ಐಪಿಎಲ್ ಶೀಘ್ರ ಪುನರಾರಂಭಕ್ಕೆ ಬಿಸಿಸಿಐ ಅಧಿಕಾರಿಗಳ ಶತಪ್ರಯತ್ನ; ಸಭೆ ನಿಗದಿ, ಈವರೆಗೆ ಯಾರು ಏನು ಹೇಳಿದ್ರು?
ಐಪಿಎಲ್ 18ನೇ ಆವೃತ್ತಿಯನ್ನು ಶೀಘ್ರವಾಗಿ ಪುನರಾರಂಭಿಸಲು ಬಿಸಿಸಿಐ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಆಟಗಾರರು ಸೇರಿದಂತೆ ಎಲ್ಲಾ ಐಪಿಎಲ್ ಫ್ರಾಂಚೈಸಿಗಳಿಗೆ ಸಿದ್ಧರಾಗಿರಲು ಸೂಚಿಸಲಾಗಿದೆ. ಈವರೆಗೆ ಮಂಡಳಿಯ ಉನ್ನತ ಅಧಿಕಾರಿಗಳು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.
ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಐಪಿಎಲ್ 2025ರ ಋತುವಿನ ಪುನರಾರಂಭ ಕುರಿತ ಚರ್ಚೆ ಚಿಗುರೊಡೆದಿದೆ. ಟೂರ್ನಿಯನ್ನು ತಕ್ಷಣವೇ ಪುನರಾರಂಭಿಸುವ ಸಾಧ್ಯತೆಗಳನ್ನು ಬಿಸಿಸಿಐ ಅನ್ವೇಷಿಸುತ್ತಿದೆ ಎಂದು ವರದಿಯಾಗಿದೆ. ಹಾಗಂತಾ ಈ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ಹೊರಬರಬೇಕಿದೆ. ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿದ್ದರೂ, ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಕುರಿತು ವರದಿಯಾಗುತ್ತಲೇ ಇದೆ. ಅಲ್ಲದೆ ನಾಳೆ (ಮೇ 12, ಸೋಮವಾರ) ಉಭಯ ರಾಷ್ಟ್ರಗಳ ಸೇನಾ ಪ್ರಮುಖರ ನಡುವೆ ಮತ್ತೊಮ್ಮೆ ಮಾತುಕತೆಯಾಗಲಿದೆ. ಹೀಗಾಗಿ ಟೂರ್ನಿಯ ಮರುಆರಂಭದ ನಿರ್ಧಾರ ತ್ವರಿತವಾಗಿ ಆಗುವ ಸಾಧ್ಯತೆ ಸದ್ಯಕ್ಕಿಲ್ಲ ಎಂದು ತೋರುತ್ತಿದೆ.
ಕದನ ವಿರಾಮ ಘೋಷಣೆಯ ಬಳಿಕ ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಬಿಸಿಸಿಐ ಈಗ ವೇಳಾಪಟ್ಟಿಯನ್ನು ರೂಪಿಸುತ್ತಿದೆ. ಪಂದ್ಯಾವಳಿಯನ್ನು ಪುನರಾರಂಭಿಸುವ ಬಗ್ಗೆ ಎಲ್ಲಾ ಪಾಲುದಾರರೊಂದಿಗೆ ಮಾತನಾಡುತ್ತಿದೆ ಎಂದು ಹೇಳಿದ್ದಾರೆ. ಮುಖ್ಯವಾಗಿ ಟೂರ್ನಿಯ ಪುನರಾರಂಭವು ಭಾರತ ಸರ್ಕಾರ ಅನುಮತಿ ನೀಡಿದ ಬಳಿಕವೇ ಸಾಧ್ಯ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
“ಈಗಷ್ಟೇ ಕದನ ವಿರಾಮ ಘೋಷಿಸಲಾಗಿದೆ. ನಾವು ಈಗ ಐಪಿಎಲ್ ಅನ್ನು ಪುನರಾರಂಭಿಸುವ ಮತ್ತು ಮುಕ್ತಾಯಗೊಳಿಸುವ ಸಾಧ್ಯತೆಯ ಮಾರ್ಗಗಳನ್ನು ಅನ್ವೇಷಿಸುತ್ತೇವೆ. ತಕ್ಷಣ ನಡೆಸಲು ಸಾಧ್ಯವಾದರೆ, ನಾವು ಆತಿಥ್ಯ ಸ್ಥಳ, ದಿನಾಂಕ ಮತ್ತು ಎಲ್ಲವನ್ನೂ ರೂಪಿಸಬೇಕಾಗಿದೆ. ಈ ಕುರಿತು ನಾವು ತಂಡಗಳ ಮಾಲೀಕರು, ಪ್ರಸಾರಕರು ಮತ್ತು ಭಾಗಿಯಾಗಿರುವ ಪ್ರತಿಯೊಬ್ಬರೊಂದಿಗೆ ಮಾತನಾಡುತ್ತೇವೆ. ಹೇಗೆ ಮುಂದುವರಿಯಬೇಕು ಎಂಬುದರ ಬಗ್ಗೆ ಒಂದು ಮಾರ್ಗವನ್ನು ಕಂಡುಕೊಳ್ಳುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ, ನಾವು ಸರ್ಕಾರದೊಂದಿಗೆ ಸಮಾಲೋಚಿಸಬೇಕಾಗುತ್ತದೆ” ಎಂದು ಧುಮಾಲ್ ಹೇಳಿದ್ದಾರೆ.
ಇಂದು ಮಹತ್ವದ ಚರ್ಚೆ
ಅತ್ತ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು, ಬಿಸಿಸಿಐ ಅಧಿಕಾರಿಗಳು ಇಂದು (ಭಾನುವಾರ, ಮೇ 11) ಐಪಿಎಲ್ ಆಡಳಿತ ಮಂಡಳಿಯೊಂದಿಗೆ ವೇಳಾಪಟ್ಟಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ದೃಢಪಡಿಸಿದರು. "ಯುದ್ಧ ಭೀತಿ ನಿಂತಿದೆ. ಹೊಸ ಪರಿಸ್ಥಿತಿಯಲ್ಲಿ ಬಿಸಿಸಿಐ ಪದಾಧಿಕಾರಿಗಳು, ಅಧಿಕಾರಿಗಳು ಮತ್ತು ಐಪಿಎಲ್ ಆಡಳಿತ ಮಂಡಳಿ ಭಾನುವಾರ ಈ ವಿಷಯವನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ, "ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರ.
ಇಎಸ್‌ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ, ಉಳಿದ 16 ಪಂದ್ಯಗಳನ್ನು ನಡೆಸಲು ಬಿಸಿಸಿಐ ಮೂರು ಸ್ಥಳಗಳನ್ನು ಸೀಮಿತಗೊಳಿಸಿದೆ. ಈ ಮಾಹಿತಿಯು ಕದನ ವಿರಾಮ ಘೋಷಣೆಗೂ ಹಿಂದಿನದ್ದು. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಟೂರ್ನಿಯ ಉಳಿದ ಪಂದ್ಯಗಳು ನಡೆಯಲಿವೆ ಎಂದು ವರದಿ ಹೇಳಿದೆ. ಆದರೆ, ಯುದ್ಧ ಭೀತಿ ನಿಂತಿರುವುದರಿಂದ ಈ ಮೊದಲು ನಿಗದಿಯಾದ ಸ್ಥಳಗಳಲ್ಲೇ ಪಂದ್ಯಗಳು ನಡೆಯಬಹುದು.
ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ: ಬಿಸಿಸಿಐ ಕಾರ್ಯದರ್ಶಿ
ಐಪಿಎಲ್ 2025ರ ಪುನರಾರಂಭ ದಿನಾಂಕ ಅಂತಿಮಗೊಳಿಸುವುದಕ್ಕೂ ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೇಂದ್ರ ಸರ್ಕಾರ ಮತ್ತು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಲಿದೆ. ಲೀಗ್‌ನ ಪುನರಾರಂಭ ವೇಳಾಪಟ್ಟಿ ರಚಿಸಲು ಸಭೆ ನಡೆಸುವುದಕ್ಕೂ ಮೊದಲು ಮಂಡಳಿಯು ಮುಂದಿನ 48 ಗಂಟೆಗಳನ್ನು ಎಲ್ಲಾ ರೀತಿಯ ಅಗತ್ಯ ಒಳನೋಟಗಳನ್ನು ಸಂಗ್ರಹಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
“ಬಿಸಿಸಿಐ ಏಳು ದಿನಗಳ ಅವಧಿಗೆ ಐಪಿಎಲ್ ಅನ್ನು ಸ್ಥಗಿತಗೊಳಿಸಿತು. ಇನ್ನೂ ಐದು ದಿನಗಳು ಉಳಿದಿವೆ. ಬದಲಾಗುತ್ತಿರುವ ಪರಿಸ್ಥಿತಿ ಮತ್ತು ಬೆಳವಣಿಗೆಗಳನ್ನು ಬಿಸಿಸಿಐ ಸೂಕ್ಷ್ಮವಾಗಿ ಗಮನಿಸುತ್ತಿದೆ. ಐಪಿಎಲ್‌ನ ಎಲ್ಲಾ ಪಾಲುದಾರರು ಮತ್ತು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ ಐಪಿಎಲ್ ಪುನರಾರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ದೇವಜಿತ್ ಸೈಕಿಯಾ ಅವರು ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮ ಘೋಷಿಸಿದ ನಂತರ ಹೇಳಿದ್ದಾರೆ.
ಐಪಿಎಲ್ 18ನೇ ಆವೃತ್ತಿಯಲ್ಲಿ ನಾಲ್ಕು ಪ್ಲೇಆಫ್‌ಗಳು ಸೇರಿದಂತೆ ಹದಿನಾರು ಪಂದ್ಯಗಳು ಬಾಕಿ ಉಳಿದಿವೆ.