ಎಚ್ಚರ.. ಎಚ್ಚರ..; ಆರ್ಸಿಬಿ vs ಸಿಎಸ್ಕೆ ಟಿಕೆಟ್ ಖರೀದಿಗೆ ಮುಂದಾಗಿ 3 ಲಕ್ಷ ಕಳ್ಕೊಂಡ ಬೆಂಗಳೂರಿನ ಯುವಕ
IPL Ticket Scam : ಆರ್ಸಿಬಿ vs ಸಿಎಸ್ಕೆ ಪಂದ್ಯಕ್ಕಾಗಿ ಆನ್ಲೈನ್ ಟಿಕೆಟ್ ಖರೀದಿಸಲು ಮುಂದಾದ ಬೆಂಗಳೂರಿನ ಯುವಕ ಆನ್ಲೈನ್ ವಂಚಕರಿಂದ 3 ಲಕ್ಷ ಕಳೆದುಕೊಂಡಿದ್ದಾನೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ನ 68ನೇ ಪಂದ್ಯದಲ್ಲಿ ಮೇ 18ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು (RCB vs CSK) ಸೆಣಸಾಟ ನಡೆಸಲಿವೆ. ಫೈನಲ್ ಪಂದ್ಯ ಮೇ 26ರಂದು ನಡೆದರೂ ಆರ್ಸಿಬಿ ಫ್ಯಾನ್ಸ್ ಪಾಲಿಗೆ ಇದೇ ಪ್ರಶಸ್ತಿ ಸುತ್ತಿನ ಪಂದ್ಯವಾಗಿ ಮಾರ್ಪಟ್ಟಿದೆ. ಈ ಹೈವೋಲ್ಟೇಜ್ ಕದನಕ್ಕೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಮೈದಾನದಲ್ಲಿ ಮದಗಜಗಳ ಕಾದಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟಿಕೆಟ್ಗಾಗಿ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಕಾಳ ಸಂತೆಯಲ್ಲಿ ಈ ಪಂದ್ಯದ ಟಿಕೆಟ್ಗಳಿಗೆ ಭಾರಿ ಬೇಡಿಕೆ ಉಂಟಾಗಿದೆ.
ಆದರೆ ಇದರ ಲಾಭವನ್ನು ಆನ್ಲೈನ್ ಖದೀಮರು (IPL Ticket Scam) ಸರಿಯಾಗಿಯೇ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಟಿಕೆಟ್ ಖರೀದಿಸಲು ಆಮೀಷ ತೋರಿಸಿ ಲಕ್ಷ ಲಕ್ಷ ದೋಚುತ್ತಿದ್ದಾರೆ. ಇಂತಹದ ಮೋಸದ ಜಾಲಕ್ಕೆ ಬೆಂಗಳೂರಿನ ಕ್ರಿಕೆಟ್ ಪ್ರೇಮಿಯೊಬ್ಬ ಸಿಲುಕಿ 3 ಲಕ್ಷ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಸುಧಾಮನಗರದ ನಿವಾಸಿ ಟಿಕೆಟ್ ಆಸೆಗೆ ಬಿದ್ದು ಹಂತ ಹಂತವಾಗಿ 3 ಲಕ್ಷ ಕಳೆದುಕೊಂಡಿದ್ದಾನೆ. ಆನ್ಲೈನ್ ವಂಚಕರ ವಿರುದ್ಧ ಕ್ರಮ ಜರುಗಿಸಲು ಅಪರಾಧ ವಿಭಾಗದ ಪೊಲೀಸರ ಮೊರೆ ಹೋಗಿದ್ದಾನೆ. ಪೊಲೀಸರು ಈ ಕುರಿತು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯುವಕ ವಂಚನೆಗೊಳಗಾಗಿದ್ದೇಗೆ? ಇಲ್ಲಿದೆ ವಿವರ
ಮೇ 11ರಂದು ಬೆಳಿಗ್ಗೆ 10 ರಿಂದ 12ರ ನಂತರ ರಾತ್ರಿ 11 ಗಂಟೆಯ ನಡುವೆ ಆನ್ಲೈನ್ನಲ್ಲಿ ಸಿಎಸ್ಕೆ ಮತ್ತು ಆರ್ಸಿಬಿ ಪಂದ್ಯಕ್ಕೆ ಟಿಕೆಟ್ ಹುಡುಕಾಟ ನಡೆಸಿದ್ದಾರೆ. ಆದರೆ ಇಂತಹವರಿಗಾಗಿ ಕಾದು ಕುಳಿತಿದ್ದ ವಂಚಕರು ಈ ವ್ಯಕ್ತಿಯಿಂದ 3 ಲಕ್ಷ ಕಿತ್ತುಕೊಂಡು ಮೋಸ ಎಸಗಿದ್ದಾರೆ. ipl_2024_tickets__24 ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯದ ಟಿಕೆಟ್ ಸಿಗುವ ಜಾಹೀರಾತು ನೋಡಿ ಕ್ಲಿಕ್ ಮಾಡಿದ್ದಾರೆ. ನಂತರ ವಂಚಕನೊಂದಿಗೆ ಈ ವ್ಯಕ್ತಿ ಚಾಟಿಂಗ್ ನಡೆಸಿದ್ದಾನೆ. ಈ ವೇಳೆ ಪದ್ಮ ಸಿನ್ಹಾ ವಿಜಯ್ ಕುಮಾರ್ ಎಂಬ ಹೆಸರಿನಿಂದ ವಂಚಕ ಪರಿಚಯಿಸಿಕೊಂಡಿದ್ದಾನೆ.
ಆ ವ್ಯಕ್ತಿಯನ್ನು ನಂಬಿಸುವ ಸಲುವಾಗಿ ಆಧಾರ್ ಕಾರ್ಡ್ ಫೋಟೋ ಮತ್ತು ಮೊಬೈಲ್ ನಂಬರ್ 9155026674 ಅನ್ನು ಕಳುಹಿಸಿದ ವಂಚಕ, ಹಣವನ್ನು ಪಾವತಿಸಿದ ಬಳಿಕ ಟಿಕೆಟ್ ಕಳುಹಿಸಿಕೊಡುವುದಾಗಿ ಹೇಳಿದ್ದಾನೆ. ಟಿಕೆಟ್ ಸಿಗುತ್ತೆಂಬ ಉತ್ಸಾಹದಲ್ಲಿದ್ದ ವ್ಯಕ್ತಿ, ಮೂರು ಟಿಕೆಟ್ಗಳಿಗಾಗಿ 2300 ರೂಪಾಯಿಯಂತೆ 7900 ರೂಪಾಯಿ ಕಳುಹಿಸಿದ್ದಾರೆ. ಇದರ ನಂತರವೂ ಟಿಕೆಟ್ ಕಳುಹಿಸಿಕೊಡದ ವಂಚಕ ಟಿಕೆಟ್ ಬೆಲೆಯನ್ನು 67000ಕ್ಕೆ ಏರಿಸಿದ್ದಾನೆ. ಆದರೆ ಟಿಕೆಟ್ ಸಿಗುತ್ತೆಂಬ ಆಸೆಯಲ್ಲಿದ್ದ ವ್ಯಕ್ತಿ ಅಷ್ಟೂ ಹಣವನ್ನೂ ವರ್ಗಾವಣೆ ಮಾಡಿದ್ದಾನೆ. ಆದರೂ ಇ-ಟಿಕೆಟ್ ಕಳುಹಿಸಿಕೊಡಲಿಲ್ಲ.
ಇಷ್ಟಾದರೂ ಸುಮ್ಮನಿರದ ವ್ಯಕ್ತಿ, ವಂಚಕ ಹೇಳಿದಂತೆ ಕೇಳಿ 3 ಲಕ್ಷ ಕಳುಹಿಸಿಕೊಟ್ಟಿದ್ದಾನೆ. ಆದರೆ ಟಿಕೆಟ್ ಮಾತ್ರ ಕಳುಹಿಸಿಕೊಡಲೇ ಇಲ್ಲ. ವ್ಯಕ್ತಿ ಟಿಕೆಟ್ಗೆ ಒತ್ತಾಯಿಸಿದರೂ ವಂಚಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮೋಸ ಹೋಗಿರುವುದು ಗೊತ್ತಾಗ್ತಿದ್ದಂತೆ ವ್ಯಕ್ತಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)