ಬೆನ್ ಸ್ಟೋಕ್ಸ್ ಅವರೇ ನೇರ ಕಾರಣ; ಇಂಗ್ಲೆಂಡ್ ಸರಣಿ ಸೋಲಿಗೆ ಕಾರಣ ತಿಳಿಸಿದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ
Roger Binny : ಭಾರತದ ವಿರುದ್ಧ ಇಂಗ್ಲೆಂಡ್ ಸರಣಿ ಸೋಲಲು ಪ್ರಮುಖ ಕಾರಣ ಏನೆಂಬುದನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ತಿಳಿಸಿದ್ದಾರೆ. ಅಲ್ಲದೆ, ಬಜ್ಬಾಲ್ ಆಟವನ್ನು ಟೀಕಿಸಿದ್ದಾರೆ.
ಭಾರತದ ವಿರುದ್ಧ ನಡೆಯುತ್ತಿರುವ 5 ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವು ಹೀನಾಯ ಸೋಲು ಕಂಡಿದೆ. ಆದರೆ ಈ ಟೆಸ್ಟ್ ಸರಣಿ ಸೋಲಿಗೆ ಪ್ರಮುಖ ಕಾರಣ ಏನೆಂಬುದನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದ್ದಾರೆ. ಅಲ್ಲದೆ, ಬಜ್ಬಾಲ್ ಆಟವನ್ನು ಟೀಕಿಸಿದ್ದಾರೆ. ಈ ಸರಣಿ ಸೋಲಿಗೆ ಬೆನ್ ಸ್ಟೋಕ್ಸ್ ಅವರೇ ನೇರ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 255 ರನ್ಗಳ ದೊಡ್ಡ ಹಿನ್ನಡೆಯಲ್ಲಿದೆ. ಬ್ರೆಂಡನ್ ಮೆಕಲಮ್ ಮುಖ್ಯ ತರಬೇತುದಾರರಾಗಿ ಮತ್ತು ಬೆನ್ ಸ್ಟೋಕ್ಸ್ ನಾಯಕನಾಗಿ ಒಂದು ಸರಣಿಯನ್ನೂ ಸೋಲದೆ ಭಾರತದ ಪ್ರವಾಸ ಕೈಗೊಂಡರು. ಆದರೆ ಅವರ ಬಜ್ಬಾಲ್ ಭಾರತದ ಪಿಚ್ಗಳಲ್ಲಿ ನಡೆಯಲಿಲ್ಲ.
ಪಿಟಿಐ ಜೊತೆಗಿನ ಸಂವಾದದಲ್ಲಿ ಬೆನ್ ಸ್ಟೋಕ್ಸ್ ನಾಯಕತ್ವ ಟೀಕಿಸಿದ ರೋಜರ್ ಬಿನ್ನಿ, ಸ್ಟೋಕ್ಸ್ ಅವರ ನಾಯಕತ್ವ ಆಕ್ರಮಣಕಾರಿಯಾಗಿದೆ. ಆದರೆ ಅದೇ ತಂಡಕ್ಕೆ ಮುಳುವಾಗುತ್ತಿದೆ. ತನ್ನ ಕೊನೆಯ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಪತನಕ್ಕೆ ಅವರ ನಾಯಕತ್ವವೇ ಕಾರಣ ಎಂದು ನಾನು ಭಾವಿಸುತ್ತೇನೆ. ಕಷ್ಟದ ಸಂದರ್ಭದಲ್ಲಿ ಭಾರತೀಯ ಸ್ಪಿನ್ನರ್ಗಳನ್ನು ಎದುರಿಸುವ ಬದಲಿಗೆ ದೊಡ್ಡ ಸ್ಕೋರ್ಗೆ ಮುಂದಾಗುತ್ತಿರುವುದೇ ಅವನತಿಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.
ರೋಹಿತ್ರನ್ನು ಹೊಗಳಿದ ರೋಜರ್ ಬಿನ್ನಿ
ಇದೇ ವೇಳೆ ರೋಹಿತ್ ಶರ್ಮಾ ನಾಯಕತ್ವವನ್ನು ಗುಣಗಾನ ಮಾಡಿದ್ದಾರೆ. ರೋಹಿತ್ ಬಹಳ ಚಾಣಾಕ್ಷದಿಂದ ವರ್ತಿಸಿದ್ದಾರೆ. ಯಾರಿಗೆ, ಹೇಗೆ ಬೌಲಿಂಗ್ ನೀಡಬೇಕು, ಯಾವ ಬ್ಯಾಟ್ಸ್ಮನ್ಗೆ ಯಾವ ಬೌಲರ್ ಸೂಕ್ತ ಎಂಬ ತಂತ್ರ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸಿ ಯಶಸ್ಸು ಪಡೆದರು. ಈ ನಡುವೆಯೂ ಇಂಗ್ಲೆಂಡ್ ತನ್ನ ತಂತ್ರ ಬದಲಿಸಲಿಲ್ಲ ಎಂದು ನಾನು ಭಾವಿಸುತ್ತೇನೆ. ಇಂಗ್ಲೆಂಡ್ ಎಷ್ಟೇ ಆಕ್ರಮಣಕಾರಿಯಾಗಿ ಆಡಿದರೂ ರೋಹಿತ್ ತಾಳ್ಮೆ ಕಳೆದುಕೊಳ್ಳಲಿಲ್ಲ ಎಂದು ಬಿನ್ನಿ ಬಣ್ಣಿಸಿದ್ದಾರೆ.
ಮೊದಲ ಟೆಸ್ಟ್ನಲ್ಲಿ ಆಕ್ರಮಣಕಾರಿಯಾಗಿ ಆಡಿದ ಇಂಗ್ಲೆಂಡ್ ಗೆದ್ದಿತು. ಆದರೆ, ಇಂಗ್ಲೆಂಡ್ ಇಲ್ಲಿ ಪಾಠ ಕಲಿಯಲಿಲ್ಲ. ಮೊದಲ ಟೆಸ್ಟ್ ಸೋಲಿನ ಹೊರತಾಗಿಯೂ ತಾಳ್ಮೆಯ ಮಂತ್ರ ಪಠಿಸಿದ ರೋಹಿತ್, ನಂತರದ ಟೆಸ್ಟ್ ಪಂದ್ಯಗಳಲ್ಲಿ ಗೆದ್ದು ಬೀಗಿದರು ಎಂದು ಬಿನ್ನಿ ಹೇಳಿದ್ದಾರೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಆಲೌಟ್ ಆಗಿದೆ. ಭಾರತ ತನ್ನ 2ನೇ ದಿನದಾಟಕ್ಕೆ 8 ವಿಕೆಟ್ ನಷ್ಟಕ್ಕೆ 473 ರನ್ ಗಳಿಸಿ 255 ರನ್ಗಳ ಮುನ್ನಡೆ ಸಾಧಿಸಿ ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದೆ.
ಭಾರತ ಮೊದಲ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು. ಈ ಕುರಿತು ವಿಷಾದ ವ್ಯಕ್ತಪಡಿಸಿದ ರೋಜರ್ ಬಿನ್ನಿ, ಇಂಗ್ಲೆಂಡ್ ಹೀನಾಯ ಮತ್ತು ವಿಷಾದಕರ ಪರಿಸ್ಥಿತಿಗೆ ತಂಡದ ಆಟಗಾರರನ್ನೇ ದೂಷಿಸಬೇಕು. ಈ ಸಮಯದಲ್ಲಿ ಇಂಗ್ಲೆಂಡ್ ಪರಿಸ್ಥಿತಿಗೆ ತಂಡದ ಆಟಗಾರರರೇ ಹೊಣೆಯಾಗಬೇಕು ಎಂದು ನಾನು ಭಾವಿಸುತ್ತೇನೆ. ಮೊದಲ ದಿನದಾಟದ ಬೆಳಿಗ್ಗೆ ಅವರು ಉತ್ತಮ ಆಟವನ್ನಾಡಿದರು. ಬೃಹತ್ ಸ್ಕೋರ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಂತರ ಆಗಿದ್ದೇ ಬೇರೆ. ಆ ಪರಿಸ್ಥಿತಿಗೆ ಅವರೇ ಹೊಣೆ ಎಂದು ಬಿನ್ನಿ ಹೇಳಿದ್ದಾರೆ.