ನಿಮ್ಮನ್ನು ಮಹಾರಾಜ ಎಂದು ಮೆರೆಸಿದ್ದಕ್ಕೆ ಸರಿಯಾಗಿ ಬುದ್ದಿ ಕಲಿಸಿದ್ರಿ; ಸೌರವ್ ಗಂಗೂಲಿ ವಿರುದ್ಧ ಬಂಗಾಳಿ ನಟಿ ಕಿಡಿ
Sreelekha Mitra On Sourav Ganguly: ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ ವಿರುದ್ಧ ಬಂಗಾಳದ ನಟಿ ಶ್ರೀಲೇಖಾ ಮಿತ್ರಾ ಅವರು ಕಿಡಿಕಾರಿದ್ದಾರೆ. ಕಾರಣವೇನು?
Sreelekha Mitra On Sourav Ganguly: ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಭೀಕರ ಘಟನೆಯಿಂದ ಜನರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಜನರು ಬೀದಿಗಳಿದು ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ದೇಶಾದ್ಯಂತ ವೈದ್ಯರು ಒಪಿಡಿ ಸೇವೆ ಬಂದ್ ಮಾಡಿ ಈ ಪ್ರತಿಭಟನೆಗೆ ಸಾಥ್ ಕೊಡುತ್ತಿದ್ದಾರೆ. ಸಂತ್ರಸ್ತೆ ಕುಟುಂಬಕ್ಕೆ ಗಣ್ಯರು ಸಹ ಬೆಂಬಲ ಸೂಚಿಸುತ್ತಿದ್ದಾರೆ.
ಇದರ ನಡುವೆ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಈ ಒಂದು ಘಟನೆಯಿಂದ ಕೋಲ್ಕತ್ತಾ, ಪಶ್ಚಿಮ ಬಂಗಾಳ ಸುರಕ್ಷಿತವಲ್ಲ ಎಂದು ಹೇಳುವುದು ತಪ್ಪು ಎಂದಿದ್ದಾರೆ. ಆದರೆ ಗಂಗೂಲಿ ಹೇಳಿದ ಈ ಒಂದು ಮಾತು, ಆಕ್ರೋಶಕ್ಕೆ ಕಾರಣವಾಗಿದೆ. ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ, ಗಂಗೂಲಿ ಹೇಳಿಕೆಗೆ ಕಟುವಾಗಿ ಟೀಕಿಸಿದ್ದಾರೆ.
ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದ್ದು, ಕೇಂದ್ರ ಸಂಸ್ಥೆ ತನಿಖೆ ಆರಂಭಿಸಿದೆ. ಭಾರತ ಅದ್ಭುತ ದೇಶ. ಪಶ್ಚಿಮ ಬಂಗಾಳ ಅಥವಾ ಬೇರೆ ರಾಜ್ಯವೇ ಇರಲಿ.. ಎಲ್ಲೆಡೆಯೂ ಉತ್ತಮ ಭದ್ರತೆ ಇದೆ. ಆದರೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಿನ ಭದ್ರತೆಯನ್ನು ಸ್ಥಾಪಿಸಬೇಕು. ವಿಶೇಷ ಮಹಿಳೆಯರ ರಕ್ಷಣೆಗೆ ವ್ಯವಸ್ಥೆ ಮಾಡಬೇಕು ಎಂದರು. ಆದರೆ ಈ ಮಾತಿನ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಆದರೆ, ಇದರ ನಂತರ ಹೇಳಿದ ಹೇಳಿಕೆ ಟೀಕೆಗೆ ಗುರಿಯಾಗಿದೆ. ನಾವು ದೊಡ್ಡ ನಗರ ಮತ್ತು ದೊಡ್ಡ ರಾಜ್ಯದಲ್ಲಿ ವಾಸಿಸುತ್ತಿದ್ದೇವೆ. ಹಾಗಂತ ಒಂದು ಘಟನೆಯಿಂದ ಬಂಗಾಳ ಸುರಕ್ಷಿತವಲ್ಲ ಎನ್ನಲು ಸಾಧ್ಯವಿಲ್ಲ ಎಂದು ದಾದಾ ಹೇಳಿದ್ದಾರೆ. ಇದರ ಬೆನ್ನಲ್ಲೇ ನಟಿ ಶ್ರೀಲೇಖಾ ಮಿತ್ರಾ ಅವರು ತಮ್ಮ ಕೋಪವನ್ನು ಹೊರಹಾಕಿದ್ದಾರೆ. ನಿಮ್ಮನ್ನು ಮಹಾರಾಜ ಎಂದು ಕರೆದಿದ್ದಕ್ಕೆ ನಮಗೆ ಸರಿಯಾಗಿ ಪಾಠ ಕಲಿಸಿದ್ದೀರಿ ಎಂದು ಕಿಡಿಕಾರಿದ್ದಾರೆ.
ಗಂಗೂಲಿ ವಿರುದ್ಧ ಶ್ರೀಲೇಖಾ ವಾಗ್ದಾಳಿ
ಗಂಗೂಲಿ ಅವರೇ ನಿಮ್ಮ ಹೇಳಿಕೆ ತುಂಬಾ ನೋವುಂಟು ಮಾಡುತ್ತಿದೆ. ನೀವೊಬ್ಬ ಕ್ರಿಕೆಟರ್ ಆಗಿ ಹಾಗೂ ನಿಮ್ಮನ್ನು ಮಹಾರಾಜ ಎಂದು ತಲೆಮೇಲಿಟ್ಟು ಮೆರೆಸಿದ್ದಕ್ಕಾಗಿ ಸರಿಯಾಗಿ ಪಾಠ ಕಲಿಸಿದ್ದೀರಿ. ಇಂತಹ ಕ್ರೂರ ಘಟನೆಯನ್ನು ಸಾಮಾನ್ಯ ಘಟನೆ ಎಂದು ಕರೆಯಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ ಎಂದು ನಟಿ ಶ್ರೀಲೇಖಾ ಮಿತ್ರ ಪ್ರಶ್ನಿಸಿದ್ದಾರೆ. ನಿಜವಾಗಲೂ ನಿಮ್ಮ ಹೇಳಿಕೆ ಬೇಸರ ತರಿಸಿದೆ. ನಿಮ್ಮಿಂದ ಇಂತಹ ಮಾತನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಸೌರವ್ ಗಂಗೂಲಿ ಸ್ಪಷ್ಟನೆ
ಇದೀಗ ನಟಿ ಶ್ರೀಲೇಖಾ ಮಿತ್ರಾ ಅವರ ಹೇಳಿಕೆಗೆ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ನನ್ನ ಹೇಳಿಕೆಯನ್ನು ಹೇಗೆ ಅರ್ಥೈಸಲಾಗಿದೆ ಎಂದು ದಾದಾ ತಿಳಿಸಿದ್ದಾರೆ. "ಇದೊಂದು ಅತ್ಯಂತ ಭಯಾನಕ ಘಟನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದೇನೆ ಮತ್ತು ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಶಿಕ್ಷೆ ಹೇಗಿರಬೇಕು ಅಂದರೆ ಮತ್ತೆ ಯಾರೂ ಇಂತಹ ಅಪರಾಧ ಮಾಡಲು ಭಯಪಡಬೇಕು ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಶ್ಲಾಘಿಸಿದ್ದಾರೆ.