ಕನ್ನಡ ಸುದ್ದಿ  /  ಕ್ರಿಕೆಟ್  /  ಟೀಮ್ ಇಂಡಿಯಾ ಕೋಚ್ ಹುದ್ದೆಗೆ ನರೇಂದ್ರ ಮೋದಿ-ಅಮಿತ್‌ ಶಾ ಸೇರಿ 3000ಕ್ಕೂ ಅಧಿಕ ಅರ್ಜಿ ಸಲ್ಲಿಕೆ!

ಟೀಮ್ ಇಂಡಿಯಾ ಕೋಚ್ ಹುದ್ದೆಗೆ ನರೇಂದ್ರ ಮೋದಿ-ಅಮಿತ್‌ ಶಾ ಸೇರಿ 3000ಕ್ಕೂ ಅಧಿಕ ಅರ್ಜಿ ಸಲ್ಲಿಕೆ!

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ 3000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಅಚ್ಚರಿಯೆಂದರೆ; ಇದರಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ, ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಹಲವು ಅಚ್ಚರಿಯ ಹೆಸರುಗಳೂ ಇವೆ.

ಟೀಮ್ ಇಂಡಿಯಾ ಕೋಚ್ ಹುದ್ದೆಗೆ ನರೇಂದ್ರ ಮೋದಿ-ಅಮಿತ್‌ ಶಾ ಸೇರಿ 3000ಕ್ಕೂ ಅಧಿಕ ಅರ್ಜಿ ಸಲ್ಲಿಕೆ
ಟೀಮ್ ಇಂಡಿಯಾ ಕೋಚ್ ಹುದ್ದೆಗೆ ನರೇಂದ್ರ ಮೋದಿ-ಅಮಿತ್‌ ಶಾ ಸೇರಿ 3000ಕ್ಕೂ ಅಧಿಕ ಅರ್ಜಿ ಸಲ್ಲಿಕೆ (PTI)

ಭಾರತೀಯ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಗಡುವು ಮುಗಿದಿದೆ. ವಿಶ್ವ ಕ್ರಿಕೆಟ್‌ನಲ್ಲಿ ಪ್ರತಿಷ್ಠಿತ ಹಾಗೂ ಅತ್ಯಂತ ಜವಾಬ್ದಾರಿಯುತ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 3000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ. ಬಿಸಿಸಿಐ ಆಹ್ವಾನಿಸಿರುವ ಅರ್ಜಿಗೆ ಹಲವರು ಆಸಕ್ತಿ ವಹಿಸಿದ್ದು, ದೊಡ್ಡ ದೊಡ್ಡ ಹೆಸರುಗಳು ಇದರಲ್ಲಿ ಕಾಣಿಸಿಕೊಂಡಿದೆ. ಅಚ್ಚರಿಯೆಂದರೆ, ನರೇಂದ್ರ ಮೋದಿ, ಅಮಿತ್‌ ಶಾ, ಸಚಿನ್ ತೆಂಡೂಲ್ಕರ್‌ ಕೂಡಾ ಬಿಸಿಸಿಐ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಹಾಕಿದ್ದಾರೆ. ಇದು ಹೇಗೆ ಸಾಧ್ಯ ಎಂಬುದನ್ನು ಮುಂದೆ ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಸದ್ಯ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಟೀಮ್‌ ಇಂಡಿಯಾ ಕೋಚ್‌ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಒಪ್ಪಿದರೆ, ಹಿಂದೆ ಮುಂದೆ ನೋಡದೆ ಬಿಸಿಸಿಐ ಈ ಸ್ಥಾನವನ್ನು ಅವರಿಗೆ ನೀಡಲಿದೆ. ಆದರೆ, ಐಪಿಎಲ್‌ನಲ್ಲಿ ಕೆಕೆಆರ್‌ ಮೆಂಟರ್ ಆಗಿ ತಂಡವು ಫೈನಲ್‌ ತಲುಪಲು ಮಹತ್ವದ ಕೊಡುಗೆ ನೀಡಿರುವ ಗಂಭೀರ್‌, ಅದರಿಂದ ಹೊರ ಬರುವ ಸಾಧ್ಯತೆ ಇಲ್ಲ. ಹೀಗಾಗಿ ಸದ್ಯ ಬಿಸಿಸಿಐ ಅರ್ಜಿಯ ಶಾರ್ಟ್‌ಲಿಸ್ಟ್‌ ಮಾಡಲು ಮುಂದಾಗಿದೆ.

ಬಿಸಿಸಿಐ ಆಹ್ವಾನಿಸಿದ ಅರ್ಜಿಯಲ್ಲಿ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್ ಮತ್ತು ಅಮಿತ್ ಶಾ ಅವರಂಥ ಪ್ರಸಿದ್ಧ ಹೆಸರುಗಳು ಕೂಡಾ ಇವೆ. ಬಿಸಿಸಿಐ ಅರ್ಜಿ ಆಹ್ವಾನಿಸುತ್ತಿದ್ದಂತೆಯೇ, ಸಾಮಾನ್ಯ ಜನರು ಕೂಡಾ ಫಾರ್ಮ್ ಅನ್ನು ಭರ್ತಿ ಮಾಡಿ ಕಳಿಸಿದ್ದಾರೆ. ತಮ್ಮದೇ ಹೆಸರಲ್ಲಿ ಅರ್ಜಿ ಹಾಕುವ ಬದಲಿಗೆ ಪ್ರಸಿದ್ಧ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರ ನಕಲಿ ಹೆಸರನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿದ್ದಾರೆ.

ಮೋದಿ, ಅಮಿತ್‌ ಶಾ ಹೆಸರಲ್ಲಿ ಅರ್ಜಿಗಳು

ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಪ್ರಕಾರ, ಮಾಜಿ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್, ಎಂಎಸ್‌ ಧೋನಿ, ಹರ್ಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಹೆಸರಿನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಅಷ್ಟೇ ಅಲ್ಲದೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಲ್ಲಿಯೂ ಅರ್ಜಿಗಳು ಬಂದಿವೆ.

“ಕಳೆದ ಬಾರಿಯೂ ಬಿಸಿಸಿಐ ಇಂಥ ಅರ್ಜಿಗಳನ್ನು ಸ್ವೀಕರಿಸಿತ್ತು. ಇದೀಗ ಈ ಬಾರಿಯೂ ಇದೇ ರೀತಿ ಆಗಿದೆ. ಬಿಸಿಸಿಐ ಗೂಗಲ್ ಫಾರ್ಮ್‌ ಮೂಲಕ ಅರ್ಜಿ ಆಹ್ವಾನಿಸಲು ಕಾರಣವೆಂದರೆ, ಅರ್ಜಿದಾರರ ಹೆಸರನ್ನು ಒಂದೇ ಶೀಟ್‌ನಲ್ಲಿ ಪರಿಶೀಲಿಸುವುದು ಸುಲಭ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಟೀಮ್ ಇಂಡಿಯಾದ ಹಾಲಿ ಕೋಚ್‌ ಆಗಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರ ಅವಧಿಯು ಟಿ20 ವಿಶ್ವಕಪ್ 2024 ಮುಗಿದ ನಂತರ ಅಂತ್ಯಗೊಳ್ಳಲಿದೆ. ಹೀಗಾಗಿ ಮುಂದಿನ ಹೆಡ್‌ ಕೋಚ್‌ ಪೋಸ್ಟ್‌ಗೆ ಸೂಕ್ತ ಅಭ್ಯರ್ಥಿಯನ್ನು ಬಿಸಿಸಿಐ ನಿರೀಕ್ಷಿಸುತ್ತಿದೆ. ಹೊಸ ಕೋಚ್‌ ಆಗಿ ಬರುವವರು ಜುಲೈ ತಿಂಗಳಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಗೆ ಭಾರತ ತಂಡದೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ.

ಮುಂದಿನ ಕೋಚ್‌ ಆಗುವವರಲ್ಲಿ ಬಿಸಿಸಿಐ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅರ್ಜಿದಾರರು ತಂಡದ ಆಟಗಾರರನ್ನು ನಿಭಾಯಿಸಲು ಹಾಗೂ ಕೆಲಸದ ಒತ್ತಡವನ್ನು ನಿಭಾಯಿಸಲು ಸಿದ್ಧರಿರಬೇಕು. ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡದ ನಿರಂತರ ಯಶಸ್ಸಿಗಾಗಿ ಶ್ರಮಿಸಬೇಕು. ವಿಶ್ವದರ್ಜೆಯ ಭಾರತೀಯ ಕ್ರಿಕೆಟ್ ತಂಡವನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡಬೇಕು. ಇಂಥಾ ವಿಶೇಷ ಸಾಮರ್ಥ್ಯವನ್ನು ಮುಂದಿನ ಹೆಡ್‌ ಕೋಚ್‌ ಅಭ್ಯರ್ಥಿಯಲ್ಲಿ ಬಿಸಿಸಿಐ ನಿರೀಕ್ಷಿಸುತ್ತಿದೆ.

ಇದನ್ನೂ ಒದಿ | ಟಿ20 ವಿಶ್ವಕಪ್ ಮೇಲೆ ಐಪಿಎಲ್‌ ಪ್ರಭಾವಗಳೇನು; 2 ತಿಂಗಳ ಅಭ್ಯಾಸ ಆಟಗಾರರ ಕೈಹಿಡಿಯುತ್ತಾ?

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ