ಭುವನೇಶ್ವರ್ ಇನ್, ಎರಡು ಬದಲಾವಣೆ ಖಚಿತ; ಸಿಎಸ್​ಕೆ ವಿರುದ್ಧದ ಕದನಕ್ಕೆ ಆರ್​ಸಿಬಿ ಸಂಭಾವ್ಯ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಭುವನೇಶ್ವರ್ ಇನ್, ಎರಡು ಬದಲಾವಣೆ ಖಚಿತ; ಸಿಎಸ್​ಕೆ ವಿರುದ್ಧದ ಕದನಕ್ಕೆ ಆರ್​ಸಿಬಿ ಸಂಭಾವ್ಯ Xi

ಭುವನೇಶ್ವರ್ ಇನ್, ಎರಡು ಬದಲಾವಣೆ ಖಚಿತ; ಸಿಎಸ್​ಕೆ ವಿರುದ್ಧದ ಕದನಕ್ಕೆ ಆರ್​ಸಿಬಿ ಸಂಭಾವ್ಯ XI

RCB Predicted Playing XI: ಮಾರ್ಚ್​ 28ರ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಎರಡು ಬದಲಾವಣೆ ಕಾಣಬಹುದು. ಅದರ ವಿವರ ಇಂತಿದೆ.

ಭುವನೇಶ್ವರ್ ಕುಮಾರ್ ಇನ್, ಎರಡು ಬದಲಾವಣೆ ಖಚಿತ; ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಸಂಭಾವ್ಯ XI
ಭುವನೇಶ್ವರ್ ಕುಮಾರ್ ಇನ್, ಎರಡು ಬದಲಾವಣೆ ಖಚಿತ; ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಸಂಭಾವ್ಯ XI (REUTERS)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವಿನ ಆರಂಭ ಕಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತನ್ನ ಪ್ರತಾಪ ತೋರುವ ಮೂಲಕ ಗಮನ ಸೆಳೆದಿದೆ. ಸಮತೋಲಿತ ತಂಡವಾದ ಆರ್​​ಸಿಬಿ, ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕುವ ವಿಶ್ವಾಸ ಮೂಡಿಸಿದೆ. 18ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೈಡ್ ಮಾಡಿದ ಆರ್​ಸಿಬಿ ತನ್ನ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮಾರ್ಚ್​ 28ರಂದು ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ನಿಗದಿತ 20 ಓವರ್​​​​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. 175 ರನ್​ ಗುರಿ ಬೆನ್ನಟ್ಟಿದ ಆರ್​ಸಿಬಿ 3 ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿತು. 7 ವಿಕೆಟ್​ಗಳ ಜಯ ದಾಖಲಿಸಿದ ಬೆಂಗಳೂರು, ಇದೀಗ ಸಿಎಸ್​ಕೆ ವಿರುದ್ಧ ಇಂತಹದ್ದೇ ಸರ್ವಾಂಗೀಣ ಪ್ರದರ್ಶನ ತೋರಲು ಕಸರತ್ತು ನಡೆಸುತ್ತಿದೆ. ಈ ಪಂದ್ಯವು ಚೆನ್ನೈನ ಸ್ಪಿನ್ ಟ್ರ್ಯಾಕ್ ಚೆಪಾಕ್​ ಮೈದಾನದಲ್ಲಿ ನಡೆಯಲಿರುವ ಕಾರಣ ರಾಯಲ್ ಚಾಲೆಂಜರ್ಸ್ ಪ್ಲೇಯಿಂಗ್ 11ರಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.

ಎರಡು ಬದಲಾವಣೆ ನಿರೀಕ್ಷೆ

ಬೆಂಗಳೂರು ತಂಡದಲ್ಲಿ 2 ಬದಲಾವಣೆ ಕಾಣುವ ಸಾಧ್ಯತೆಯಿದೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಆರಂಭಿಕರಾಗಿ ಉತ್ತಮ ಅಡಿಪಾಯ ಹಾಕಿಕೊಡುವ ಭರವಸೆ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ರಜತ್ ಪಾಟೀದಾರ್ ಮತ್ತು ಲಿಯಾಮ್ ಲಿವಿಂಗ್​ಸ್ಟೋನ್ ಪಂದ್ಯದ ದಿಕ್ಕು ಬದಲಿಸುವ ಹಿಟ್ಟರ್​​​ಗಳಾಗಿದ್ದಾರೆ. ಆದರೆ ಈ ಪಂದ್ಯಕ್ಕೆ ದೇವದತ್ ಪಡಿಕ್ಕಲ್​ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿಯಲು ಕಷ್ಟಕರವಾಗಬಹುದು.

ನೂತನ ಐಪಿಎಲ್​ನಲ್ಲಿ ಇನ್ನೂ ಬ್ಯಾಟಿಂಗ್ ಮಾಡಲು ಅವಕಾಶ ಪಡೆಯದ ಟಿಮ್ ಡೇವಿಡ್ ಮತ್ತು ಜಿತೇಶ್ ಶರ್ಮಾ ಫಿನಿಷಿಂಗ್ ಪಾತ್ರ ನಿಭಾಯಿಸಬೇಕಿದೆ. ಈ ಇಬ್ಬರ ಪಾತ್ರ ಪ್ರಮುಖ ಪಾತ್ರವಹಿಸಲಿದೆ. ಕೆಕೆಆರ್​ ವಿರುದ್ಧ ಪಂದ್ಯದ ಚಿತ್ರಣ ಬದಲಿಸಿದ ಆಲ್​ರೌಂಡರ್ ಕೃನಾಲ್ ಪಾಂಡ್ಯ ಬೌಲಿಂಗ್ ಜತೆಗೆ ಬ್ಯಾಟಿಂಗ್​ನಲ್ಲೂ ನೆರವಾಗಬೇಕು. ಚೆನ್ನೈ ತಂಡವನ್ನು ಕಟ್ಟಿ ಹಾಕಲು ಜೋಶ್ ಹೇಜಲ್​ವುಡ್, ಯಶ್ ದಯಾಳ್ ಮತ್ತೊಮ್ಮೆ ಜೋಡೆತ್ತುಗಳಂತೆ ಕೆಲಸ ಮಾಡಬೇಕಿದೆ.

ಭುವನೇಶ್ವರ್ ಕುಮಾರ್ ಇನ್, ಸ್ವಪ್ನಿಲ್ ಸಿಂಗ್​ಗೂ ಅವಕಾಶ

ಸಣ್ಣ ಗಾಯದ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ 2ನೇ ಪಂದ್ಯಕ್ಕೆ ಮರಳುವ ನಿರೀಕ್ಷೆ ಹೆಚ್ಚಿದೆ. ಅವರು ತಂಡವನ್ನು ಕೂಡಿಕೊಂಡರೆ ರಸಿಕ್ ದಾರ್ ಜಾಗ ಬಿಟ್ಟುಕೊಡುವುದು ಖಚಿತ. ಜೊತೆಗೆ ಚೆನ್ನೈ ಸ್ಪಿನ್ ಟ್ರ್ಯಾಕ್ ಆಗಿರುವ ಕಾರಣ ಸುಯಾಶ್ ಶರ್ಮಾ ಜೊತೆಗೆ ಮತ್ತೊಬ್ಬ ಸ್ಪಿನ್ನರ್​ ಸ್ವಪ್ನಿಲ್ ಸಿಂಗ್​ಗೂ ಅವಕಾಶ ನೀಡಬಹುದು. ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಸ್ವಪ್ನಿಲ್ ಮತ್ತು ಸುಯಾಶ್ ಇಬ್ಬರೂ ತಂಡದ ಭಾಗವಾದರೂ ಅಚ್ಚರಿ ಇಲ್ಲ.

ಆಗ ದೇವದತ್ ಪಡಿಕ್ಕಲ್ ಬದಲಿಗೆ ಟಿಮ್ ಡೇವಿಡ್ ಇಂಕ್ಯಾಪ್ಟ್ ಪ್ಲೇಯರ್ ಆಗಬಹುದು. ಮೊದಲು ಆರ್​ಸಿಬಿ ಬ್ಯಾಟಿಂಗ್ ಮಾಡಿದರೆ ಸ್ವಪ್ನಿಲ್ ಸಿಂಗ್ ಪ್ಲೇಯಿಂಗ್ 11 ಭಾಗವಾಗಬಹುದು. ಏಕೆಂದರೆ ಸುಯಾಶ್​ಗೆ ಹೋಲಿಸಿದರೆ ಸ್ವಪ್ನಿಲ್ ಬ್ಯಾಟಿಂಗ್​ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಾರೆ. ಚೇಸಿಂಗ್ ಮಾಡಿದರೆ, ಪ್ಲೇಯಿಂಗ್​ 11ನಲ್ಲಿ ಸುಯಾಶ್ ಮತ್ತು ಸ್ವಪ್ನಿಲ್ ಅವಕಾಶ ಪಡೆಯುತ್ತಾರೆ. ಆಗ ಟಿಮ್ ಡೇವಿಡ್ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಬ್ಯಾಟಿಂಗ್ ಮಾಡಲು ಬರಬಹುದು. ಇದರೊಂದಿಗೆ ಮೂವರು ಸ್ಪಿನ್ನರ್​ಗಳು, ಮೂವರು ವೇಗಿಗಳೊಂದಿಗೆ ತಂಡವು ಕಣಕ್ಕಿಳಿಯಬಹುದು.

ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಸಂಭಾವ್ಯ ತಂಡ

ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಭುವನೇಶ್ವರ್​ ಕುಮಾರ್, ಸ್ವಪ್ನಿಲ್ ಸಿಂಗ್, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಳ್.

ಇಂಪ್ಯಾಕ್ಟ್ ಪ್ಲೇಯರ್ - ಟಿಮ್ ಡೇವಿಡ್

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner