ಖಾಸಗಿ ಪ್ರಶಸ್ತಿ ದಕ್ಕಿದ ತಂಡ ಸನ್ಮಾನ ಮಾಡಲು ಮುಂದಾಗಿದ್ದೇ ದೊಡ್ಡ ತಪ್ಪು; ಗೃಹ ಸಚಿವರ ರಾಜೀನಾಮೆ ಕೇಳಿದರೆ ತಪ್ಪಿಲ್ಲ!
ಕನ್ನಡ ಸುದ್ದಿ  /  ಕ್ರಿಕೆಟ್  /  ಖಾಸಗಿ ಪ್ರಶಸ್ತಿ ದಕ್ಕಿದ ತಂಡ ಸನ್ಮಾನ ಮಾಡಲು ಮುಂದಾಗಿದ್ದೇ ದೊಡ್ಡ ತಪ್ಪು; ಗೃಹ ಸಚಿವರ ರಾಜೀನಾಮೆ ಕೇಳಿದರೆ ತಪ್ಪಿಲ್ಲ!

ಖಾಸಗಿ ಪ್ರಶಸ್ತಿ ದಕ್ಕಿದ ತಂಡ ಸನ್ಮಾನ ಮಾಡಲು ಮುಂದಾಗಿದ್ದೇ ದೊಡ್ಡ ತಪ್ಪು; ಗೃಹ ಸಚಿವರ ರಾಜೀನಾಮೆ ಕೇಳಿದರೆ ತಪ್ಪಿಲ್ಲ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಐಪಿಎಲ್ ಪ್ರಶಸ್ತಿ ಜಯಿಸಿದ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಿಸಿ ಬೇಳೂರು ಸುದರ್ಶನ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕ್ರೀಡೆಯ ವಾಸ್ತವ ಏನೆಂದು ತಿಳಿಸಿದ್ದಾರೆ.

ಖಾಸಗಿ ಪ್ರಶಸ್ತಿ ದಕ್ಕಿದ ತಂಡ ಸನ್ಮಾನ ಮಾಡಲು ಮುಂದಾಗಿದ್ದೇ ದೊಡ್ಡ ತಪ್ಪು; ಗೃಹ ಸಚಿವರ ರಾಜೀನಾಮೆ ಕೇಳಿದರೆ ತಪ್ಪಿಲ್ಲ!
ಖಾಸಗಿ ಪ್ರಶಸ್ತಿ ದಕ್ಕಿದ ತಂಡ ಸನ್ಮಾನ ಮಾಡಲು ಮುಂದಾಗಿದ್ದೇ ದೊಡ್ಡ ತಪ್ಪು; ಗೃಹ ಸಚಿವರ ರಾಜೀನಾಮೆ ಕೇಳಿದರೆ ತಪ್ಪಿಲ್ಲ! (AFP)

ಅಂತೂ ನಾನು ಐಪಿಎಲ್‌ ಬಗ್ಗೆ ಈ ದುರಂತದ ಕ್ಷಣವೇ ಬರೆಯಬೇಕಾಯ್ತು! ಅಭಿಮಾನಿಗಳ ಅನಾಗರಿಕ, ಸಂಯಮ ಮೀರಿದ ವರ್ತನೆ ಏನೂ ಹೊಸದಲ್ಲ. ರಾಜ್ಯ ಸರ್ಕಾರವು ಈ ಖಾಸಗಿ ಪ್ರಶಸ್ತಿ ದಕ್ಕಿದ ತಂಡವನ್ನು ಸನ್ಮಾನ ಮಾಡಲು ಮುಂದಾಗಿದ್ದೇ ದೊಡ್ಡ ತಪ್ಪು. ಸುವ್ಯವಸ್ಥೆಯ ಹೊಣೆ ಸರ್ಕಾರದ್ದೇ. ಗೃಹ ಸಚಿವರ ರಾಜೀನಾಮೆ ಕೇಳಿದರೆ ತಪ್ಪಿಲ್ಲ.

ಇಲ್ಲಿ ಹಣ ತೆತ್ತವರೇ ಜೀವ ತೆತ್ತಿದ್ದಾರೆ ಎಂಬುದನ್ನು ನೆನಪಿಡಿ. ಇಷ್ಟು ಜನ ಸತ್ತರೂ ಸಂಭ್ರಮಾಚರಣೆ ನಿಲ್ಲಲಿಲ್ಲವಂತೆ! ನನಗಂತೂ ಇದೇನು ಅನಿರೀಕ್ಷಿತವಲ್ಲ. ಖಾಸಗಿ ಮಾರುಕಟ್ಟೆ , ಬಂಡವಾಳಶಾಹಿ ಜಾಲ, ಕೊಳ್ಳುಬಾಕತನ ಹೆಚ್ಚಿಸುವ ಜಾಹೀರಾತು ಜಾಲದ, ಕಣ್ಣು ಹಾಯಿಸಿದರೆ (ಬಡವರು ದುಡಿದ ಹಣವನ್ನು ಪ್ರತಿದಿನವೂ ದೋಚುವ) ರಮ್ಮಿ, ಪೋಕರ್ ಇತ್ಯಾದಿ ಜೂಜಾಟದ ಸಂಸ್ಥೆಗಳ ಪ್ರಾಯೋಜಕತ್ವ,ದ ಅಂಗಿಗಳೇ ಕಾಣುವ, ಈ ಕ್ರೀಡಾವಳಿಯೇ ನಮ್ಮ ಮುಂದಿನ ದಿನಗಳ ಸೂಚನೆ.

ನಾನಂತೂ ನನ್ನ ಜೀವಮಾನದಲ್ಲಿ ಕಿಂಗ್‌ಫಿಶರ್ ನೀರಿನ ಬಾಟಲಿಯನ್ನು ಕಂಡಿಲ್ಲ. ಆದ್ರೆ ಇಲ್ಲಿ ಕಾಣೋದೇ ಕಿಂಗ್‌ಫಿಶರ್ ಎಂಬ ಲಿಕ್ಕರ ಕಂಪೆನಿಯ ಸರ್‍ರೋಗೇಟ್ ಜಾಹೀರಾತು. ಇಲ್ಲಿ ಟಿವಿ ಚಾನೆಲ್‌ಗಳು ಉಚಿತವಾಗಿ ಪ್ರಸಾರ ಮಾಡುವುದೇ ವೀಕ್ಷಕರನ್ನು ಹಲವು ಬಗೆಯ ಚಟಗಳಿಗೆ ದಾಸರನ್ನಾಗಿ ಮಾಡಲು. ಟಿಆರ್​​ಪಿಗಾಗಿ ಉಳಿದ ಚಾನೆಲ್‌ಗಳೂ ಇವನ್ನೇ ಅತಿರಂಜಿತವಾಗಿ ವರದಿ ಮಾಡುತ್ತವೆ.

ಅದೆಲ್ಲಿ ಸಸಿ ನೆಡುತ್ತಿದ್ದಾರೋ…

ಇಲ್ಲಿ ಪ್ರೇಕ್ಷಕರು ಪ್ರೇಕ್ಷಕರೇ ಅಲ್ಲ; Prospective customers. ಇದನ್ನು ಅರಿಯದೆ ಇದೊಂದು ಭಯಂಕರ ಸ್ಪರ್ಧೆ ಎಂದು ಜೂಜು ಕಟ್ಟುವುದು, ಕ್ರೀಡಾಂಗಣಕ್ಕೆ ಹಣ ತೆತ್ತು ಹೋಗುವುದು - ಎಲ್ಲವೂ ನಮ್ಮ ಬಯಕೆಗಳಿಗೇ ಹೊರತು ಪ್ರಾಯೋಜಕ ಸಂಸ್ಥೆಗಳಿಗೆ ಇವೆಲ್ಲ ಗೌಣ. ಈ ಆಟಗಳಲ್ಲಿ ರನ್‌ ಪಡೆಯದ ಬಾಲಿಗೆ ಒಂದು ಮರ ನೆಡುತ್ತಾರಂತೆ. ವಾಸ್ತವದಲ್ಲಿ 20-20 ಆಟದ ಮುಖ್ಯ ತಂತ್ರವೇ ಪ್ರತಿಯೊಂದೂ ಚೆಂಡನ್ನು ಎದುರಿಸಿ ರನ್ ಮಾಡುವುದು.

ಸಾವಿರಾರು ಸಿಕ್ಸರ್, ಬೌಂಡರಿಗಳು ಬರುತ್ತವೆ. ಆದರೆ ಮರ ನೆಡೋದು ಕೆಲವೇ ಕೆಲವು ಚೆಂಡುಗಳಿಗೆ ರನ್ ಸಿಕ್ಕಿಲ್ಲ ಅಂತ! (ಇದನ್ನು ಒಮ್ಮೆ ಪರಿಶೀಲಿಸಬೇಕಿದೆ. ಈವರೆಗೆ ಎಷ್ಟು ಮರಗಳನ್ನು ಎಲ್ಲಿ ನೆಟ್ಟಿದಾರೆ, ಅವು ಉಳಿದಿವೆಯೇ ಎಂದು ಯಾರಿಗಾದ್ರೂ ಗೊತ್ತಿದ್ರೆ ತಿಳಿಸಿ). ಇವೆಲ್ಲ ಬರೆಯಬೇಕೆಂದರೂ ಸುಮ್ಮನೆ ಟ್ರೋಲ್ ಆಗ್ತೇನೆ ಎಂದು ಹಾಗೇ ಕೂತಿದ್ದೆ. ಈಗ ನೋಡಿದ್ರೆ ಈ ದುರಂತ! ನಿಜಕ್ಕೂ ಬೇಜಾರಾಗ್ತಿದೆ.

ಇನ್ನಾದರೂ ಖಾಸಗಿ ಮಾರಾಟ ಜಾಲದ ಭಾಗವಾಗಿ ಹೋದ ಎಲ್ಲ ಕ್ರೀಡೆಗಳನ್ನೂ ಮತ್ತೆ ಹಣದ ಥೈಲಿಗಳ ನಿಯಂತ್ರಣದಿಂದ ಹೊರಗೆ ತರದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇವತ್ತು ಹೋದ ಜೀವಗಳಿಗಿಂತ ಹೆಚ್ಚು ಜೀವಗಳು ಮುಂದೆ ರಮ್ಮಿ - ಪೋಕರ್​ಗಳಲ್ಲಿ ಹೋಗಲೂಬಹುದು.

ಆಟಗಳು ಜೂಜಾದಾಗ, ಕೊಳ್ಳುಬಾಕ ಸಂಸ್ಕೃತಿಯ ಸಾಧನಗಳಾದಾಗ, ಕ್ರೀಡಾಳುಗಳು ಕೋಟಿಗಟ್ಟಲೆ ಹಣಕ್ಕಾಗಿ ತಮ್ಮನ್ನು ತಾವು ಹರಾಜು ಹಾಕಿಕೊಳ್ಳುವಾಗ ಇಂತಹ ದುರಂತಗಳು ನಡೆದೇ ನಡೆಯುತ್ತವೆ. ನಮ್ಮ ಹಿರಿಯರು ಮಹಾಭಾರತದ ಜೂಜಾಟದ ಕಥೆಯನ್ನು ಶತಮಾನಗಳ ಹಿಂದೆ ಸುಮ್ಮನೇ ಬರೆದಿದ್ದಲ್ಲ. ಅದೊಂದು ವಾಸ್ತವ ಘಟನೆಯೇ ಅಲ್ಲವೆಂದುಕೊಂಡರೂ, ಅದರಲ್ಲಿರುವ ಲೌಕಿಕ ಸಂಗತಿಗಳು ಇವತ್ತಿಗೂ ವಾಸ್ತವ. ಗತಿಸಿದವರಿಗೆ ನನ್ನ ನಮನಗಳು.

(ಸೂಚನೆ: ಬೂಕರ್ ಪ್ರಶಸ್ತಿಯೂ ಖಾಸಗಿಯೇ. ಆದರೆ ಇಲ್ಲಿ ಕನ್ನಡ ಸಾಹಿತ್ಯದ ಗೆಲುವಿದೆ. ಅಪ್ಪಟ ಕನ್ನಡತಿ, ಮುಸ್ಲಿಂ ಸಮುದಾಯದ ಸಂಕೋಲೆಗಳಿಂದ ಬಿಡಿಸಿಕೊಂಡು ಕಥೆಗಳನ್ನು ಬರೆದ ಲೇಖಕಿಯ ಕಣ್ಣೀರಿನ ಕಥೆಯಿದೆ. ಹಲವು ದಶಕಗಳಿಂದ ಬರೆದ ಕಥೆಗಳನ್ನು ಅಂತಾರಾಷ್ಟ್ರೀಯ ಸಾಹಿತ್ಯರಂಗವು ಗುರುತಿಸಿದ ಹಿರಿಮೆಯಿದೆ. ಆದ್ದರಿಂದ ಸರ್ಕಾರವು ಬ್ಯಾಂಕ್ವೆಟ್ ಸಭಾಂಗಣದಲ್ಲೇ ಬಾನು ಮುಷ್ತಾಕ್ ಅವರನ್ನು ಸನ್ಮಾನಿಸಿದ್ದು ಖಂಡಿತ ಸ್ವಾಗತಾರ್ಹ. ಆರ್​​ಸಿಬಿಯಲ್ಲಿ ಕನ್ನಡತನ ಎಷ್ಟಿದೆ ಎಂದು ನೀವೇ ನಿರ್ಧರಿಸಿ)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.