ಕನ್ನಡ ಸುದ್ದಿ  /  ಕ್ರಿಕೆಟ್  /  ಸೋತ ಆರ್​ಸಿಬಿಗೆ ಮತ್ತೊಂದು ದೊಡ್ಡ ಹೊಡೆತ; ಗಾಯದಿಂದ ಆಲ್​ರೌಂಡರ್ ಗ್ಲೆನ್​ ಮ್ಯಾಕ್ಸ್​ವೆಲ್ ಹೊರಕ್ಕೆ?

ಸೋತ ಆರ್​ಸಿಬಿಗೆ ಮತ್ತೊಂದು ದೊಡ್ಡ ಹೊಡೆತ; ಗಾಯದಿಂದ ಆಲ್​ರೌಂಡರ್ ಗ್ಲೆನ್​ ಮ್ಯಾಕ್ಸ್​ವೆಲ್ ಹೊರಕ್ಕೆ?

Glenn Maxwell: ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಹೆಬ್ಬೆರಳಿಗೆ ಗಾಯವಾಗಿದ್ದು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.

ಗಾಯದಿಂದ ಆಲ್​ರೌಂಡರ್ ಗ್ಲೆನ್​ ಮ್ಯಾಕ್ಸ್​ವೆಲ್ ಹೊರಕ್ಕೆ
ಗಾಯದಿಂದ ಆಲ್​ರೌಂಡರ್ ಗ್ಲೆನ್​ ಮ್ಯಾಕ್ಸ್​ವೆಲ್ ಹೊರಕ್ಕೆ

ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB 2024) ಐಪಿಎಲ್ 2024ರಲ್ಲಿ ಸತತ 4ನೇ ಪಂದ್ಯ ಕಳೆದುಕೊಂಡಿದೆ. ಅಂಕಪಟ್ಟಿಯಲ್ಲಿ ಪ್ರಸ್ತುತ 9ನೇ ಸ್ಥಾನದಲ್ಲಿರುವ ಆರ್​​ಸಿಬಿ, ಈ ಬಾರಿಯೂ ಟ್ರೋಫಿ ಗೆಲ್ಲುವುದು ಅನುಮಾನವಾಗಿದೆ. ಏಪ್ರಿಲ್​ 15ರಂದು ಆರ್​​ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಸೆಣಸಾಟಕ್ಕೆ ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಆರ್​​ಸಿಬಿ ತಂಡಕ್ಕೆ ದೊಡ್ಡ ಗಾಯದ ಹೊಡೆತಕ್ಕೆ ಸಿಲುಕಿದೆ.

ಟ್ರೆಂಡಿಂಗ್​ ಸುದ್ದಿ

ನ್ಯೂಸ್ 24ರ ವರದಿಯ ಪ್ರಕಾರ, ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮುಂಬೈ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಎಂಐ ವಿರುದ್ಧದ ಪಂದ್ಯದಲ್ಲಿ 17 ಎಸೆತಗಳಲ್ಲಿ 50 ರನ್ ಗಳಿಸಿದ ಸೂರ್ಯಕುಮಾರ್ ಯಾದವ್, ಆಕಾಶ್ ದೀಪ್ ಅವರ ಚೆಂಡನ್ನು ಆನ್ ಸೈಡ್ ಕಡೆಗೆ ಹೊಡೆದರು. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕೈಗೆ ಚೆಂಡು ಬಡಿದಿದ್ದು ಆಸ್ಟ್ರೇಲಿಯನ್ ಆಟಗಾರನಿಗೆ ಗಾಯವಾಗಿತು. ಈ ಘಟನೆಯ ನಂತರ ಅವರು ಮೈದಾನ ತೊರೆದರು.

ಈ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟ್‌ನೊಂದಿಗೆ ಮತ್ತೆ ಕೆಟ್ಟ ಪ್ರದರ್ಶನ ನೀಡಿದರು. ಈ ಆವೃತ್ತಿಯಲ್ಲಿ ಮೂರನೇ ಬಾರಿ ಡಕೌಟ್​ ಆಗಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಡಕ್‌ಗಳನ್ನು ಗಳಿಸಿದ ಬ್ಯಾಟರ್ ಎಂಬ ಅಪಕೀರ್ತಿಗೆ ಪಾತ್ರರಾದರು. ಪ್ರಸಕ್ತ ಐಪಿಎಲ್​ನಲ್ಲಿ ಈ ಋತುವಿನಲ್ಲಿ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 32 ರನ್ ಗಳಿಸಿದ್ದಾರೆ. ಈ ಪೈಕಿ ಮೂರು ಬಾರಿ ಡಕೌಟ್. ಇದೀಗ ಮ್ಯಾಕ್ಸಿಗೆ ಗಾಯವಾಗಿದ್ದು, ಅವರು ಮುಂದಿನ ಪಂದ್ಯದಿಂದ ಅವರು ಕಣಕ್ಕಿಳಿಯುವುದು ಬಹುತೇಕ ಅನುಮಾನ ಎಂದು ಹೇಳಲಾಗಿದೆ.

ಮ್ಯಾಕ್ಸ್‌ವೆಲ್ ಬದಲಿಗೆ ಯಾರು?

ಕಳಪೆ ಪ್ರದರ್ಶನ ನೀಡಿದ ನಂತರ ಕ್ಯಾಮರೂನ್ ಗ್ರೀನ್ ಅವರನ್ನು ಕೈ ಬಿಟ್ಟು ವಿಲ್ ಜಾಕ್ಸ್​ಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಮ್ಯಾಕ್ಸಿ ಹೊರ ಬಿದ್ದರೆ, ಕ್ಯಾಮರೂನ್ ಗ್ರೀನ್ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಜಾಕ್ಸ್ ಕೂಡ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ. ಅಭಿಮಾನಿಗಳು ಮ್ಯಾಕ್ಸಿ ವಿರುದ್ಧ ಕೋಪಗೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಅಬ್ಬರಿಸುವ ಗ್ಲೆನ್, ಆರ್​​ಸಿಬಿ ಪರ ದಯನೀಯ ವೈಫಲ್ಯ ಕಂಡಿದ್ದಾರೆ. ಬೌಲಿಂಗ್​​ನಲ್ಲೂ ಕಳಪೆ ಫಾರ್ಮ್​​ನಲ್ಲಿದ್ದು, ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೂವರು ಅರ್ಧಶತಕ ಸಿಡಿಸಿ ಗಮನ ಸೆಳೆದರು. ಫಾಫ್ ಡು ಪ್ಲೆಸಿಸ್ (61), ರಜತ್ ಪಾಟೀದಾರ್ (50) ಮತ್ತು ದಿನೇಶ್ ಕಾರ್ತಿಕ್ (53*) ಅವರು ಅದ್ಭುತ ಪ್ರದರ್ಶನ ನೀಡಿದರು. ಇದರ ನಡುವೆಯೂ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಪಡೆದು ಮಿಂಚಿದರು. ಪರಿಣಾಮ 20 ಓವರ್​ಗೆ 8 ವಿಕೆಟ್​​ ನಷ್ಟಕ್ಕೆ 196 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಮುಂಬೈ ಇನ್ನೂ 23 ಎಸೆತಗಳನ್ನು ಉಳಿಸಿ ಗೆದ್ದು ಬೀಗಿತು. ಇಶಾನ್ ಕಿಶನ್ (69), ಸೂರ್ಯಕುಮಾರ್​ (52) ಆರ್ಭಟಿಸಿದರು.

IPL_Entry_Point