ಬೆಂಗಳೂರಿನ ನೂತನ ಕ್ರಿಕೆಟ್ ಅಕಾಡೆಮಿ ಉದ್ಘಾಟನೆ ದಿನಾಂಕ ನಿಗದಿ; ವಿಶ್ವದರ್ಜೆ ಸೌಲಭ್ಯವಿರುವ ಎನ್‌ಸಿಎ ವೈಶಿಷ್ಟ್ಯಗಳಿವು
ಕನ್ನಡ ಸುದ್ದಿ  /  ಕ್ರಿಕೆಟ್  /  ಬೆಂಗಳೂರಿನ ನೂತನ ಕ್ರಿಕೆಟ್ ಅಕಾಡೆಮಿ ಉದ್ಘಾಟನೆ ದಿನಾಂಕ ನಿಗದಿ; ವಿಶ್ವದರ್ಜೆ ಸೌಲಭ್ಯವಿರುವ ಎನ್‌ಸಿಎ ವೈಶಿಷ್ಟ್ಯಗಳಿವು

ಬೆಂಗಳೂರಿನ ನೂತನ ಕ್ರಿಕೆಟ್ ಅಕಾಡೆಮಿ ಉದ್ಘಾಟನೆ ದಿನಾಂಕ ನಿಗದಿ; ವಿಶ್ವದರ್ಜೆ ಸೌಲಭ್ಯವಿರುವ ಎನ್‌ಸಿಎ ವೈಶಿಷ್ಟ್ಯಗಳಿವು

NCA Bengaluru: ಉದ್ಯಾನ ನಗರಿ ಬೆಂಗಳೂರಿನಲ್ಲಿ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಉದ್ಘಾಟನೆಯಾಗಲಿದೆ. ಈಗಾಗಲೇ ಒಂದು ಎನ್‌ಸಿಎ ನಗರದಲ್ಲಿದ್ದು, ಹೊಸದಾಗಿ ನಿರ್ಮಾಣವಾಗಿರುವ ಅಕಾಡೆಮಿಯಲ್ಲಿ ಆಟಗಾರರು ವಿಶ್ವದರ್ಜೆಯ ಸೌಲಭ್ಯಗಳನ್ನು ಪಡೆಯಲಿದ್ದಾರೆ.

ಬೆಂಗಳೂರಿನ ನೂತನ ಕ್ರಿಕೆಟ್ ಅಕಾಡೆಮಿ ಉದ್ಘಾಟನೆ ದಿನಾಂಕ ನಿಗದಿ; ಎನ್‌ಸಿಎ ವೈಶಿಷ್ಟ್ಯಗಳಿವು
ಬೆಂಗಳೂರಿನ ನೂತನ ಕ್ರಿಕೆಟ್ ಅಕಾಡೆಮಿ ಉದ್ಘಾಟನೆ ದಿನಾಂಕ ನಿಗದಿ; ಎನ್‌ಸಿಎ ವೈಶಿಷ್ಟ್ಯಗಳಿವು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಉದ್ಯಾನ ನಗರಿ ಬೆಂಗಳೂರಿನಲ್ಲಿ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಿರ್ಮಾಣ ಮಾಡಿದೆ. ಹೊಸ ಎನ್‌ಸಿಎಯಲ್ಲಿ ಆಟಗಾರರಿಗೆ ವಿಶ್ವದರ್ಜೆಯ ಸೌಲಭ್ಯಗಳು ಸಿಗಲಿವೆ. ಕೆಲವು ವಾರಗಳ ಹಿಂದೆ, ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಎನ್‌ಸಿಎ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮಾಹಿತಿ ನೀಡಿದ್ದರು. ಇದೀಗ ಆ ಕ್ರಿಕೆಟ್‌ ಅಕಾಡೆಮಿಯ ಉದ್ಘಾಟನೆಗೆ ಸಮಯ ಕೂಡಿ ಬಂದಿದೆ. ಸೆಪ್ಟೆಂಬರ್ 28ರ ಶನಿವಾರ ನೂತನ ಎನ್‌ಸಿಎ ಉದ್ಘಾಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಇಮೇಲ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.

ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಗಿಂತ ಒಂದು ದಿನ ಮುಂಚಿತವಾಗಿ ಉದ್ಯಾನ ನಗರಿಯ ನೂತನ ಎನ್‌ಸಿಎ ಉದ್ಘಾಟನೆಗೊಳ್ಳಲಿದೆ. ಅದರ ಮರುದಿನ, ಅಂದರೆ ಸೆಪ್ಟೆಂಬರ್‌ 29ರ ಭಾನುವಾರ ಮಂಡಳಿಯ 93ನೇ ವಾರ್ಷಿಕ ಮಹಾಸಭೆ ಕೂಡಾ ಬೆಂಗಳೂರಿನಲ್ಲಿಯೇ ನಡೆಯಲಿದೆ.

ಬೆಂಗಳೂರಿನಲ್ಲಿ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಉದ್ಘಾಟನೆಗೆ ನಿಮ್ಮನ್ನು ಆಹ್ವಾನಿಸಲು ನಾವು ಸಂತೋಷಪಡುತ್ತೇವೆ. ಎನ್‌ಸಿಎ ಅನ್ನು ಸೆಪ್ಟೆಂಬರ್ 28ರಂದು ಉದ್ಘಾಟಿಸಲಾಗುವುದು. ಈ ಕಾರ್ಯಕ್ರಮಕ್ಕೆ ನಿಮ್ಮ ಬೆಂಬಲವು ಅತ್ಯಂತ ಮೌಲ್ಯಯುತವಾಗಿದೆ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೀರಿ ಮತ್ತು ಉಪಸ್ಥಿತಿಯಿಂದ ನಮ್ಮನ್ನು ಗೌರವಿಸುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ಶಾ ಹೇಳಿಕೊಂಡಿದ್ದಾರೆ.

ಹೊಸ ಎನ್‌ಸಿಎ ವಿಶೇಷತೆಗಳೇನು?

ನೂತನ ಕ್ರಿಕೆಟ್‌ ಅಕಾಡೆಮಿಯು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಅಕಾಡೆಮಿಯಲ್ಲಿ ಮೂರು ವಿಶ್ವ ದರ್ಜೆಯ ಕ್ರೀಡಾ ಮೈದಾನಗಳು, ಅಭ್ಯಾಸಕ್ಕಾಗಿ 45 ಪಿಚ್‌ಗಳು ಇರಲಿವೆ. ಇದೇ ವೇಳೆ ಮಳೆಯ ಸಂದರ್ಭದಲ್ಲಿ ಅಭ್ಯಾಸಕ್ಕಾಗಿ ಒಳಾಂಗಣ ಕ್ರಿಕೆಟ್ ಪಿಚ್‌ಗಳು ಕೂಡಾ ಇವೆ. ಒಲಿಂಪಿಕ್ ಗಾತ್ರದ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ, ಅತ್ಯಾಧುನಿಕ ತರಬೇತಿ ವ್ಯವಸ್ಥೆ, ಗಾಯಾಳುಗಳಿಗೆ ಚೇತರಿಕೆ ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳನ್ನು ಹೊಂದಿರುತ್ತದೆ.

ಬೆಂಗಳೂರಿನಲ್ಲಿ ಈಗಾಗಲೇ ಒಂದು ಕ್ರಿಕೆಟ್‌ ಅಕಾಡೆಮಿ ಇದೆ. ಈ ಹಳೆಯ ಎನ್‌ಸಿಎ ಗಾತ್ರದಲ್ಲಿ ಹೊಸ ಅಕಾಡೆಮಿಗಿಂತ ತುಲನಾತ್ಮಕವಾಗಿ ಚಿಕ್ಕದು. ಆದರೆ, ಹೊಸ ಎನ್‌ಸಿಎ ಕ್ಯಾಂಪಸ್ ಬರೋಬ್ಬರಿ 16,000 ಚದರ ಅಡಿ ಜಿಮ್ ಮತ್ತು ಓಪನ್ ಏರ್ ಥಿಯೇಟರ್ ಸೇರಿದಂತೆ 240ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿದೆ. ಕ್ರಿಕೆಟ್‌ ಕ್ರೀಡೆಗೆ ಬೇಕಾದ ವ್ಯವಸ್ಥೆಯನ್ನು ಹೊರತುಪಡಿಸಿ ಬ್ಯಾಂಕ್, ಫಾರ್ಮಸಿ, ಆಸ್ಪತ್ರೆ, ಕೊರಿಯರ್, ಸಲೂನ್, ಎಟಿಎಂ, ಸೈಕ್ಲಿಂಗ್ ಟ್ರ್ಯಾಕ್, ಬಾಸ್ಕೆಟ್‌ಬಾಲ್, ಟೆನಿಸ್ ಮತ್ತು ಫುಟ್‌ಬಾಲ್ ಕೋರ್ಟ್‌ಗಳಂತಹ ಸೌಲಭ್ಯಗಳು ಕೂಡಾ ಇವೆ.

Whats_app_banner