ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಿಂದ ಮೂವರನ್ನು ಬಿಡುಗಡೆ ಮಾಡಿದ ಬಿಸಿಸಿಐ; ಆರ್‌ಸಿಬಿ ಆಟಗಾರ ವಾಪಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಿಂದ ಮೂವರನ್ನು ಬಿಡುಗಡೆ ಮಾಡಿದ ಬಿಸಿಸಿಐ; ಆರ್‌ಸಿಬಿ ಆಟಗಾರ ವಾಪಸ್

ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಿಂದ ಮೂವರನ್ನು ಬಿಡುಗಡೆ ಮಾಡಿದ ಬಿಸಿಸಿಐ; ಆರ್‌ಸಿಬಿ ಆಟಗಾರ ವಾಪಸ್

ಬ್ರಿಸ್ಬೇನ್‌ನ ಗಬ್ಬಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇದರ ಮಧ್ಯೆ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಿಂದ ಮೂವರು ಆಟಗಾರರನ್ನು ಬಿಡುಗಡೆ ಮಾಡಲಾಗಿದೆ. ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಿಂದ ಬಿಸಿಸಿಐ ಮೂವರನ್ನು ಬಿಡುಗಡೆ ಮಾಡಿದೆ (ಸಾಂದರ್ಭಿಕ ಚಿತ್ರ)
ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಿಂದ ಬಿಸಿಸಿಐ ಮೂವರನ್ನು ಬಿಡುಗಡೆ ಮಾಡಿದೆ (ಸಾಂದರ್ಭಿಕ ಚಿತ್ರ) (AFP)

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 3ನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಡುವೆ, ಬಿಸಿಸಿಐ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಬಿಜಿಟಿ ತಂಡದಿಂದ ಮೂವರು ಆಟಗಾರರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದೆ. ಅವರು ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದು, ತವರಿನಲ್ಲಿ ಆರಂಭವಾಗುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲಿದ್ದಾರೆ. ಮೂವರು ಕೂಡಾ ವೇಗದ ಬೌಲರ್‌ಗಳಾಗಿದ್ದು, ಮುಂದಿನ ಎರಡು ಪಂದ್ಯಗಳಲ್ಲಿ ತಂಡಕ್ಕೆ ಅವರ ಅಗತ್ಯವಿಲ್ಲ. ಏಕೆಂದರೆ, ಈಗಾಗಲೇ ಆಡುವ ಬಳಗ ಹೊರತಾಗಿ ಇನ್ನೂ ಇಬ್ಬರು ವೇಗದ ಬೌಲರ್‌ಗಳು ಬೆಂಚ್ ಕಾಯುತ್ತಿದ್ದಾರೆ.

ವೇಗಿಗಳಾದ ಮುಕೇಶ್ ಕುಮಾರ್, ಯಶ್ ದಯಾಳ್ ಮತ್ತು ನವದೀಪ್ ಸೈನಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಇವರನ್ನು ಟೀಮ್‌ ಇಂಡಿಯಾ ಟ್ರಾವೆಲಿಂಗ್‌ ರಿಸರ್ವ್ ಆಗಿ ಆಯ್ಕೆ ಮಾಡಲಾಗಿತ್ತು. ಹೀಗಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ವೇಗಿ ಯಶ್ ದಯಾಳ್, ಮುಖೇಶ್ ಕುಮಾರ್ ಮತ್ತು ನವದೀಪ್ ಸೈನಿ ಅವರಿಗೆ ಅವಕಾಶ ಸಿಕ್ಕಿಲ್ಲ. ಅಲ್ಲದೆ ಮುಂದೆ ನಡೆಯಲಿರುವ ಎರಡು ಪಂದ್ಯಗಳಲ್ಲಿಯೂ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ಅವರ ಫಿಟ್ನೆಸ್ ಮತ್ತು ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.

ತವರಿನಲ್ಲಿ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಮುಕ್ತಾಯಗೊಂಡಿದ್ದು, ವಿಜಯ್ ಹಜಾರೆ ಟ್ರೋಫಿ ಆರಂಭವಾಗಲಿದೆ. ಸುದ್ದಿಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮೂವರು ವೇಗದ ಬೌಲರ್‌ಗಳನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಅವರು ಭಾರತಕ್ಕೆ ಮರಳಿದರೂ, ಅತ್ತ ಆಸೀಸ್‌ನಲ್ಲಿರುವ ಭಾರತ ತಂಡದಲ್ಲಿ ಐವರು ಪ್ರಬಲ ವೇಗಿಗಳು ಇರುತ್ತಾರೆ. ಅವರಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಜೊತೆಗೆ ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣ ಸೇರಿದ್ದಾರೆ. ಇವರಲ್ಲಿ ಮೊದಲ ಮೂವರು ಈಗ ನಡೆಯುತ್ತಿರವ ಮೂರನೇ ಟೆಸ್ಟ್‌ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದ ಪ್ರಸಿದ್ಧ್‌ ಕೃಷ್ಣ ಒಂದರಲ್ಲಿಯೂ ಅವಕಾಶ ಪಡೆದಿಲ್ಲ.

ದೇವದತ್ ಪಡಿಕ್ಕಲ್ ಶೀಘ್ರದಲ್ಲೇ ರಿಲೀಸ್‌ ಸಾಧ್ಯತೆ

ಎರಡನೇ ಟೆಸ್ಟ್‌ ಪಂದ್ಯದ ನಂತರ ನಾಯಕನಾಗಿ ಮತ್ತು ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ಮರಳಿರುವುದರಿಂದ, ಮುಂದೆ ಅಭಿಮನ್ಯು ಈಶ್ವರನ್ ಮತ್ತು ದೇವದತ್ ಪಡಿಕ್ಕಲ್ ಅವರನ್ನು ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದು, ಸದ್ಯ ಭಾರತದ ಬಳಿ ಯಶಸ್ವಿ ಜೈಸ್ವಾಲ್ ಸೇರಿದಂತೆ ಮೂವರು ಆರಂಭಿಕ ಆಟಗಾರರ ಆಯ್ಕೆಗಳಿವೆ. ಮಧ್ಯಮ ಕ್ರಮಾಂಕಕ್ಕೆ ಸರ್ಫರಾಜ್ ಖಾನ್ ಕೂಡಾ ಲಭ್ಯರಿದ್ದಾರೆ.

ವಿಜಯ್ ಹಜಾರೆ ಏಕದಿನ ಟೂರ್ನಮೆಂಟ್ ಡಿಸೆಂಬರ್ 21ರಿಂದ ಆರಂಭವಾಗಲಿದೆ. ನಾಲ್ಕನೇ ಟೆಸ್ಟ್ ಪಂದ್ಯವು ಡಿಸೆಂಬರ್‌ 26ರಂದು ಆರಂಭವಾಗಲಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ವಿಕೆಟ್‌ ಕೀಪರ್), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ದೇವದತ್‌ ಪಡಿಕ್ಕಲ್‌, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್‌ ಕೀಪರ್), ಸರ್ಫರಾಜ್ ಖಾನ್, ಧ್ರುವ ಜುರೆಲ್ (ವಿಕೆಟ್‌ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.

Whats_app_banner