ಭಾರತ vs ಶ್ರೀಲಂಕಾ ಸರಣಿ ಬಳಿಕ ದೊಡ್ಡ ಬದಲಾವಣೆಗೆ ತಯಾರಿ; ತಂಡಕ್ಕೆ ಹೊಸ ಕೋಚ್ ಎಂಟ್ರಿ
ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಆಗಸ್ಟ್ 21ರಂದು ಪ್ರಾರಂಭವಾಗುವ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಮಾಜಿ ಸ್ಟಾರ್ ಇಂಗ್ಲಿಷ್ ಆಟಗಾರ ಇಯಾನ್ ಬೆಲ್ ಶ್ರೀಲಂಕಾದ ಬೆಂಬಲ ಸಿಬ್ಬಂದಿಯಾಗಿ ಸೇರಿಕೊಳ್ಳಲಿದ್ದಾರೆ.
ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಣ ಸರಣಿಗಳು ಅತ್ಯಂತ ರೋಚಕವಾಗಿತ್ತು. ಟಿ20 ಸರಣಿಯಲ್ಲಿ ಸಿಂಹಳೀಯರು ಸೋಲನ್ನು ಅನುಭವಿಸಿದರೆ, ಏಕದಿನ ಸರಣಿಯಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿತು. ಸನತ್ ಜಯಸೂರ್ಯ ಕೋಚಿಂಗ್ ನೇತೃತ್ವದಲ್ಲಿ ಲಂಕಾ ಯುವ ಪಡೆ 27 ವರ್ಷಗಳ ನಂತರ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಇದೀಗ ಶ್ರೀಲಂಕಾ ತಂಡ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕಿದೆ. ಈ ಪ್ರವಾಸವು ಆಗಸ್ಟ್ 21 ರಿಂದ ಪ್ರಾರಂಭವಾಗಲಿದೆ. ಈ ಸರಣಿಗೆ ಉಭಯ ತಂಡಗಳ ತಂಡವನ್ನು ಕೂಡ ಪ್ರಕಟಿಸಲಾಗಿದೆ. ಇದೆಲ್ಲದರ ನಡುವೆ ತಂಡವೊಂದರ ಕೋಚಿಂಗ್ ಸಿಬ್ಬಂದಿಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಬೆಳಕಿಗೆ ಬಂದಿದೆ.
ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಆಗಸ್ಟ್ 21 ರಂದು ಪ್ರಾರಂಭವಾಗುವ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಮಾಜಿ ಸ್ಟಾರ್ ಇಂಗ್ಲಿಷ್ ಆಟಗಾರ ಇಯಾನ್ ಬೆಲ್ ಶ್ರೀಲಂಕಾದ ಬೆಂಬಲ ಸಿಬ್ಬಂದಿಯಾಗಿ ಸೇರಿಕೊಳ್ಳಲಿದ್ದಾರೆ. ಶ್ರೀಲಂಕಾದ ಮಾಧ್ಯಮ ವರದಿಗಳ ಪ್ರಕಾರ, ಲಂಕಾ ತಂಡದ ಹಂಗಾಮಿ ಮುಖ್ಯ ಕೋಚ್ ಸನತ್ ಜಯಸೂರ್ಯ ಅವರ ಕೋರಿಕೆಯ ಮೇರೆಗೆ, ಇಯಾನ್ ಬೆಲ್ ಶ್ರೀಲಂಕಾ ತಂಡವನ್ನು ಸೇರಲು ನಿರ್ಧರಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ದೃಷ್ಟಿಕೋನದಿಂದ ಎರಡೂ ತಂಡಗಳಿಗೆ ಈ ಸರಣಿಯು ಬಹಳ ಮುಖ್ಯವಾಗಿದೆ. ಹೀಗಾಗಿ ಆಂಗ್ಲರ ನಾಡಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಇಯಾನ್ ಬೆಲ್ ಅವರನ್ನು ಸೇರಿಸಲಾಗಿದೆ. ಪ್ರಸ್ತುತ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ, ಇಂಗ್ಲೆಂಡ್ 36.54 ಶೇಕಡಾ ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಶೇಕಡಾ 50 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಫೈನಲ್ ರೇಸ್‌ನಲ್ಲಿರಲು, ಎರಡೂ ತಂಡಗಳು ಈ ಸರಣಿಯನ್ನು ಗೆಲ್ಲಲೇಬೇಕು.
ಇಯಾನ್ ಬೆಲ್ ಅಂಕಿ-ಅಂಶ ಅದ್ಭುತ
ಇಯಾನ್ ಬೆಲ್ ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 118 ಟೆಸ್ಟ್, 161 ಏಕದಿನ ಪಂದ್ಯಗಳು ಮತ್ತು 8 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಟೆಸ್ಟ್‌ನಲ್ಲಿ 42.69 ಸರಾಸರಿಯಲ್ಲಿ 7727 ರನ್ ಗಳಿಸಿದ್ದರು, ಇದರಲ್ಲಿ 46 ಅರ್ಧ ಶತಕಗಳು ಮತ್ತು 22 ಶತಕಗಳು ಬಂದಿವೆ. ಏಕದಿನದಲ್ಲಿ 37.87 ಸರಾಸರಿಯಲ್ಲಿ 5416 ರನ್ ಗಳಿಸಿದ್ದಾರೆ. ಇದರಲ್ಲಿ 35 ಅರ್ಧಶತಕ ಮತ್ತು 4 ಶತಕಗಳನ್ನು ಹೊಂದಿದ್ದಾರೆ. ಇದಲ್ಲದೆ ಟಿ20ಯಲ್ಲಿ 188 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 7 ವಿಕೆಟ್ ಕೂಡ ಕಬಳಿಸಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ ಇಯಾನ್, 2015ರಲ್ಲಿ ಇಂಗ್ಲೆಂಡ್ ಪರ ಕೊನೆಯ ಪಂದ್ಯವನ್ನಾಡಿದ್ದರು.
ಭಾರತ ಕ್ರಿಕೆಟ್ ತಂಡದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವರದಿ: ವಿನಯ್ ಭಟ್.
ಇದನ್ನೂ ಓದಿ | ದುಬಾರಿ ಬೆಲೆಯ ಲ್ಯಾಂಡ್ ರೋವರ್ ಕಾರು ಖರೀದಿಸಿದ ಮೊಹಮ್ಮದ್ ಸಿರಾಜ್; ಟೀಮ್ ಇಂಡಿಯಾ ವೇಗಿಯ ಡ್ರೀಮ್ ಕಾರ್ ಹೀಗಿದೆ ನೋಡಿ