ಐಪಿಎಲ್ 2024ರ 2 ಪಂದ್ಯಗಳನ್ನು ಮರುನಿಗದಿಪಡಿಸಿದ ಬಿಸಿಸಿಐ; ಹೊಸ ದಿನಾಂಕ, ವೇಳಾಪಟ್ಟಿ ಬದಲಾವಣೆಗೆ ಕಾರಣ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2024ರ 2 ಪಂದ್ಯಗಳನ್ನು ಮರುನಿಗದಿಪಡಿಸಿದ ಬಿಸಿಸಿಐ; ಹೊಸ ದಿನಾಂಕ, ವೇಳಾಪಟ್ಟಿ ಬದಲಾವಣೆಗೆ ಕಾರಣ ಹೀಗಿದೆ

ಐಪಿಎಲ್ 2024ರ 2 ಪಂದ್ಯಗಳನ್ನು ಮರುನಿಗದಿಪಡಿಸಿದ ಬಿಸಿಸಿಐ; ಹೊಸ ದಿನಾಂಕ, ವೇಳಾಪಟ್ಟಿ ಬದಲಾವಣೆಗೆ ಕಾರಣ ಹೀಗಿದೆ

IPL 2024: ಪ್ರಸಕ್ತ ಆವೃತ್ತಿಯ ಐಪಿಎಲ್‌ನ ಎರಡು ಪಂದ್ಯಗಳು ನಡೆಯಬೇಕಿದ್ದ ದಿನಾಂಕಗಳಲ್ಲಿ ಬದಲಾವಣೆ ಮಾಡಲಾಗಿದೆ. ಏಪ್ರಿಲ್ 17ರಂದು ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಕೆಕೆಆರ್ ಮತ್ತು ಆರ್‌ಆರ್ ನಡುವಿನ ಪಂದ್ಯವನ್ನು ಏಪ್ರಿಲ್ 16ಕ್ಕೆ ಮುಂದೂಡಲಾಗಿದೆ. ಇನ್ನೊಂದು ಬದಲಾವಣೆ ತಿಳಿಯಲು ಈ ಸುದ್ದಿ ಓದಿ.

ಐಪಿಎಲ್ 2024ರ 2 ಪಂದ್ಯಗಳನ್ನು ಮರುನಿಗದಿಪಡಿಸಿದ ಬಿಸಿಸಿಐ
ಐಪಿಎಲ್ 2024ರ 2 ಪಂದ್ಯಗಳನ್ನು ಮರುನಿಗದಿಪಡಿಸಿದ ಬಿಸಿಸಿಐ (BCCI)

ಐಪಿಎಲ್ 2024ರ ಆವೃತ್ತಿಯ ಎರಡು ಪಂದ್ಯಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಏಪ್ರಿಲ್‌ 2ರ ಮಂಗಳವಾರ ಎರಡು ಪಂದ್ಯಗಳನ್ನು ದಿನಂಕಗಳನ್ನು ಅದಲು ಬದಲು ಮಾಡಿರುವ ಕುರಿತು ಕ್ರಿಕೆಟ್‌ ಮಂಡಳಿ ಸ್ಪಷ್ಟಪಡಿಸಿದೆ. ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಪಂದ್ಯಗಳನ್ನು ಒಂದು ದಿನ ಹಿಂದು ಮುಂದು ಮಾಡಲಾಗಿದೆ.

“ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಎರಡು ಪಂದ್ಯಗಳನ್ನು ಮರು ನಿಗದಿಪಡಿಸುವುದಾಗಿ ಬಿಸಿಸಿಐ ಘೋಷಿಸಿದೆ” ಎಂದು ಮಂಡಳಿಯು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಏಪ್ರಿಲ್ 17ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಬೇಕಿದ್ದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವನ್ನು, ಇದೀಗ ಏಪ್ರಿಲ್ 16ರಂದು ಒಂದು ದಿನ ಮುಂಚಿತವಾಗಿ ನಡೆಸಲಾಗುತ್ತಿದೆ.

ಇದೇ ವೇಳೆ, ಏಪ್ರಿಲ್ 16ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಬೇಕಿದ್ದ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯವನ್ನು ಒಂದು ದಿನ ಮುಂದೂಡಲಾಗಿದ್ದು, ಈ ಪಂದ್ಯ ಏಪ್ರಿಲ್ 17ರಂದು ನಡೆಯಲಿದೆ. ಈ ಎರಡು ಪಂದ್ಯಗಳನ್ನು ಹಿಂದು ಮುಂದು ಮಾಡಲಾಗಿದೆ.

ವೇಳಾಪಟ್ಟಿಯಲ್ಲಿ ಬದಲಾವಣೆಗೆ ಕಾರಣವೇನು?

ವೇಳಾಪಟ್ಟಿಯಲ್ಲಿ ದಿಢೀರ್‌ ಬದಲಾವಣೆ ಕುರಿತು ಬಿಸಿಸಿಐ ಯಾವುದೇ ಸ್ಪಷ್ಟ ಕಾರಣಗಳನ್ನು ತಿಳಿಸಿಲ್ಲ. ಆದರೆ ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ರಾಮ ನವಮಿ ಹಬ್ಬದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧದ ಪಂದ್ಯ ನಡೆದ ಮೂರು ದಿನಗಳಲ್ಲಿ, ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಮತ್ತೊಂದು ಪಂದ್ಯಕ್ಕೆ ಭದ್ರತೆ ಒದಗಿಸುವುದು ಕಷ್ಟ ಎಂದು ಕೋಲ್ಕತಾ ಪೊಲೀಸರು ಹೇಳಿಕೊಂಡಿದ್ದರು. ಹೀಗಾಗಿ ಈ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ | ಏಪ್ರಿಲ್ 2, 2011; ಶತಕೋಟಿ ಭಾರತೀಯರ ಕನಸು ನನಸಾದ ದಿನ; 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಗೆದ್ದ ಐತಿಹಾಸಿಕ ದಿನದ ಮೆಲುಕು

ರಾಮನವಮಿಯ ಸಮಯದಲ್ಲಿ ಪಂದ್ಯ ನಿಗದಿಯಾಗಿರುವುದರಿಂದ, ಭದ್ರತೆ ಒದಗಿಸುವುದು ಪೊಲೀಸರಿಗೆ ಸವಾಲಾಗಿದೆ. ಈಗಾಗಲೇ ಚುನಾವಣೆಗೆ ಭದ್ರತೆ ಒದಗಿಸುವ ಸಲುವಾಗಿ ಪೊಲೀಸರ ಒಂದು ತಂಡವನ್ನು ಅದಕ್ಕಾಗಿ ನಿಯೋಜಿಸಲಾಗಿದೆ. ಹೀಗಾಗಿ ಏಪ್ರಿಲ್ 17ರಂದು ನಡೆಯಲಿರುವ ಪಂದ್ಯಕ್ಕೆ ಅಗತ್ಯ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಕೋಲ್ಕತಾ ಪೊಲೀಸರು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ನೇಹಾಶಿಶ್ ಗಂಗೂಲಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪಂದ್ಯವನ್ನು ಒಂದು ದಿನ (ಏಪ್ರಿಲ್ 16) ಮುಂದೂಡಬೇಕು ಅಥವಾ ಏಪ್ರಿಲ್ 18ಕ್ಕೆ 24 ಗಂಟೆಗಳ ಕಾಲ ಮುಂದೂಡಬೇಕು ಎಂದು ಸಿಎಬಿ ಸೂಚಿಸಿತ್ತು.

ಈ ನಡುವೆ, ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಏಪ್ರಿಲ್ 19ರಂದು ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯಲಿದೆ. ಕೋಲ್ಕತ್ತಾದಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ.

ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿದೆ. ತವರು ಮೈದಾನ ಈಡನ್ ಗಾರ್ಡನ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಾಲ್ಕು ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಋತುವನ್ನು ಗೆಲುವಿನೊಂದಿಗೆ ಆರಂಭಿಸಿತು. ಆ ಬಳಿಕ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಕೆಕೆಆರ್ ತಂಡವು ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿಶಾಖಪಟ್ಟಣಂನಲ್ಲಿ ಕಣಕ್ಕಿಳಿಯುತ್ತಿದೆ.

Whats_app_banner