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಋತುವಿಗೆ ಭರ್ಜರಿ ಸಿದ್ಧತೆ ನಡೆಸುವ ಸಲುವಾಗಿ ಇಬ್ಬರೂ ಸಹ ದೇಶೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಅಲ್ಲದೆ, ಆಟಗಾರರ ಇಂಡಿಯನ್ ಪ್ರೀಮಿಯರ್ ಲೀಗ್ ಒಪ್ಪಂದಗಳಿಗೆ ಹೋಲಿಸಿದರೆ ಈ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.
ಮತ್ತೊಂದೆಡೆ, ಬಿಸಿಸಿಐ 2024-25ರ ಒಪ್ಪಂದದಲ್ಲಿ 30 ಆಟಗಾರರು ಸ್ಥಾನ ಪಡೆದಿದ್ದಾರೆ. ಬಿಸಿಸಿಐ ನಿಯಮ ಉಲ್ಲಂಘಿಸಿರುವ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಹೊರಗಿಡಲಾಗಿದೆ. ಹಾಗೆಯೇ ಯುಜ್ವೇಂದ್ರ ಚಹಲ್, ಶಿಖರ್ ಧವನ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಅವರನ್ನೂ ಕೈಬಿಡಲಾಗಿದೆ.
ಈಗಿರುವ ಪಂದ್ಯದ ಶುಲ್ಕ
ಸದ್ಯ ಬಿಸಿಸಿಐ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂಪಾಯಿ ಆಟಗಾರರಿಗೆ ನೀಡುತ್ತಿದೆ. ಆಡಳಿತ ಮಂಡಳಿಯು ಪ್ರತಿ ಏಕದಿನ ಅಂತಾರಾಷ್ಟ್ರೀಯ (ODI) ಪಂದ್ಯಕ್ಕೆ 6 ಲಕ್ಷ ರೂಪಾಯಿ ಮತ್ತು ಟಿ20 ಅಂತಾರಾಷ್ಟ್ರೀಯ (ಟಿ20ಐ) ಗೆ 3 ಲಕ್ಷ ರೂಪಾಯಿ ನೀಡುತ್ತಿದೆ.
ಯಾರು ಯಾವ ಕೆಟಗಿರಿಯಲ್ಲಿದ್ದಾರೆ?
1. ಎ+ ಗ್ರೇಡ್ ಕೆಟಗಿರಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ.
2. ಎ ಗ್ರೇಡ್ ಕೆಟಗಿರಿಯಲ್ಲಿ ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನ ಪಡೆದಿದ್ದಾರೆ.
3. ಬಿ ಗ್ರೇಡ್ ವರ್ಗದಲ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್.
4. ಸಿ ಗ್ರೇಡ್ ವರ್ಗದಲ್ಲಿ ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ ಕೃಷ್ಣ, ಅವೇಶ್ ಖಾನ್, ರಜತ್ ಪಾಟೀದಾರ್ ಅವಕಾಶ ಪಡೆದಿದ್ದಾರೆ.