BGT: ಆಸ್ಟ್ರೇಲಿಯಾ ಪ್ರಾಬಲ್ಯ, ವೇಗ ಮತ್ತು ಬೌನ್ಸ್; ಪರ್ತ್‌ನ ಆಪ್ಟಸ್ ಕ್ರೀಡಾಂಗಣದ ಬಗ್ಗೆ ತಿಳಿದಿರಬೇಕಾದ 5 ಅಂಶಗಳು
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯವು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹೊಸ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡ ಪ್ರಾಬಲ್ಯ ಸಾಧಿಸಿದೆ. 60 ಸಾವಿರಕ್ಕೂ ಅಧಿಕ ಜನರು ಪಂದ್ಯ ವೀಕ್ಷಿಸಬಹುದಾದ ಆಸನ ಸಾಮರ್ಥ್ಯ ಇಲ್ಲಿದ್ದು, ಮೈದಾನದ ಕುರಿತು ನಿಮಗೆ ತಿಳಿದಿರಬೇಕಾದ ಅಂಶಗಳು ಹೀಗಿವೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಈ ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯವು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವದ ಸುಂದರ ಕ್ರೀಡಾಂಗಣದಲ್ಲಿ ಒಂದಾಗಿರುವ ಆಪ್ಟಸ್‌ನಲ್ಲಿ ಭಾರತವ ವಿಜಯದ ಆರಂಭ ಪಡೆಯಲು ಎದುರು ನೋಡುತ್ತಿದೆ. ಭಾರತವು ಕೊನೆಯ ಬಾರಿಗೆ 2020-21ರ ಟೆಸ್ಟ್ ಸರಣಿ ವೇಳೆ ಪರ್ತ್ ಮೈದಾನದಲ್ಲಿ ಪಂದ್ಯ ಆಡಿರಲಿಲ್ಲ. ಆದರೆ ಅದಕ್ಕೂ ಮುನ್ನ 2018-19ರಲ್ಲಿ ಟೀಮ್ ಇಂಡಿಯಾ ಸರಣಿ ಗೆದ್ದರೂ, ಪರ್ತ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮಾತ್ರ ಸೋಲು ಕಂಡಿತ್ತು. ಹೀಗಾಗಿ ಪರ್ತ್ ಮೈದಾನವು ಭಾರತಕ್ಕೆ ತುಸು ಭೀತಿ ತಂದಿಡಲಿದೆ.
ಮೊದಲ ಟೆಸ್ಟ್ ಪಂದ್ಯಕ್ಕೆ ನಾಯಕನಾಗಿ ರೋಹಿತ್ ಶರ್ಮಾ ಅಲಭ್ಯರಾಗಿರುವುದರಿಂದ, ಜಸ್ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಸದ್ಯ ಸರಣಿಯು ಭಾರಿ ನಿರೀಕ್ಷೆ ಮೂಡಿಸಿದ್ದು, ಡಬ್ಲ್ಯುಟಿಸಿ ಫೈನಲ್ ದೃಷ್ಟಿಯಿಂದ ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಪರ್ತ್ ಮೈದಾನದ ಕುರಿತ ಐದು ಪ್ರಮುಖ ಅಂಶಗಳನ್ನು ನೋಡೋಣ.
ಆಪ್ಟಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾದ ಪ್ರಾಬಲ್ಯ
ಹೊಸ ಪರ್ತ್ ಕ್ರೀಡಾಂಗಣವು ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿದೆ. ಭಾರತವು 2018-19ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಈ ಮೈದಾನದಲ್ಲಿ ಆಡಿ ಸೋಲು ಕಂಡಿತ್ತು. ಮೈದಾನದಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸುಲಭವಾಗಿ ಗೆದ್ದು ಬೀಗಿದೆ. ಆಪ್ಟಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಬರೀ ಗೆಲುವು ಕಂಡಿಲ್ಲ, ಬದಲಾಗಿ ಎದುರಾಳಿ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಕೊನೆಯದಾಗಿ 2023ರ ಡಿಸೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ 360 ರನ್‌ಗಳ ಬೃಹತ್ ಗೆಲುವು ದಾಖಲಿಸಿತ್ತು.
ಪರ್ತ್‌ನಲ್ಲಿ ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಪರ್ತ್‌ನಲ್ಲಿ ಭಾರತ ತಂಡವು ಈವರೆಗೆ ಕೇವಲ ಒಂದು ಬಾರಿ ಮಾತ್ರ ಗೆದ್ದಿದೆ. ಇಲ್ಲಿನ ಎರಡು ಮೈದಾನಗಳಲ್ಲಿ ನಾಲ್ಕು ಬಾರಿ ಸೋತಿದೆ. 2008ರ ಸರಣಿ ವೇಳೆ ಭಾರತದ ಏಕೈಕ ಗೆಲುವು ಸಾಧಿಸಿತ್ತು. ಭಾರತ ಪಂದ್ಯವನ್ನು 72 ರನ್‌ಗಳಿಂದ ಗೆದ್ದಿತು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ರಿಕಿ ಪಾಂಟಿಂಗ್‌ಗೆ ತಮ್ಮ ಪ್ರಸಿದ್ಧ ಸ್ಪೆಲ್ ಎಸೆದಿದ್ದರು. ಆದರೆ, ಹೊಸ ಆಪ್ಟಸ್ ಕ್ರೀಡಾಂಗಣದಲ್ಲಿ ಇನ್ನಷ್ಟೇ ಗೆಲುವನ್ನು ಕಾಣಬೇಕಿದೆ.
ಹಿಂದಿನಂತಿಲ್ಲ ವೇಗ ಮತ್ತು ಬೌನ್ಸ್
1970 ಮತ್ತು 1980ರ ದಶಕದುದ್ದಕ್ಕೂ, WACA ವಿಶ್ವ ಕ್ರಿಕೆಟ್‌ನ ಇತರ ಯಾವುದೇ ಕ್ರೀಡಾಂಗಣಕ್ಕಿಂತ ಭಿನ್ನವಾಗಿ ವೇಗ ಮತ್ತು ಬೌನ್ಸ್ ನೀಡುವ ಸ್ಥಳವಾಗಿ ಪ್ರಸಿದ್ಧವಾಗಿತ್ತು. WACAನ ಇತರ ಮೈದಾನಗಳಂತೆ ಇಲ್ಲಿಯೂ ಜೇಡಿಮಣ್ಣು ಮತ್ತು ಹುಲ್ಲನ್ನು ಬಳಸಲಾಗುವುದು ಎಂದು ಆಪ್ಟಸ್ ಕ್ರೀಡಾಂಗಣದ ಮುಖ್ಯ ಕ್ಯುರೇಟರ್ ದೃಢಪಡಿಸಿದ್ದಾರೆ.
ಮಾರ್ನಸ್ ಲಾಬುಶೇನ್ 100ಕ್ಕೂ ಹೆಚ್ಚು ಸರಾಸರಿ
ಭಾರತದ ಪ್ರಬಲ ಬೌಲಿಂಗ್ ದಾಳಿ ಇದ್ದರೂ, ಆಸ್ಟ್ರೇಲಿಯಾದ ಬ್ಯಾಟಿಂಗ್‌ಗೆ ಮಾರ್ನಸ್ ಲಾಬುಶೇನ್ ಅವರ ಫಾರ್ಮ್ ಪ್ರಮುಖವಾಗಿದೆ. ಆಪ್ಟಸ್ ಸ್ಟೇಡಿಯಂನಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ ಲಾಬುಶೇನ್ 103.80ರ ಸರಾಸರಿಯಲ್ಲಿ 521 ರನ್ ಗಳಿಸಿದ್ದಾರೆ. ಹೀಗಾಗಿ ಭಾರತದ ಬೌಲರ್‌ಗಳು ಇವರನ್ನು ಕಟ್ಟಿಹಾಕಲು ತಂತ್ರ ರೂಪಿಸಬೇಕಿದೆ.
ಅತ್ಯಾಧುನಿಕ ಕ್ರೀಡಾಂಗಣದಲ್ಲಿ 60,000 ಆಸನಗಳ ಸಾಮರ್ಥ್ಯ
ಆಪ್ಟಸ್ ಕ್ರೀಡಾಂಗಣವು ಅತ್ಯಾಧುನಿಕ ವಿವಿಧೋದ್ದೇಶ ಮೈದಾನವಾಗಿದ್ದು, ಆಸ್ಟ್ರೇಲಿಯಾದ ಜನಪ್ರಿಯ ಕ್ರೀಡೆಗಳಾದ ಕ್ರಿಕೆಟ್ ಮತ್ತು ಫುಟ್ಬಾಲ್‌ಗೆ ಆತಿಥ್ಯ ವಹಿಸುತ್ತದೆ. ಎಂಸಿಜಿ ನಂತರ ಆಸ್ಟ್ರೇಲಿಯಾದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಇದಾಗಿದೆ. ಆದರೆ ಟೆಸ್ಟ್ ಪಂದ್ಯಗಳ ವೇಳೆ ಜನರನ್ನು ಆಕರ್ಷಿಸುವುದು ಒಂದು ಸವಾಲಾಗಿದೆ.