ಐಪಿಎಲ್ 2025ರಲ್ಲಿ ತಂಬಾಕು, ಆಲ್ಕೋಹಾಲ್ ಮತ್ತು ಕ್ರಿಪ್ಟೋ ಜಾಹೀರಾತು ನಿಷೇಧ; ಬಿಸಿಸಿಐ ಮಹತ್ವದ ನಿರ್ಧಾರ
ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ನಡುವೆ ಐಪಿಎಲ್ 2025ರ ಆರಂಭಿಕ ಪಂದ್ಯಕ್ಕೆ ಮೊದಲು ಕೋಲ್ಕತ್ತಾದಲ್ಲಿ ನಡೆಯಲಿರುವ ಸಭೆಯಲ್ಲಿ ಬಿಸಿಸಿಐ ಮಹತ್ವದ ಚರ್ಚೆ ನಡೆಸಲಿದೆ. ಐಪಿಎಲ್ 18ರ ಆವೃತ್ತಿ ವೇಳೆ ತಂಬಾಕು, ಆಲ್ಕೋಹಾಲ್ ಮತ್ತು ಕ್ರಿಪ್ಟೋ ಜಾಹೀರಾತು ನಿಷೇಧಕ್ಕೆ ಮಂಡಳಿ ನಿರ್ಧರಿಸಿದೆ.

ಐಪಿಎಲ್ ಸೇರಿದಂತೆ ಭಾರತದಲ್ಲಿ ಕೆಲವೊಂದು ಕ್ರಿಕೆಟ್ ಪಂದ್ಯಗಳು ನಡೆಯುವಾಗ ತಂಬಾಕು ಸೇರಿದಂತೆ ಕೆಲವೊಂದು ಜಾಹೀರಾತುಗಳು ಮೈದಾನದಲ್ಲಿ ಗೋಚರಿಸುತ್ತಿದ್ದವು. ಇದು ವೀಕ್ಷಕರ ವಿರೋಧಕ್ಕೂ ಕಾರಣವಾಗಿತ್ತು. ಆರೋಗ್ಯಕ್ಕೆ ಹಾನಿಕರವಾಗಿರುವ ಉತ್ಪನ್ನಗಳ ಜಾಹೀರಾತು ಪ್ರದರ್ಶನವು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಶೋಭೆಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೀಗ ಐಪಿಎಲ್ 2025ರ ಸಮಯದಲ್ಲಿ ಸರೋಗೇಟ್ ಜಾಹೀರಾತುಗಳು (ಪರೋಕ್ಷವಾಗಿ ಉತ್ಪನ್ನವೊಂದರ ಜಾಹೀರಾರು) ಸೇರಿದಂತೆ ಎಲ್ಲಾ ರೀತಿಯ ತಂಬಾಕು, ಆಲ್ಕೋಹಾಲ್ ಮತ್ತು ಕ್ರಿಪ್ಟೋ ಪ್ರಾಯೋಜಕತ್ವಗಳನ್ನು ನಿಷೇಧಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಜ್ಜಾಗಿದೆ.
ಐಪಿಎಲ್ ಟೂರ್ನಿಯ 18ನೇ ಆವೃತ್ತಿಯು ಮಾರ್ಚ್ 22ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಲಿದೆ. ಈ ಬಾರಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮೊದಲ ಪಂದ್ಯದಲ್ಲಿ ಆಡಲಿವೆ.
ಕೋಲ್ಕತಾದಲ್ಲಿ ಐಪಿಎಲ್ 2025ರ ಆವೃತ್ತಿ ಪ್ರಾರಂಭವಾಗುವ ದಿನವೇ, ಬಿಸಿಸಿಐ ಜಾಹೀರಾತು ನಿಷೇಧದ ವಿಷಯವಾಗಿ ಔಪಚಾರಿಕವಾಗಿ ಚರ್ಚಿಸಲಿದೆ. ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯಕ್ಕೂ ಮುನ್ನ ಈ ಸಭೆ ನಡೆಯಲಿದೆ. ಐಪಿಎಲ್ ಸಮಯದಲ್ಲಿ ಸರೋಗೇಟ್ ಜಾಹೀರಾತುಗಳು ಸೇರಿದಂತೆ ಎಲ್ಲಾ ರೀತಿಯ ತಂಬಾಕು ಮತ್ತು ಆಲ್ಕೋಹಾಲ್ ಪ್ರಚಾರಗಳನ್ನು ನಿಷೇಧಿಸುವಂತೆ ಆರೋಗ್ಯ ಸಚಿವಾಲಯವು ಬಿಸಿಸಿಐಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಂದಿದೆ. “ತಂಬಾಕು ಮತ್ತು ಕ್ರಿಪ್ಟೋ ಬ್ರ್ಯಾಂಡ್‌ಗಳಿಂದ ಪ್ರಾಯೋಜಕತ್ವದ ಕುರಿತು ಚರ್ಚೆ,” ಈ ವಿಷಯವು ಕಾರ್ಯಸೂಚಿಯಲ್ಲಿ ಐಟಂ ಸಂಖ್ಯೆ 9 ರಲ್ಲಿದೆ.
ಮಹಿಳಾ ಏಕದಿನ ವಿಶ್ವಕಪ್ ಆಯೋಜನೆ ಕುರಿತು ಚರ್ಚೆ
ಈ ಬಾರಿ ಭಾರತದ ಆತಿಥ್ಯದಲ್ಲಿ ಐಸಿಸಿ ವನಿತೆಯರ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ. 2023ರಲ್ಲಿ ಪುರುಷರ ಏಕದಿನ ವಿಶ್ವಕಪ್ ನಡೆದಿತ್ತು. ಈ ಬಾರಿ ವನಿತೆಯರ ಟೂರ್ನಿಯ ಆತಿಥ್ಯ ಸ್ಥಳಗಳ ಬಗ್ಗೆ ಬಿಸಿಸಿಐ ಇದೇ ದಿನ ಸಭೆ ನಡೆಸಲಿದೆ. ಮಹಿಳಾ ವಿಶ್ವಕಪ್ ಆಯೋಜಿಸಲು ಸಮಿತಿಯನ್ನು ರಚಿಸಲಿದೆ. ಬಿಸಿಸಿಐ ಕೊನೆಯ ಬಾರಿಗೆ 2013ರಲ್ಲಿ ಮಹಿಳಾ ಏಕದಿನ ವಿಶ್ವಕಪ್ ಆಯೋಜಿಸಿತ್ತು. ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಪಂದ್ಯಾವಳಿಯ ನಿಖರವಾದ ವೇಳಾಪಟ್ಟಿಯನ್ನು ಇನ್ನೂ ರೂಪಿಸಿಲ್ಲ.
ಸುದ್ದಿಸಂಸ್ಥೆ ಪಿಟಿಐಗೆ ಲಭ್ಯವಾದ ಕಾರ್ಯಸೂಚಿಯ ಪ್ರಕಾರ, "ಮಹಿಳಾ ಕ್ರಿಕೆಟ್ ವಿಶ್ವಕಪ್ 2025ಕ್ಕಾಗಿ ಎಲ್ಒಸಿ ರಚನೆ ಮತ್ತು ಮಹಿಳಾ ಕ್ರಿಕೆಟ್ ವಿಶ್ವಕಪ್ 2025ರ ಸ್ಥಳಗಳ ಬಗ್ಗೆ ಚರ್ಚೆ ನಡೆಯಲಿದೆ" ಎಂದು ಹೇಳಲಾಗಿದೆ.
