ಅತಿ ಹೆಚ್ಚು ರನ್ ಟ್ರಾವಿಸ್ ಹೆಡ್, ಅತ್ಯಧಿಕ ವಿಕೆಟ್ ಜಸ್ಪ್ರೀತ್ ಬುಮ್ರಾ; ಬಿಜಿಟಿ ಸರಣಿಯ ಸಂಪೂರ್ಣ ಅಂಕಿ-ಅಂಶ
BGT 2024-2025 stats: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೋರಾಟಕ್ಕೆ ತೆರೆ ಬಿದ್ದಿದೆ. ಆಸೀಸ್ ಟ್ರೋಫಿಯನ್ನು ವಶಪಡಿಸಿಕೊಂಡು ಸಂಭ್ರಮಿಸಿದೆ. ಬಿಜಿಟಿ ಸರಣಿಯ ಸಂಪೂರ್ಣ ಅಂಕಿ-ಅಂಶಗಳ ಚಿತ್ರಣ ಇಲ್ಲಿದೆ.
ಆಸ್ಟ್ರೇಲಿಯ ಮತ್ತು ಭಾರತ ನಡುವಿನ ನಾನ್ಸ್ಟಾಪ್ 45 ದಿನಗಳ ಆಕ್ಷನ್ಗೆ ಜನವರಿ 5ರಂದು ಭಾನುವಾರ ತೆರೆ ಬಿದ್ದಿತು. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸೀಸ್ 3-1 ಅಂತರದಿಂದ ವಶಪಡಿಸಿಕೊಂಡಿತು. ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಪಡೆಯ ವಿರುದ್ಧ ಕಾಂಗರೂ ಪಡೆ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದು, ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಸತತ ಎರಡನೇ ಬಾರಿಗೆ ಅರ್ಹತೆ ಪಡೆದುಕೊಂಡಿದೆ.
ಪರ್ತ್ ಟೆಸ್ಟ್‌ನಲ್ಲಿ 295 ರನ್‌ಗಳಿಂದ ಗೆದ್ದು ಅದ್ಭುತ ಆರಂಭ ಪಡೆದ ಭಾರತ ತಂಡ, ನಂತರ 4 ಪಂದ್ಯಗಳ ಪೈಕಿ 3ರಲ್ಲಿ ಸೋಲಿಗೆ ಶರಣಾಯಿತು. ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಸರಣಿ ಉದ್ದಕ್ಕೂ ಜಸ್ಪ್ರೀತ್ ಬುಮ್ರಾ ಮಾತ್ರ ಏಕಾಂಗಿ ಹೊರಾಟ ನಡೆಸಿದರು. ಬುಮ್ರಾ ಆಡಿದ 9 ಇನ್ನಿಂಗ್ಸ್‌ಗಳಲ್ಲಿ 13.06ರ ಸರಾಸರಿಯಲ್ಲಿ 32 ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್, ಸ್ಕಾಟ್ ಬೋಲ್ಯಾಂಡ್ ಸಹ ಅದ್ಭುತ ಪ್ರದರ್ಶನ ನೀಡಿದರು. ಮೊಹಮ್ಮದ್ ಸಿರಾಜ್ ಸಹ 20 ವಿಕೆಟ್ ಪಡೆದು ಬುಮ್ರಾಗೆ ಸಾಥ್ ಕೊಟ್ಟರು.
ಭಾರತದ ಬ್ಯಾಟಿಂಗ್ ವೈಫಲ್ಯ
ಆದರೆ ಭಾರತದ ಬ್ಯಾಟಿಂಗ್ ತೀವ್ರ ವೈಫಲ್ಯ ಅನುಭವಿಸಿದ್ದ ಪರಿಣಾಮ ಸೋಲಿಗೆ ಶರಣಾಗದೆ ವಿಧಿ ಇರಲಿಲ್ಲ. ಇದರ ನಡುವೆಯೂ ಬೌಲಿಂಗ್ನಲ್ಲಿ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡಿದ ಬುಮ್ರಾ ಸರಣಿಶ್ರೇಷ್ಠ ಪ್ರಶಸ್ತಿ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಟ್ರಾವಿಸ್ ಹೆಡ್ 9 ಇನ್ನಿಂಗ್ಸ್‌ಗಳಲ್ಲಿ 448 ರನ್‌ಗಳೊಂದಿಗೆ ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಪರ್ತ್‌ನಲ್ಲಿ 11 ರನ್‌ಗಳಿಂದ ಶತಕ ವಂಚಿತನಾಗಿದ್ದ ಹೆಡ್, ನಂತರ ಎರಡು ಬ್ಯಾಕ್-ಟು-ಬ್ಯಾಕ್ ಶತಕ ಸಿಡಿಸಿ ಮಿಂಚಿದರು.
ಮೆಲ್ಬೊರ್ನ್ ಟೆಸ್ಟ್‌ನಲ್ಲಿ 2 ಅರ್ಧಶತಕ ದಾಖಲಿಸಿದ್ದ ಯಶಸ್ವಿ ಜೈಸ್ವಾಲ್, ಪರ್ತ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಆದರೆ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ತೀವ್ರ ವೈಫಲ್ಯ ಅನುಭವಿಸಿದರು. ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಅಂದುಕೊಂಡ ಎತ್ತರಕ್ಕೆ ಏರಲಿಲ್ಲ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಈ ಸರಣಿಯಲ್ಲಿನ ಅಂಕಿ-ಅಂಶಗಳ ಕುರಿತು ಮುಂದೆ ನೋಡೋಣ.
ಬಿಜಿಟಿ ಸರಣಿಯ ಅಂಕಿ-ಅಂಶ
ಸರಣಿ ಶ್ರೇಷ್ಠ ಪ್ರಶಸ್ತಿ - ಜಸ್ಪ್ರೀತ್ ಬುಮ್ರಾ
ಅತಿ ಹೆಚ್ಚು ರನ್ - ಟ್ರಾವಿಸ್ ಹೆಡ್ (448 ರನ್)
ಅತಿ ಹೆಚ್ಚು ವಿಕೆಟ್ - ಜಸ್ಪ್ರೀತ್ ಬುಮ್ರಾ (32 ವಿಕೆಟ್)
ಗರಿಷ್ಠ ವೈಯಕ್ತಿಕ ಸ್ಕೋರ್ - ಯಶಸ್ವಿ ಜೈಸ್ವಾಲ್ (ಪರ್ತ್‌ನಲ್ಲಿ 161)
ಅತ್ಯುತ್ತಮ ಬೌಲಿಂಗ್ - ಸ್ಕಾಟ್ ಬೋಲ್ಯಾಂಡ್ (ಸಿಡ್ನಿಯಲ್ಲಿ 45ಕ್ಕೆ 6)
ಹೆಚ್ಚು ಶತಕ - ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ (ತಲಾ 2)
ಅತ್ಯಧಿಕ 50+ ಸ್ಕೋರ್ - ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಯಶಸ್ವಿ ಜೈಸ್ವಾಲ್ (ತಲಾ 3)
ಅತಿ ಹೆಚ್ಚು 5 ವಿಕೆಟ್ ಗೊಂಚಲು - ಜಸ್ಪ್ರೀತ್ ಬುಮ್ರಾ (3)
ಅತಿ ಹೆಚ್ಚು ಸಿಕ್ಸರ್ - ನಿತೀಶ್ ರೆಡ್ಡಿ (8)
ಅತಿ ಹೆಚ್ಚು ಬೌಂಡರಿ - ಟ್ರಾವಿಸ್ ಹೆಡ್ (52)
ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ - 96.00 (ಬ್ಯೂ ವೆಬ್ಸ್ಟರ್)
ಅತಿ ಹೆಚ್ಚು ಬ್ಯಾಟಿಂಗ್ ಸ್ಟ್ರೈಕ್ರೇಟ್ - 92.56 (ಟ್ರಾವಿಸ್ ಹೆಡ್)
ಹೆಚ್ಚಿನ ಕ್ಯಾಚ್ (ವಿಕೆಟ್‌ಕೀಪರ್ ಅಲ್ಲದ) - ಸ್ಟೀವ್ ಸ್ಮಿತ್ (12)
ಅತ್ಯುತ್ತಮ ಬೌಲಿಂಗ್ ಸರಾಸರಿ - 13.06 (ಜಸ್ಪ್ರೀತ್ ಬುಮ್ರಾ)