ಚಾಂಪಿಯನ್ಸ್ ಟ್ರೋಫಿಯಿಂದಲೇ ಬಿಸಿಸಿಐ ನೂತನ ನಿಯಮ ಜಾರಿ; ದುಬೈಗೆ ಕುಟುಂಬ ಸದಸ್ಯರನ್ನು ಕರೆದೊಯ್ಯುವಂತಿಲ್ಲ ಆಟಗಾರರು
ICC Champions Trophy 2025: ಭಾರತೀಯ ಆಟಗಾರರಿಗೆ ಬಿಸಿಸಿಐ ಆಘಾತ ನೀಡಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪತ್ನಿಯರು, ಕುಟುಂಬ ಸದಸ್ಯರನ್ನು ಕರೆದೊಯ್ಯಬಾರದೆಂದು ಬಿಸಿಸಿಐ ಸೂಚಿಸಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸರಣಿ ಸೋಲಿನ ಕೆಲ ದಿನಗಳ ನಂತರ ಪರಿಚಯಿಸಲಾದ ಬಿಸಿಸಿಐನ ಕಟ್ಟುನಿಟ್ಟಾದ 10 ನಿಯಮಗಳ ಆದೇಶದಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ವಿಷಯವೆಂದರೆ ಕುಟುಂಬ ಪ್ರಯಾಣದ ಮೇಲಿನ ನಿರ್ಬಂಧ. ಇದೀಗ ನೂತನ ನಿಯಮದ ಪ್ರಕಾರ ಭಾರತದ ಆಟಗಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ದುಬೈಗೆ ತೆರಳುವಂತಿಲ್ಲ! ಇದೇ 15ರಂದು ಭಾರತ ತಂಡವು ಪ್ರಯಾಣ ಬೆಳೆಸಲಿದೆ.
ಬಿಜಿಟಿ ಸರಣಿ ಸೋಲಿನ ಬಳಿಕ ಪ್ರಯಾಣ ಸೇರಿ 10 ನಿಮಯಗಳನ್ನು ಬಿಸಿಸಿಐ ಪರಿಷ್ಕರಣೆ ಮಾಡಿತ್ತು. ಇದರ ನಂತರ ಭಾರತ ತಂಡವು ವಿದೇಶಕ್ಕೆ ಪ್ರಯಾಣ ಮಾಡುತ್ತಿರುವ ಮೊದಲ ಟೂರ್ನಿ ಇದಾಗಿದೆ. ನಿಯಮದ ಪ್ರಕಾರ, 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಪ್ರವಾಸದ ಅವಧಿಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಗರಿಷ್ಠ 2 ವಾರಗಳವರೆಗೆ ಕರೆದುಕೊಂಡು ಹೋಗಲು ಅವಕಾಶ ಇದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಸೇರಿ 3 ವಾರಗಳ ಕಾಲ ನಡೆಯಲಿದೆ.
ಪತ್ನಿ, ಸಂಗಾತಿ ಜೊತೆ ಪ್ರಯಾಣ ನಿರ್ಬಂಧ
ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಪೂರ್ಣವಾಗಿ ಜಾರಿಗೆ ಬರುವ ಕುಟುಂಬ ಶಿಷ್ಟಾಚಾರವು ಯಾವುದೇ ಭಾರತೀಯ ಆಟಗಾರರು ತಮ್ಮ ಪತ್ನಿ ಅಥವಾ ಸಂಗಾತಿ ಕರೆದುಕೊಂಡು ಹೋಗುವಂತಿಲ್ಲ. ಏಕೆಂದರೆ ಈ ಟೂರ್ನಿಯು ತಿಂಗಳಿಗಿಂತ ಕಡಿಮೆ ಅವಧಿಯದ್ದಾದ ಕಾರಣ ಕುಟುಂಬನ್ನು ತಮ್ಮೊಂದಿಗೆ ಕರೆದೊಯ್ಯುವಂತಿಲ್ಲ. ಒಂದು ವೇಳೆ ಅನಿವಾರ್ಯತೆ ಇದ್ದರೆ, ಮ್ಯಾನೇಜ್ಮೆಂಟ್ ಮತ್ತು ಆಯ್ಕೆದಾರರಿಗೆ ಅನುಮತಿ ಪಡೆಯಬೇಕು. ಹಾಗೂ ಆಟಗಾರರೇ ಕುಟುಂಬ ಸದಸ್ಯರ ಸಂಪೂರ್ಣ ವೆಚ್ಚ ಭರಿಸಬೇಕು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಫೆಬ್ರವರಿ 20ರಿಂದ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಇದಾದ ಮೂರು ದಿನಗಳ ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಾಟ ನಡೆಸಲಿದೆ. ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಅಂತಿಮ ಗ್ರೂಪ್ ಲೀಗ್ ಪಂದ್ಯ ಆಡಲಿದೆ. ಈ ನಿಲುವಿಗೆ ಬದ್ಧವಾಗಿರುವ ಬಿಸಿಸಿಐ, ಆಟಗಾರರ ಮನವಿಯನ್ನು ತಿರಸ್ಕರಿಸಿದೆ. ಇದು ಅಲ್ಲದೆ ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಸುವಂತಿಲ್ಲ. ತಂಡದ ಬಸ್ನೊಂದಿಗೆ ಎಲ್ಲಾ ಆಟಗಾರರು ಪ್ರಯಾಣ ಬೆಳೆಸಬೇಕಿದೆ.
ಕ್ರಿಕೆಟಿಗರು ತಮಗೆ ವೈಯಕ್ತಿಕ ಕೋಚ್, ಮ್ಯಾನೇಜರ್, ಅಡುಗೆ ಭಟ್ಟ, ಪ್ರತಿನಿಧಿಗಳು ಇದ್ದರೆ ಅವರು ಪ್ರತ್ಯೇಕ ಹೋಟೆಲ್ಗಳಲ್ಲಿ ಉಳಿಯಬೇಕು. ಅವರಿಗೆ ಆಟಗಾರರೊಂದಿಗೆ ವಸತಿ ಇರುವುದಿಲ್ಲ. ಈ ನಿಯಮದಿಂದಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿ ಹಿರಿಯ ಕ್ರಿಕೆಟಿಗರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕೆಲವರು ಅನುಮತಿ ನೀಡುವಂತೆ ಕೇಳಿದ್ದರು. ಆದರೆ ಬಿಸಿಸಿಐ, ಆಟಗಾರರ ಮನವಿಯನ್ನು ತಿರಸ್ಕರಿಸಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜ, ವರುಣ್ ಚಕ್ರವರ್ತಿ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವೇಳಾಪಟ್ಟಿ
ಫೆಬ್ರವರಿ 20 - ಭಾರತ vs ಬಾಂಗ್ಲಾದೇಶ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ದುಬೈ
ಫೆಬ್ರವರಿ 23 - ಪಾಕಿಸ್ತಾನ vs ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ದುಬೈ
ಮಾರ್ಚ್ 2 - ಭಾರತ vs ನ್ಯೂಜಿಲೆಂಡ್, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ದುಬೈ
