ಐಪಿಎಲ್ ಬಿಗ್ಗೆಸ್ಟ್ ಫ್ರಾಡ್, ಅವ್ರ ಹೆಂಡ್ರು ಮಕ್ಳು ತಣ್ಗಿರ್ಲಿ; ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ರೊಚ್ಚಿಗೆದ್ದ ಆರ್ಸಿಬಿ ಫ್ಯಾನ್ಸ್
Glenn Maxwell : 17ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಸತತ ವೈಫಲ್ಯ ಅನುಭವಿಸುತ್ತಿದ್ದು, ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಸತತ ಸೋಲುಗಳೊಂದಿಗೆ ಭಾರಿ ಹಿನ್ನಡೆ ಅನುಭವಿಸಿದೆ. ಈವರೆಗೂ ಆಡಿರುವ ಐದು ಪಂದ್ಯಗಳಲ್ಲಿ ಆರ್ಸಿಬಿ (RCB 2024) ನಾಲ್ಕರಲ್ಲಿ ಸೋತಿದೆ. ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. 17ನೇ ಆವೃತ್ತಿಯ ಐಪಿಎಲ್ನ 19ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು 6 ವಿಕೆಟ್ಗಳ ಅಂತರದಿಂದ ಮುಗ್ಗರಿಸಿತು. ಮೊದಲು ಬ್ಯಾಟ್ ನಡೆಸಿದ ಬೆಂಗಳೂರು 20 ಓವರ್ಗಳಲ್ಲಿ 3 ವಿಕೆಟ್ಗೆ 183 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್ಆರ್ 19.1 ಓವರ್ಗಳಲ್ಲೇ ಗೆದ್ದುಬೀಗಿತು.
ಬೆಂಗಳೂರು ತಂಡದಲ್ಲಿ ಘಟಾನುಘಟಿ ಆಟಗಾರರ ದಂಡೇ ಇದೆ. ಆದರೂ ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದ ಆಟಗಾರರು ತೀವ್ರ ವೈಫಲ್ಯದ ಸುಳಿಯಲ್ಲಿ ಸಿಲುಕಿದ್ದು, ಪಂದ್ಯದಿಂದ ಪಂದ್ಯಕ್ಕೆ ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಆಟಗಾರರ ಕಳಪೆ ಪ್ರದರ್ಶನವೇ ಆರ್ಸಿಬಿ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ. ಅದರಲ್ಲೂ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಕಳಪೆ ಪ್ರದರ್ಶನಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಐಪಿಎಲ್ನ ಬಿಗ್ಗೆಸ್ಟ್ ಫ್ರಾಡ್ ಎಂದು ಟೀಕಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಟ್ರೋಲ್ ಆಗ್ತಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್, 3 ಎಸೆತಗಳನ್ನು ಎದುರಿಸಿ ನಾಂಡ್ರೆ ಬರ್ಗರ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ಮ್ಯಾಕ್ಸಿ ಕ್ರೀಸ್ಗೆ ಬಂದ ವೇಳೆ ಇನ್ನೂ ಆರು ಓವರ್ಗಳು ಬಾಕಿ ಇದ್ದವು. ಆದರೆ 1 ರನ್ ಗಳಿಸಿ ಹಿಂದೆ ತಿರುಗದೆ ಪೆವಿಲಿಯನ್ ಸೇರಿದರು. ಟಿ20 ಕ್ರಿಕೆಟ್ಗೆ ಹೇಳಿ ಮಾಡಿರುವ ಆಸೀಸ್ ಆಲ್ರೌಂಡರ್, ಟೂರ್ನಿಯ ಆರಂಭದಿಂದ ಇಲ್ಲಿಯವರೆಗೂ ಒಂದು ಪಂದ್ಯದಲ್ಲೂ ಮಿಂಚಿಲ್ಲ. ಇದು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
ಐದು ಪಂದ್ಯಗಳಿಂದ 32 ರನ್
ಟಿ20 ಸ್ಪೆಷಲಿಸ್ಟ್ ಎಂದು ಕರೆಸಿಕೊಳ್ಳುವ ಗ್ಲೆನ್ ಮ್ಯಾಕ್ಸ್‌ವೆಲ್ 17ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಿರುವ 5 ಪಂದ್ಯಗಳಲ್ಲಿ ಕೇವಲ 32 ರನ್ ಗಳಿಸಿದ್ದಾರೆ. ಸಿಎಸ್ಕೆ ಮತ್ತು ಲಕ್ನೋ ವಿರುದ್ಧ ಶೂನ್ಯ ಸುತ್ತಿರುವ ಮ್ಯಾಕ್ಸ್‌ವೆಲ್, ಪಂಜಾಬ್ ವಿರುದ್ಧ 3 ರನ್, ರಾಜಸ್ಥಾನ್ ವಿರುದ್ಧ 1 ರನ್ ಗಳಿಸಿದರು. ಕೆಕೆಆರ್ ವಿರುದ್ಧ 28 ಗಳಿಸಿದರು. ಆದರೆ 2 ಜೀವದಾನ ಸಿಕ್ಕರೂ ದೊಡ್ಡಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಫ್ಯಾನ್ಸ್ ಐಪಿಎಲ್ನ ಬಿಗ್ಗೆಸ್ಟ್ ಫ್ರಾಡ್ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಅದರಲ್ಲೂ ಹಳ್ಳಿಕಾರ್ ಸಂತೋಷ್ ಹೇಳಿರುವ ಹೇಳಿಕೆಯನ್ನೇ ಸಿಂಕ್ ಮಾಡಿ ರುಬ್ಬುತ್ತಿದ್ದಾರೆ. ಅವ್ರು ಹೆಂಡ್ರು ಮಕ್ಳು ಚೆನ್ನಾಗಿರ್ಲಪ್ಪ ಎಂದು ಮ್ಯಾಕ್ಸಿ ಫೋಟೋ ಹಾಕಿ ಟ್ರೋಲ್ ಮಾಡುತ್ತಿದ್ದಾರೆ. ಏಕಾಂಗಿಯಾಗಿ ಪಂದ್ಯದ ಚಿತ್ರಣವನ್ನೇ ಬದಲಿಸುವ ತಾಕತ್ತಿರುವ ಆಸೀಸ್ ಆಟಗಾರ ದಯನೀಯ ಸ್ಥಿತಿಗೆ ಬಂದಿರುವುದು ನಿಜಕ್ಕೂ ಆರ್ಸಿಬಿ ಪಾಲಿಗೆ ಅನ್ ಲಕ್ಕಿ ಎಂದು ಕೆಲವರು ಹೇಳುತ್ತಿದ್ದಾರೆ. ಪದೆಪದೆ ಫೇಲ್ ಆಗುತ್ತಿದ್ದರೂ ಮತ್ತೆ ಮತ್ತೆ ಅವರಿಗೇ ಅವಕಾಶ ನೀಡುತ್ತಿರುವುದು ಬೇಸರ ತರಿಸಿದೆ.
'ವಿಲ್ ಜಾಕ್ಸ್ಗೆ ಅವಕಾಶ ನೀಡಿ'
ಟಿ20 ಕ್ರಿಕೆಟ್ನಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿರುವ ಇಂಗ್ಲೆಂಡ್ ತಂಡದ ಆಟಗಾರ ವಿಲ್ ಜಾಕ್ಸ್ಗೆ ಅವಕಾಶ ನೀಡಬೇಕೆಂದು ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ. ಚಿನ್ನದ ಹುಂಡಿನಾ ಚಿಲ್ಲರೆ ಕಾಸು ಹಾಕೋಕೆ ಇಟ್ಕೊಂಡಿದ್ದಾರೆ. ಈತನೊಬ್ಬ ಇದ್ದರೆ ಗೆಲುವು ನಮ್ಮದೇ ಎಂದು ಮ್ಯಾಕ್ಸಿಗೆ ಬಯುತ್ತಾ, ಮುಂದಿನ ಪಂದ್ಯದಲ್ಲಿ ಕೈಬಿಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಕ್ರಿಕೆಟ್ ತಜ್ಞರು ಮತ್ತು ಪಂಡಿತರು ಸಹ ಇದೇ ಸಲಹೆ ನೀಡುತ್ತಿದ್ದಾರೆ. ಆದರೆ, ಆರ್ಸಿಬಿ ಮ್ಯಾನೇಜ್ಮೆಂಟ್ ಕಿವಿಗೊಡುತ್ತಿಲ್ಲ.
ಮ್ಯಾಕ್ಸಿಗೆ ಸಿಗುತ್ತಿದೆ 14.25 ಕೋಟಿ
ಐಪಿಎಲ್ನಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ಕ್ರಿಕೆಟಿಗರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಒಬ್ಬರು. ಅವರು ಪ್ರತಿ ಸೀಸನ್ಗೆ 14.25 ಕೋಟಿ ಪಡೆಯುತ್ತಿದ್ದಾರೆ. ಆದರೆ ಪಡೆದ ಹಣಕ್ಕೆ ನ್ಯಾಯ ಕೂಡ ಕೊಡುತ್ತಿಲ್ಲ. ಇವರೊಂದಿಗೆ 17.50 ಕೋಟಿ ಪಡೆದ ಕ್ಯಾಮರೂನ್ ಗ್ರೀನ್ ಮತ್ತು ರಜತ್ ಪಾಟೀದಾರ್ ಹಾಗೆಯೇ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ತೀವ್ರ ನಿರಾಸೆ ಮೂಡಿಸಿದ್ದಾರೆ. ಬೌಲಿಂಗ್ನಲ್ಲಿ ಅಲ್ಜಾರಿ ಜೋಸೆಫ್ ಸಹ 11.50 ಕೋಟಿ ಪಡೆದು ವೈಫಲ್ಯ ಅನುಭವಿಸಿದ್ದಾರೆ.