ಮೂರನೇ ಟಿ20ಯಲ್ಲಿ ಮುಗ್ಗರಿಸಿದ ಭಾರತ; ಇಂಗ್ಲೆಂಡ್‌ಗೆ 26 ರನ್‌ಗಳ ಗೆಲುವು; ಸರಣಿ ಜೀವಂತ
ಕನ್ನಡ ಸುದ್ದಿ  /  ಕ್ರಿಕೆಟ್  /  ಮೂರನೇ ಟಿ20ಯಲ್ಲಿ ಮುಗ್ಗರಿಸಿದ ಭಾರತ; ಇಂಗ್ಲೆಂಡ್‌ಗೆ 26 ರನ್‌ಗಳ ಗೆಲುವು; ಸರಣಿ ಜೀವಂತ

ಮೂರನೇ ಟಿ20ಯಲ್ಲಿ ಮುಗ್ಗರಿಸಿದ ಭಾರತ; ಇಂಗ್ಲೆಂಡ್‌ಗೆ 26 ರನ್‌ಗಳ ಗೆಲುವು; ಸರಣಿ ಜೀವಂತ

ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌, 9 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಚೇಸಿಂಗ್‌ ನಡೆಸಿದ ಭಾರತ ಕ್ರಿಕೆಟ್‌ ತಂಡ 9 ವಿಕೆಟ್‌ ಕಳೆದುಕೊಂಡು 145 ರನ್‌ ಗಳಿಸಲಷ್ಟೇ ಸಾಧ್ಯವಾಯ್ತು. ಇದರೊಂದಿಗೆ ಇಂಗ್ಲೆಂಡ್‌ 26 ರನ್‌ಗಳಿಂದ ಗೆದ್ದು ಬೀಗಿತು.

ಮೂರನೇ ಟಿ20ಯಲ್ಲಿ ಮುಗ್ಗರಿಸಿದ ಭಾರತ; ಇಂಗ್ಲೆಂಡ್‌ಗೆ 26 ರನ್‌ಗಳ ಗೆಲುವು; ಸರಣಿ ಜೀವಂತ
ಮೂರನೇ ಟಿ20ಯಲ್ಲಿ ಮುಗ್ಗರಿಸಿದ ಭಾರತ; ಇಂಗ್ಲೆಂಡ್‌ಗೆ 26 ರನ್‌ಗಳ ಗೆಲುವು; ಸರಣಿ ಜೀವಂತ (REUTERS)

ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡವು 26 ರನ್‌ಗಳಿಂದ ಸೋಲು ಕಂಡಿದೆ. ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಸುಲಭ ಗೆಲುವಿನ ವಿಶ್ವಾಸದಲ್ಲಿದ್ದ ಸೂರ್ಯಕುಮಾರ್‌ ಯಾದವ್‌ ಬಳಗ, ಸ್ಪರ್ಧಾತ್ಮಕ ಮೊತ್ತ ಗುರಿ ಬೆನ್ನಟ್ಟಲಾಗದೆ ಮುಗ್ಗರಿಸಿದೆ. ಆಂಗ್ಲ ಬೌಲರ್‌ಗಳ ವೇಗ ಹಾಗೂ ನಿಖರ ಸ್ಪಿನ್‌ ದಾಳಿಗೆ ಸ್ಫೋಟಕ ಬ್ಯಾಟರ್‌ಗಳು ಕೂಡಾ ಬೌಂಡರಿ ಸಿಕ್ಸರ್‌ ಸಿಡಿಸಲು ವಿಫಲರಾದರು. ಈ ಸೋಲಿನ ಬಳಿಕ ಸದ್ಯ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಎರಡೂ ತಂಡಗಳು ಸರಣಿ ಗೆಲುವಿನ ಸಮಾನ ಅವಕಾಶಗಳನ್ನು ಹೊಂದಿವೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌, 9 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ವರುಣ್ ಚಕ್ರವರ್ತಿ ಐದು ವಿಕೆಟ್‌ ಕಬಳಿಸಿ ಮಿಂಚಿದರು. ಇದಕ್ಕೆ ಪ್ರತಿಯಾಗಿ ಕುಂಟುತ್ತಾ ಸಾಗಿದ ಭಾರತ 9 ವಿಕೆಟ್‌ ಕಳೆದುಕೊಂಡು 145 ರನ್‌ ಗಳಿಸಲಷ್ಟೇ ಸಾಧ್ಯವಾಯ್ತು.

ಭಾರತ ತಂಡದ ಚೇಸಿಂಗ್‌ ಆರಂಭದಿಂದಲೇ ಕಳಪೆಯಾಗಿತ್ತು. ಸಂಜು ಸ್ಯಾಮ್ಸನ್‌ 3 ರನ್‌ ಗಳಿಸಿ ಔಟಾಗುವ ಮೂಲಕ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಕೆಲಕಾಲ ಅಬ್ಬರಿಸಿದ ಅಭಿಷೇಕ್‌ ಶರ್ಮಾ 24 ರನ್‌ ಸಿಡಿಸಿ ಬ್ರೈಡನ್‌ ಕಾರ್ಸ್‌ಗೆ ವಿಕೆಟ್‌ ಒಪ್ಪಿಸಿದರು. ನಾಯಕ ಸೂರ್ಯಕುಮಾರ್‌ ಯಾದವ್‌ ಆಟ ಕೂಡಾ 14 ರನ್‌ಗಳಿಗೆ ಅಂತ್ಯವಾಯ್ತು. ಕೊನೆಯ ಪಂದ್ಯದ ಗೆಲುವಿನ ಹೀರೋ ತಿಲಕ್‌ ವರ್ಮಾ 18 ರನ್‌ ಗಳಿಸಿದ್ದಾಗ ಆದಿಲ್‌ ರಶೀದ್‌ ಸ್ಪಿನ್‌ ಮ್ಯಾಜಿಕ್‌ಗೆ ಬಲಿಯಾದರು.

ಈ ಹಂತದಲ್ಲಿ ಭಾರತದ ಇನ್ನಿಂಗ್ಸ್‌ ನಿಧಾನಗತಿಗೆ ತಿರುಗಿತು. ಬೌಂಡರಿ ಗಳಿಸಲು ಆಟಗಾರರು ಪರದಾಡಿದರು. ವಾಷಿಂಗ್ಟನ್‌ ಸುಂದರ್ 6‌ ರನ್‌ ಗಳಿಸಿದರೆ, ಅಕ್ಷರ್‌ ಪಟೇಲ್‌ ಆಟ 15 ರನ್‌ಗಳಿಗೆ ಅಂತ್ಯವಾಯ್ತು. ತಂಡವನ್ನು ಗೆಲ್ಲಿಸಲು ಶ್ರಮ ಹಾಕಿದ ಹಾರ್ದಿಕ್‌ ಪಾಂಡ್ಯ, ಚೆಂಡನ್ನು ಸಿಕ್ಸರ್‌ಗೆ ಅಟ್ಟಲಾಗದೆ ಓವರ್ಟನ್‌ಗೆ ಕ್ಯಾಚ್‌ ನೀಡಿ ಔಟಾದರು. ಕೊನೆಗೆ ಕೆಳ ಕ್ರಮಾಂಕದ ಬ್ಯಾಟರ್‌ಗಳಿಂದ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಇಂಗ್ಲೆಂಡ್‌ ಸ್ಪರ್ಧಾತ್ಮಕ ಮೊತ್ತ

ಇಂಗ್ಲೆಂಡ್‌ ಪರ ಅರ್ಧಶತಕ ಸಿಡಿಸಿದ ಬೆನ್ ಡಕೆಟ್ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. 28 ಎಸೆತಗಳನ್ನು ಎದುರಿಸಿದ ಆರಂಭಿಕ ಬ್ಯಾಟರ್ 51 ರನ್ ಗಳಿಸಿದರು. ಮತ್ತೋರ್ವ ಆರಂಭಿಕ ಬ್ಯಾಟರ್‌ ಫಿಲ್‌ ಸಾಲ್ಟ್‌ ಕೇವಲ 5 ರನ್‌ ಗಳಿಸಿ ಔಟಾಗುವ ಮೂಲಕ ಮತ್ತೆ ನಿರಾಶೆ ಮೂಡಿಸಿದರು. ಆದರೆ, ಎರಡನೇ ವಿಕೆಟ್‌ಗೆ ಬಟ್ಲರ್‌ ಹಾಗೂ ಡಕೆಟ್‌ ಅರ್ಧಶತಕದ (76 ರನ್) ಜೊತೆಯಾಟವಾಡಿದರು. 24 ರನ್‌ ಗಳಿಸಿದ್ದ ಬಟ್ಲರ್‌ ಔಟಾಗುತ್ತಿದ್ದಂತೆಯೇ ತಂಡದ ಪೆವಿಲಿಯನ್‌ ಪರೇಡ್‌ ಆರಂಭವಾಯ್ತು. ಈ ನಡುವೆ ಆರ್‌ಸಿಬಿ ಆಟಗಾರ ಲಿಯಾಮ್ ಲಿವಿಂಗ್‌ಸ್ಟನ್‌ 24 ಎಸೆತಗಳಲ್ಲಿ ಭರ್ಜರಿ 43 ರನ್ ಸಿಡಿಸಿದರು. 5 ಸ್ಫೋಟಕ ಸಿಕ್ಸರ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು.

ಈ ನಡುವೆ ವರುಣ್ ಚಕ್ರವರ್ತಿ ಟಿ20 ಸ್ವರೂಪದಲ್ಲಿ ಎರಡನೇ ಬಾರಿಗೆ ಐದು ವಿಕೆಟ್ ಸಾಧನೆಯನ್ನು ಪೂರ್ಣಗೊಳಿಸಿದರು. ಆದರೆ, ಈ ಎರಡೂ ಪಂದ್ಯಗಳಲ್ಲಿ ಭಾರತ ಸೋತಿದೆ. ಉಳಿದಂತೆ ಹಾರ್ದಿಕ್‌ ಪಾಂಡ್ಯ 1 ವಿಕೆಟ್‌ ಪಡೆದರು. 14 ತಿಂಗಳ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಮೊಹಮ್ಮದ್‌ ಶಮಿ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ.

Whats_app_banner