ಪಾಕ್ ಸಚಿವರ ನೇತೃತ್ವದಲ್ಲಿ ಆಡಲ್ಲ, ಪಾಕಿಸ್ತಾನ ಕ್ರಿಕೆಟ್ ಅನ್ನು ಪ್ರತ್ಯೇಕಿಸಲು ಏಷ್ಯಾಕಪ್‌ನಿಂದ ಹಿಂದೆ ಸರಿಯಲು ಮುಂದಾದ ಬಿಸಿಸಿಐ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕ್ ಸಚಿವರ ನೇತೃತ್ವದಲ್ಲಿ ಆಡಲ್ಲ, ಪಾಕಿಸ್ತಾನ ಕ್ರಿಕೆಟ್ ಅನ್ನು ಪ್ರತ್ಯೇಕಿಸಲು ಏಷ್ಯಾಕಪ್‌ನಿಂದ ಹಿಂದೆ ಸರಿಯಲು ಮುಂದಾದ ಬಿಸಿಸಿಐ

ಪಾಕ್ ಸಚಿವರ ನೇತೃತ್ವದಲ್ಲಿ ಆಡಲ್ಲ, ಪಾಕಿಸ್ತಾನ ಕ್ರಿಕೆಟ್ ಅನ್ನು ಪ್ರತ್ಯೇಕಿಸಲು ಏಷ್ಯಾಕಪ್‌ನಿಂದ ಹಿಂದೆ ಸರಿಯಲು ಮುಂದಾದ ಬಿಸಿಸಿಐ

ಪ್ರಸ್ತುತ ಎಸಿಸಿ ಅಧ್ಯಕ್ಷರಾಗಿರುವವರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ. ಇವರು ಪಾಕಿಸ್ತಾನ ಸರ್ಕಾರದಲ್ಲಿ ಆಂತರಿಕ ಸಚಿವರೂ ಹೌದು. ಪಾಕಿಸ್ತಾನ ಸಚಿವರೊಬ್ಬರ ನಾಯಕತ್ವದಡಿ ನಡೆಯುವ ಟೂರ್ನಿಯಲ್ಲಿ ಭಾರತ ಆಡಲ್ಲ ಎಂಬುದನ್ನು ಬಿಸಿಸಿಐ ಕಟುವಾಗಿ ಹೇಳಿದೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನ ಕ್ರಿಕೆಟ್ ಅನ್ನು ಪ್ರತ್ಯೇಕಿಸಲು ಏಷ್ಯಾಕಪ್‌ನಿಂದ ಹಿಂದೆ ಸರಿಯಲು ಮುಂದಾದ ಬಿಸಿಸಿಐ
ಪಾಕಿಸ್ತಾನ ಕ್ರಿಕೆಟ್ ಅನ್ನು ಪ್ರತ್ಯೇಕಿಸಲು ಏಷ್ಯಾಕಪ್‌ನಿಂದ ಹಿಂದೆ ಸರಿಯಲು ಮುಂದಾದ ಬಿಸಿಸಿಐ (AFP)

ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದ ನಂತರ, ಕ್ರಿಕೆಟ್‌ ವಿಷಯವಾಗಿಯೂ ಭಾರತ ಪಾಕಿಸ್ತಾನ ವಿರುದ್ಧ ಕಠಿಣ ನಿರ್ಧಾರಕ್ಕೆ ಬರುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಆಯೋಜಿಸುವ ಎಲ್ಲಾ ಪಂದ್ಯಾವಳಿಗಳಿಂದ ಹೊರಗುಳಿಯಲು ಮುಂದಾಗಿದೆ. ಆ ಮೂಲಕ ಪಾಕಿಸ್ತಾನ ಕ್ರಿಕೆಟ್ ಅನ್ನು ಪ್ರತ್ಯೇಕಿಸಲು ಮುಂದಾಗಿದೆ. ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನ ಸಣ್ಣತನಕ್ಕೆ ಧಿಕ್ಕಾರವಾಗಿ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನಕ್ಕೆ ಇದರಿಂದ ದೊಡ್ಡ ಪೆಟ್ಟು ಬೀಳುವುದು ಸ್ಪಷ್ಟ.

ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ವನಿತೆಯರ ಉದಯೋನ್ಮುಖ ತಂಡಗಳ ಏಷ್ಯಾಕಪ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪುರುಷರ ಏಷ್ಯಾಕಪ್‌ನಿಂದ ಹಿಂದೆ ಸರಿಯುವ ನಿರ್ಧಾರದ ಬಗ್ಗೆ ಬಿಸಿಸಿಐ ಈಗಾಗಲೇ ಎಸಿಸಿಗೆ ಮಾಹಿತಿ ನೀಡಿದೆ ಎಂದು ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಇದರಲ್ಲಿ ಪುರುಷರ ಏಷ್ಯಾಕಪ್‌ಗೆ ಭಾರತವೇ ಆತಿಥೇಯ ರಾಷ್ಟ್ರ.

ಭಾರತದ ಈ ಗಟ್ಟಿ ನಿರ್ಧಾರಕ್ಕೆ ಮಹತ್ವದ ಕಾರಣವೂ ಇದೆ. ಪ್ರಸ್ತುತ ಎಸಿಸಿ ಅಧ್ಯಕ್ಷರಾಗಿರುವವರು ಮೊಹ್ಸಿನ್ ನಖ್ವಿ. ಇವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷ ಮಾತ್ರವಲ್ಲ. ಪಾಕಿಸ್ತಾನ ಸರ್ಕಾರದಲ್ಲಿ ಆಂತರಿಕ ಸಚಿವರೂ ಹೌದು. “ಪಾಕಿಸ್ತಾನದ ಸಚಿವರಾಗಿರುವ ವ್ಯಕ್ತಿಯೊಬ್ಬರು ಎಸಿಸಿ ಅಧ್ಯಕ್ಷರಾಗಿ ಆಯೋಜಿಸುವ ಪಂದ್ಯಾವಳಿಯಲ್ಲಿ ಭಾರತ ತಂಡ ಆಡಲು ಸಾಧ್ಯವಿಲ್ಲ. ಇದು ರಾಷ್ಟ್ರದ ಭಾವನೆಗೆ ಸಂಬಂಧಿಸಿದ ವಿಷಯ. ಮುಂಬರುವ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾಕಪ್‌ನಿಂದ ನಾವು ಹಿಂದೆ ಸರಿಯುವ ಬಗ್ಗೆ ಎಸಿಸಿಗೆ ಮೌಖಿಕವಾಗಿ ಸಂವಹನ ನಡೆಸಿದ್ದೇವೆ. ಅಲ್ಲದೆ ಅವರ ಈವೆಂಟ್‌ಗಳಲ್ಲಿ ಮುಂದಿನ ದಿನಗಳಲ್ಲಿ ಭಾಗವಹಿಸುವುದನ್ನು ಸದ್ಯ ತಡೆಹಿಡಿಯಲಾಗಿದೆ. ನಾವು ಭಾರತ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ,” ಎಂದು ಬಿಸಿಸಿಐ ಮೂಲವೊಂದು ದಿನಪತ್ರಿಕೆಗೆ ತಿಳಿಸಿದೆ.

ಭಾರತ vs ಪಾಕಿಸ್ತಾನ ಪಂದ್ಯ ಇಲ್ಲದಿದ್ದರೆ?

ಬಿಸಿಸಿಐನ ಈ ಕ್ರಮವು ಭಾರತ ಆತಿಥ್ಯ ವಹಿಸಿರುವ ಏಷ್ಯಾ ಕಪ್ ಪಂದ್ಯಾವಳಿಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಉಳಿಯುವಂತೆ ಮಾಡಿದೆ. ವಾಸ್ತವವಾಗಿ, ಟೀಮ್ ಇಂಡಿಯಾ ಆಡದ ಪಂದ್ಯಾವಳಿ ಕಾರ್ಯಸಾಧ್ಯವಲ್ಲ ಎಂಬುದು ಭಾರತೀಯ ಮಂಡಳಿಗೆ ತಿಳಿದಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯವಿಲ್ಲದ ಟೂರ್ನಿಗೆ ಅಷ್ಟೊಂದು ಮಹತ್ವವಿಲ್ಲ ಎಂದು ಕೂಡಾ ವರದಿ ಹೇಳಿದೆ.

2024ರಲ್ಲಿ ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ (ಎಸ್‌ಪಿಎನ್ಐ) ಏಷ್ಯಾ ಕಪ್‌ ಟೂರ್ನಿಯ ಮುಂದಿನ ಎಂಟು ವರ್ಷಗಳವರೆಗಿನ ಮಾಧ್ಯಮ ಹಕ್ಕುಗಳಿಗೆ 170 ಮಿಲಿಯನ್ ಯುಎಸ್ ಡಾಲರ್ ಒಪ್ಪಂದ ಮಾಡಿದೆ. ಒಂದು ವೇಳೆ ಈ ಪಂದ್ಯಾವಳಿ ರದ್ದಾದರೆ, ಒಪ್ಪಂದವನ್ನು ಮರುರೂಪಿಸಬೇಕಾಗುತ್ತದೆ.

ಈ ಹಿಂದೆಯೂ ಹೀಗೆ ಆಗಿತ್ತು

ಈ ಹಿಂದೆ 2023ರಲ್ಲಿಯೂ ಭಾರತೀಯ ಕ್ರಿಕೆಟ್‌ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿತ್ತು. ಹೀಗಾಗಿ ಭಾರತದ ಎಲ್ಲಾ ಪಂದ್ಯಗಳನ್ನು ನಡೆಸಲು ತಟಸ್ಥ ಸ್ಥಳವಾಗಿ ಶ್ರೀಲಂಕಾವನ್ನು ಆಯ್ಕೆ ಮಾಡಲಾಯಿತು. ಇದೇ ರೀತಿಯ ಹೈಬ್ರಿಡ್ ಮಾದರಿಯನ್ನು ಈ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಅಳವಡಿಸಿಕೊಳ್ಳಲಾಯಿತು. ಪಾಕಿಸ್ತಾನವು ಆತಿಥೇಯ ರಾಷ್ಟ್ರವಾಗಿದ್ದರೂ, ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಿತು. ಈ ಎರಡೂ ಟೂರ್ನಿಯಲ್ಲಿ ಭಾರತವು ಫೈನಲ್ ತಲುಪಿದ ಕಾರಣದಿಂದ, ಫೈನಲ್ ಪಂದ್ಯವನ್ನು ಕೂಡಾ ಪಾಕಿಸ್ತಾನದ ಹೊರಗೆ ನಡೆಸಲಾಯ್ತು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.