ಸಾಲು ಸಾಲು ಸೋಲು; ಪ್ರವಾಸದ ವೇಳೆ ಆಟಗಾರರೊಂದಿಗೆ ಪತ್ನಿ-ಕುಟುಂಬಸ್ಥರ ಪ್ರಯಾಣಕ್ಕೆ ಬಿಸಿಸಿಐ ನಿರ್ಬಂಧ
ಕನ್ನಡ ಸುದ್ದಿ  /  ಕ್ರಿಕೆಟ್  /  ಸಾಲು ಸಾಲು ಸೋಲು; ಪ್ರವಾಸದ ವೇಳೆ ಆಟಗಾರರೊಂದಿಗೆ ಪತ್ನಿ-ಕುಟುಂಬಸ್ಥರ ಪ್ರಯಾಣಕ್ಕೆ ಬಿಸಿಸಿಐ ನಿರ್ಬಂಧ

ಸಾಲು ಸಾಲು ಸೋಲು; ಪ್ರವಾಸದ ವೇಳೆ ಆಟಗಾರರೊಂದಿಗೆ ಪತ್ನಿ-ಕುಟುಂಬಸ್ಥರ ಪ್ರಯಾಣಕ್ಕೆ ಬಿಸಿಸಿಐ ನಿರ್ಬಂಧ

ಮುಂಬೈನಲ್ಲಿ ನಡೆದ ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿವಿಧ ಟೂರ್ನಿ ಹಾಗೂ ಸರಣಿಯ ಸಂಬಂದ ಟೀಮ್‌ ಇಂಡಿಯಾ ಆಟಗಾರರ ಪ್ರವಾಸದ ಸಮಯದಲ್ಲಿ, ಅವರ ಪತ್ನಿ ಅಥವಾ ಕುಟುಂಬ ಸದಸ್ಯರನ್ನು ಕರೆದೊಯ್ಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸಾಲು ಸಾಲು ಸೋಲು; ಪ್ರವಾಸದ ವೇಳೆ ಆಟಗಾರರೊಂದಿಗೆ ಪತ್ನಿ-ಕುಟುಂಬಸ್ಥರ ಪ್ರಯಾಣಕ್ಕೆ ನಿರ್ಬಂಧ
ಸಾಲು ಸಾಲು ಸೋಲು; ಪ್ರವಾಸದ ವೇಳೆ ಆಟಗಾರರೊಂದಿಗೆ ಪತ್ನಿ-ಕುಟುಂಬಸ್ಥರ ಪ್ರಯಾಣಕ್ಕೆ ನಿರ್ಬಂಧ (AFP)

ಭಾರತೀಯ ಕ್ರಿಕೆಟ್‌ ತಂಡವು ಇತ್ತೀಚೆಗೆ ಮೇಲಿಂದ ಮೇಲೆ ಕಳಪೆ ಪ್ರದರ್ಶನ ನೀಡುತ್ತಿದೆ. ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಅಬ್ಬರ ಕಂಡುಬಂದರೂ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದೆ. ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ 0-3 ಅಂತರದಿಂದ ವೈಟ್‌ವಾಶ್‌ ಮುಖಭಂಗ ಅನುಭವಿಸಿದ ಬೆನ್ನಲ್ಲೇ, ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 1-3 ಅಂತರದಲ್ಲಿ ಸೋಲು ಎದುರಾಯ್ತು. ಇದು ತಂಡದ ಗಂಭೀರ ಪರಾಮರ್ಶೆ ಮಾಡುವಂತೆ ಪ್ರೇರೇಪಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ, ತಂಡದ ಪ್ರದರ್ಶನವನ್ನು ಸುಧಾರಿಸುವ ಸಲುವಾಗಿ ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ.

ಭಾರತ ಕ್ರಿಕೆಟ್‌ ತಂಡದ ಪ್ರವಾಸದ ಸಮಯದಲ್ಲಿ ಆಟಗಾರರ ಪತ್ನಿಯರು ಹಾಗೂ ಕುಟುಂಬ ಸದಸ್ಯರನ್ನು ಕರೆದೊಯ್ಯುವುದನ್ನು ನಿರ್ಬಂಧಿಸಿ, ಬಿಸಿಸಿಐ ಕಠಿಣ ಕ್ರಮ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮುಂಬೈನಲ್ಲಿ ಇತ್ತೀಚೆಗೆ ನಡೆದ ಬಿಸಿಸಿಐ ಪರಿಶೀಲನಾ ಸಭೆಯ ನಂತರ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ‘ದೈನಿಕ್ ಜಾಗರಣ್’ ವರದಿ ಮಾಡಿದೆ.

ಕೋವಿಡ್ -19 ಸಮಯದಲ್ಲಿ ರದ್ದುಪಡಿಸಲಾದ ಹಳೆಯ ನಿಯಮವನ್ನು ಮತ್ತೆ ಪರಿಚಯಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿ ಹೇಳಿದೆ. ಬಿಸಿಸಿಐನ ಮುಂಬೈ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರು ಈ ಬಗ್ಗೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರೊಂದಿಗೆ ಪ್ರಯಾಣಿಸಲು ಅವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಅನುಮತಿ ಇಲ್ಲ ಎಂದು ಅವರು ಹೇಳಿದ್ದಾರೆ.

ವಿದೇಶ ಪ್ರವಾಸದ ಸಮಯದಲ್ಲಿ ಆಟಗಾರರೊಂದಿಗೆ ಅವರ ಕುಟುಂಬಸ್ಥರು ಕೂಡಾ ಇದ್ದರೆ ಆಟಗಾರರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಮಂಡಳಿಯ ಅಧಿಕಾರಿ ಅಭಿಪ್ರಾಯ.

14 ದಿನಗಳವರೆಗೆ ಮಾತ್ರ ಜೊತೆಗಿರಲು ಅನುಮತಿ

ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಸಮಯದಲ್ಲಿ ಹಲವು ಕ್ರಿಕೆಟಿಗರ ಪತ್ನಿ ಹಾಗೂ ಕುಟುಂಬ ಸದಸ್ಯರು ಪ್ರವಾಸದ ಸಂಪೂರ್ಣ ಅವಧಿಗೆ ಆಸ್ಟ್ರೇಲಿಯಾದಲ್ಲಿಯೇ ಇದ್ದರು. ಬಿಸಿಸಿಐ ಹೊಸ ನಿಯಮದ ಪ್ರಕಾರ, 45 ದಿನಗಳಿಗಿಂತ ಹೆಚ್ಚು ಅವಧಿಯ ಪಂದ್ಯಾವಳಿ ಅಥವಾ ಸರಣಿಯ ಸಮಯದಲ್ಲಿ, ಆಟಗಾರರ ಪತ್ನಿ ಅಥವಾ ಕುಟುಂಬಸ್ಥರರು 14 ದಿನಗಳವರೆಗೆ ಮಾತ್ರ ಅವರೊಂದಿಗೆ ಉಳಿಯಬಹುದು. 45 ದಿನಗಳಿಗಿಂತ ಕಡಿಮೆ ಅವಧಿಯ ಪ್ರವಾಸದ ಸಮಯದಲ್ಲಿ ಕುಟುಂಬಸ್ಥರ ವಾಸ್ತವ್ಯದ ಮಿತಿ ಕೇವಲ ಏಳು ದಿನಗಳು ಮಾತ್ರ.

ಎಲ್ಲರೂ ಒಟ್ಟಿಗೆ ತಂಡದ ಬಸ್‌ನಲ್ಲೇ ಪ್ರಯಾಣಿಸಬೇಕು

ಯಾವುದೇ ಆಟಗಾರನೂ ಪ್ರತ್ಯೇಕವಾಗಿ ಪ್ರಯಾಣಿಸಲು ಅವಕಾಶವಿಲ್ಲ ಎಂದು ಬಿಸಿಸಿಐ ಕಠಿಣ ನಿಯಮ ಜಾರಿಗೆ ತಂದಿದೆ. ಕಳೆದ ಕೆಲವು ವರ್ಷಗಳಿಂದ ಕೆಲವು ಆಟಗಾರರು ತಂಡದ ಬಸ್‌ನಲ್ಲಿ ಹೋಗುವ ಬದಲು ಪ್ರತ್ಯೇಕವಾಗಿ ಪ್ರಯಾಣಿಸಿದ್ದಾರೆ. ಹೀಗಾಗಿ ಈ ನಿಬಂಧನೆ ವಿಧಿಸಲಾಗಿದೆ ಎಂದು ವರದಿಯಾಗಿದೆ. “ತಂಡದ ಒಗ್ಗಟ್ಟನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಆಟಗಾರರು ತಂಡದ ಬಸ್‌ನಲ್ಲಿ ಮಾತ್ರವೇ ಪ್ರಯಾಣಿಸಲಿದ್ದಾರೆ. ಆಟಗಾರ ಎಷ್ಟೇ ದೊಡ್ಡವನಾಗಿದ್ದರೂ, ಪ್ರತ್ಯೇಕವಾಗಿ ಪ್ರಯಾಣಿಸಲು ಅನುಮತಿ ಇಲ್ಲ,” ಎಂದು ವರದಿಯಲ್ಲಿ ಹೇಳಲಾಗಿದೆ.

Whats_app_banner