ವಿರಾಟ್ ಕೊಹ್ಲಿ ಬಹಿರಂಗ ಟೀಕೆಯ ನಂತರ ಬಿಸಿಸಿಐ ಯು-ಟರ್ನ್​; ಕುಟುಂಬ ನಿರ್ಬಂಧ ಸಡಿಲಿಸಲು ನಿರ್ಧಾರ!
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಬಹಿರಂಗ ಟೀಕೆಯ ನಂತರ ಬಿಸಿಸಿಐ ಯು-ಟರ್ನ್​; ಕುಟುಂಬ ನಿರ್ಬಂಧ ಸಡಿಲಿಸಲು ನಿರ್ಧಾರ!

ವಿರಾಟ್ ಕೊಹ್ಲಿ ಬಹಿರಂಗ ಟೀಕೆಯ ನಂತರ ಬಿಸಿಸಿಐ ಯು-ಟರ್ನ್​; ಕುಟುಂಬ ನಿರ್ಬಂಧ ಸಡಿಲಿಸಲು ನಿರ್ಧಾರ!

ವಿರಾಟ್ ಕೊಹ್ಲಿ ಅವರ ಬಹಿರಂಗ ಟೀಕೆಯ ನಂತರ ಕ್ರಿಕೆಟಿಗರ ಕುಟುಂಬ ಸದಸ್ಯರಿಗೆ ಕ್ರಿಕೆಟ್​ ಪ್ರವಾಸಗಳಲ್ಲಿ ಹೆಚ್ಚು ಕಾಲ ಉಳಿಯಲು ಅವಕಾಶ ನೀಡಲು ಬಿಸಿಸಿಐ ತನ್ನ ಕುಟುಂಬ ನೀತಿಯನ್ನು ಬದಲಿಸಲು ಮುಂದಾಗಲಿದೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ಬಹಿರಂಗ ಟೀಕೆಯ ನಂತರ ಬಿಸಿಸಿಐ ಯು-ಟರ್ನ್​; ಕುಟುಂಬ ನಿರ್ಬಂಧ ಸಡಿಲಿಸಲು ನಿರ್ಧಾರ!
ವಿರಾಟ್ ಕೊಹ್ಲಿ ಬಹಿರಂಗ ಟೀಕೆಯ ನಂತರ ಬಿಸಿಸಿಐ ಯು-ಟರ್ನ್​; ಕುಟುಂಬ ನಿರ್ಬಂಧ ಸಡಿಲಿಸಲು ನಿರ್ಧಾರ! (PTI)

2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಕಳಪೆ ಪದರ್ಶನ ನೀಡಿದ್ದ ಹಿನ್ನೆಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದ ಬಿಸಿಸಿಐ, ಈಗ ಕುಟುಂಬಕ್ಕೆ ನಿರ್ಬಂಧಿಸಿದ್ದ ನಿಯಮವನ್ನು ಸಡಿಲಿಸಲು ನಿರ್ಧರಿಸಿದೆ. ಅದರಲ್ಲೂ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಹಿರಂಗವಾಗಿ ಈ ನಿಯಮದ ವಿರುದ್ಧ ಟೀಕೆ ವ್ಯಕ್ತಪಡಿಸುತ್ತಿದ್ದಂತೆ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ಕೊಹ್ಲಿ ಬೆನ್ನಲ್ಲೇ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಕೂಡ ಬಿಸಿಸಿಐ ನಿರ್ಧಾರಕ್ಕೆ ಕಿಡಿಕಾರಿದ್ದರು. ಕೌಟುಂಬಿಕ ಪ್ರಯಾಣದ ನಿರ್ಬಂಧದ ನಿಯಮ ಬದಲಾಯಿಸುವ ಕುರಿತು ಮರುಪರಿಶೀಲನೆ ನಡೆಸಲು ಬಿಸಿಸಿಐ ಮುಂದಾಗಿದೆ.

ಆಟಗಾರರ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಿಜಿಟಿಯಲ್ಲಿ 3-1 ಅಂತರದಲ್ಲಿ ಸರಣಿ ಸೋಲಿನ ಬಳಿಕ ಸಿಟ್ಟಿಗೆದ್ದ ಬಿಸಿಸಿಐ 10 ನಿಯಮಗಳನ್ನು ಜಾರಿಗೆ ತಂದಿತು. ಅದರಲ್ಲಿ ಕುಟುಂಬ ಸದಸ್ಯರಿಗೆ ನಿರ್ಬಂಧ ವಿಧಿಸಿದ್ದೂ ಒಂದು. ವಿದೇಶಿ ಪ್ರವಾಸಗಳಲ್ಲಿ ಆಟಗಾರರೊಂದಿಗೆ ಕುಟುಂಬ ಸದಸ್ಯರು ಉಳಿಯಬಹುದಾದ ದಿನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು. ಈ ನಿಯಮದ ಪ್ರಕಾರ 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ದಿನಗಳ ಪ್ರವಾಸ ಇದ್ದರೆ ಆಟಗಾರರು ತಮ್ಮ ಕುಟುಂಬ ಸದಸ್ಯರನ್ನು ಗರಿಷ್ಠ 2 ವಾರಗಳ ಅವಧಿಗೆ ಕರೆದೊಯ್ಯಲು ಅವಕಾಶ ಇದೆ. ಅದಕ್ಕಿಂತ ಕಡಿಮೆ ದಿನಗಳ ಪ್ರವಾಸ ಇದ್ದರೆ ಕುಟುಂಬ ಕರೆದುಕೊಂಡು ಹೋಗುವಂತಿರಲಿಲ್ಲ.

ವಿರಾಟ್ ಕೊಹ್ಲಿ ಏನು ಹೇಳಿದ್ದರು?

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿಯ ಇನ್ನೋವೇಶನ್ ಲ್ಯಾಬ್ ಶೃಂಗಸಭೆಯಲ್ಲಿ ಮಾತನಾಡಿದ ವಿರಾಟ್, ವೃತ್ತಿಪರವಾಗಿ ಕುಟುಂಬದ ಪಾತ್ರವನ್ನು ಒತ್ತಿ ಹೇಳಿದ್ದರು. ಈ ನಿಯಮದ ಕುರಿತ ಪ್ರಶ್ನೆಗೆ ಪರೋಕ್ಷವಾಗಿ ಬಿಸಿಸಿಐ ಚುಚ್ಚಿದ್ದ ಕೊಹ್ಲಿ, 'ಕುಟುಂಬದ ಪಾತ್ರವನ್ನು ಜನರಿಗೆ ವಿವರಿಸುವುದು ತುಂಬಾ ಕಷ್ಟ. ಏನೇ ಅಹಿತಕರ ಸಂಗತಿ ನಡೆದರೆ ಅದಕ್ಕೆ ಕುಟುಂಬ ಸದಸ್ಯರ ಸಹಾಯ ಎಷ್ಟು ಮುಖ್ಯ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಆಟದ ಮೇಲೆ ನಿಯಂತ್ರಣವೇ ಇಲ್ಲದವರನ್ನು ಗುರಿಯಾಗಿಸಿ ಕುಟುಂಬ ಸದಸ್ಯರನ್ನು ದೂರವಿಡುವುದು ತುಂಬಾ ನಿರಾಶೆಯಾಗಿದೆ. ಇದು ಕುಟುಂಬ ಸದಸ್ಯರ ಮೇಲೆ ಆರೋಪ ಹೊರಿಸಿದಂತಾಗಿದೆ ಎಂದಿದ್ದರು.

ನಿಮ್ಮ ಕುಟುಂಬವು ಯಾವಾಗಲೂ ನಿಮ್ಮ ಸುತ್ತಲೂ ಇರಬೇಕೆಂದು ಬಯಸುತ್ತೀರಾ ಎಂದು ಯಾವುದೇ ಆಟಗಾರನನ್ನು ಕೇಳಿದರೆ, ಎಲ್ಲರೂ ಹೌದು ಎನ್ನುತ್ತಾರೆ. ಯಾರೇ ಆಗಲಿ ಅಹಿತಕರ ಘಟನೆಗಳ ನಂತರ ಕೋಣೆಗೆ ಹೋಗಿ ಒಬ್ಬನೇ ಆಳುತ್ತಾ ದುಃಖಿಸಲು ಸಾಧ್ಯವೇ? ಇಂತಹ ಸಂದರ್ಭಗಳಲ್ಲಿ ಕುಟುಂಬ ಪಾತ್ರ ದೊಡ್ಡದಿರುತ್ತದೆ. ಅದರಿಂದ ಹೊರಬರಲು ನೆರವಾಗುತ್ತಾರೆ ಎಂದು ಹೇಳಿದ್ದರು. ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಕುಟುಂಬ ಸದಸ್ಯರನ್ನು ಕರೆತರಲು ಬಿಸಿಸಿಐ ನಿರ್ಬಂಧಿಸಿತ್ತು. ಆದರೆ, ಹಿರಿಯ ಆಟಗಾರರ ಮನವಿ ಮೇರೆಗೆ ಒಂದೆರಡು ಪಂದ್ಯಗಳಿಗೆ ಅವಕಾಶ ನೀಡಿ ಷರತ್ತು ವಿಧಿಸಿತ್ತು. ಅದಕ್ಕಾಗಿ ಖರ್ಚು ವೆಚ್ಚ ಆಟಗಾರರದ್ದೇ ಆಗಿತ್ತು.

ಕಪಿಲ್ ದೇವ್ ಬೆಂಬಲ

ಕ್ರಿಕೆಟಿಗರೊಂದಿಗೆ ಕುಟುಂಬ ಸದಸ್ಯರನ್ನು ಕರೆದುಕೊಂಡು ಹೋಗುವುದಕ್ಕೆ ನಿರ್ಬಂಧ ಹೇರಿದ್ದಕ್ಕೆ ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ. ನಾವು ಕ್ರಿಕೆಟ್ ಆಡುತ್ತಿದ್ದಾಗ ಕುಟುಂಬದೊಂದಿಗೆ ಹೆಚ್ಚು ಆನಂದಿಸಬೇಕೆಂದು ನಾವು ಮಾತನಾಡಿಕೊಳ್ಳುತ್ತಿದ್ದೆವು. ಆದರೆ ಇದಕ್ಕೆ ಕ್ರಿಕೆಟ್ ಮಂಡಳಿ ಅವಕಾಶ ನೀಡುತ್ತಿರಲಿಲ್ಲ. ಆದರೆ ವೃತ್ತಿಬದುಕು ಮತ್ತು ಕ್ರಿಕೆಟ್ ಎರಡೂ ಸಮತೋಲನವಾಗಿರಬೇಕು ಎಂದು ಕಪಿಲ್ ದೇವ್ ಹೇಳಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner