ಆಸೀಸ್ ನೆಲದಲ್ಲಿ ಹ್ಯಾಟ್ರಿಕ್ ಸಾಧನೆಗೆ ಭಾರತ ತವಕ; ಬಾರ್ಡರ್-ಗವಾಸ್ಕರ್ ಟ್ರೋಫಿ ಇತಿಹಾಸವೇನು, ಬಲಿಷ್ಠ ತಂಡ ಯಾವುದು?
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುವ ಟೆಸ್ಟ್ ಸರಣಿಯ ಹೆಸರು ಬಾರ್ಡರ್-ಗವಾಸ್ಕರ್ ಟ್ರೋಫಿ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಂದು, ನವೆಂಬರ್ 22ರಿಂದ 26ರವರೆಗೆ ಪರ್ತ್‌ನಲ್ಲಿ ನಡೆಯಲಿದೆ. ಈ ಬಾರಿ ಸರಣಿಯಲ್ಲಿ 5 ಪಂದ್ಯ ನಡೆಯುತ್ತಿದ್ದು, ಆಸೀಸ್ ನೆಲದಲ್ಲಿ ಹ್ಯಾಟ್ರಿಕ್ ಸರಣಿ ಗೆಲುವಿಗೆ ಭಾರತ ಸಜ್ಜಾಗಿದೆ.
ಕ್ರಿಕೆಟ್ ಎಂದರೆ ಅದು ಹೊಡಿಬಡಿ ಆಟ ಟಿ20 ಅಥವಾ ಏಕದಿನ ಪಂದ್ಯ ಮಾತ್ರವಲ್ಲ. ಕ್ರಿಕೆಟ್ ಆಟದ ನಿಜವಾದ ಸತ್ವ ಇರುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ಎಂಬುದು ಸಾಬೀತಾಗಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ, ಟೆಸ್ಟ್ ಕ್ರಿಕೆಟ್‌ಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೇರ್ಪಡೆಗೊಂಡಿದ್ದು, ಈ ಸ್ವರೂಪವನ್ನು ಮತ್ತಷ್ಟು ಜನಪ್ರಿಯಗೊಳಿಸಿದೆ. ಇದರ ಹೊರತಾಗಿ ಟೆಸ್ಟ್ ಕ್ರಿಕೆಟ್ ಎಂದಾಗ ಹೆಚ್ಚು ನೆನೆಪಾಗುವುದೇ ಆಶಸ್ ಸರಣಿ ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿ. ಈ ಬಾರಿ ನವೆಂಬರ್ 22ರಿಂದ ಜನವರಿ 7ರವರೆಗೆ ಹೆಚ್ಚೂ ಕಡಿಮೆ ಒಂದೂವರೆ ತಿಂಗಳ ಕಾಲ 5 ಪಂದ್ಯಗಳ ಈ ಟೆಸ್ಟ್ ಸರಣಿ ನಡೆಯುತ್ತಿದೆ. ವಿಶ್ವದ ಎರಡು ಬಲಿಷ್ಠ ಕ್ರಿಕೆಟ್ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಇದಾಗಿದ್ದು, ವಿಶ್ವಕಪ್ ಅಥವಾ ಯಾವುದೇ ಐಸಿಸಿ ಟೂರ್ನಿಯಷ್ಟೇ ಜನಪ್ರಿಯವಾಗಿದೆ. ಇದು ಟೆಸ್ಟ್ ಸರಣಿಯಾದರೂ, ಟಿ20 ಪಂದ್ಯದಷ್ಟೇ ರೋಚಕತೆ ಸೃಷ್ಟಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುವ ಟೆಸ್ಟ್ ಸರಣಿಯ ಹೆಸರು ಬಾರ್ಡರ್-ಗವಾಸ್ಕರ್ ಟ್ರೋಫಿ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯವು ಇಂದಿನಿಂದ, ಅಂದರೆ ನವೆಂಬರ್ 22ರಿಂದ 26ರವರೆಗೆ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆಯಲಿದೆ. ಕಳೆದ ಬಾರಿ ಭಾರತದ ಆತಿಥ್ಯದಲ್ಲಿ ಸರಣಿ ನಡೆದು, ಭಾರತವು ಸರಣಿ ಜಯ ಸಾಧಿಸಿತ್ತು.
ಬಾರ್ಡರ್-ಗವಾಸ್ಕರ್ ಟ್ರೋಫಿ ಇತಿಹಾಸ
ಉಭಯ ತಂಡಗಳು 1947-48 ಮತ್ತು 1991-92ರ ನಡುವೆ ನಡೆದ ಒಟ್ಟು 12 ಸರಣಿಗಳಲ್ಲಿ ಬರೋಬ್ಬರಿ 50 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆ ಬಳಿಕ ಬಳಿಕ, ಇಬ್ಬರು ದಿಗ್ಗಜ ಕ್ರಿಕೆಟರ್‌ಗಳಾದ ಸುನಿಲ್ ಗವಾಸ್ಕರ್(Sunil Gavaskar) ಮತ್ತು ಅಲನ್ ಬಾರ್ಡರ್(Allan Border) ಅವರಿಗೆ ಗೌರವ ಸೂಚಕವಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆರಂಭಿಸಲಾಯ್ತು. ಅಲನ್ ಬಾರ್ಡರ್ ಅವರು ಆಸ್ಟ್ರೇಲಿಯಾದ ಮಾಜಿ ನಾಯಕರಾಗಿದ್ದರು. ಸುನಿಲ್ ಗವಾಸ್ಕರ್ ಭಾರತ ತಂಡದ ನಾಯಕರಾಗಿದ್ದರು. ಭಾರತ ಮತ್ತು ಆಸ್ಟ್ರೇಲಿಯಾವು ಮೊದಲ ಬಾರಿಗೆ 1996-97ರಲ್ಲಿ ಈ ಬಾರ್ಡರ್-ಗವಾಸ್ಕರ್ ಟ್ರೋಫಿ (Border-Gavaskar Trophy) ಸರಣಿಯಲ್ಲಿ ಆಡಿದವು.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ vs ಆಸ್ಟ್ರೇಲಿಯಾ ಮುಖಾಮುಖಿ
ಪ್ರತಿಷ್ಟಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಅಡಿಯಲ್ಲಿ ಈವರೆಗೆ 16 ಸರಣಿಗಳು ನಡೆದಿವೆ. ಇದರಲ್ಲಿ ಕಳೆದ ನಾಲ್ಕು ಆವೃತ್ತಿಗಳಲ್ಲಿ ಸತತ ಟ್ರೋಫಿ ಗೆದ್ದಿರುವ ಭಾರತ ತಂಡವು ಒಟ್ಟು 10 ಬಾರಿ ಸರಣಿ ಗೆದ್ದು ಅತ್ಯಂತ ಯಶಸ್ವಿ ತಂಡವಾಗಿದೆ. ಒಂದು ಬಾರಿ ಸರಣಿ ಡ್ರಾ ಆದಾಗ ಟ್ರೋಫಿ ರಿಟೈನ್ ಮಾಡಿಕೊಂಡಿದೆ. ಉಳಿದಂತೆ ಆಸ್ಟ್ರೇಲಿಯಾವು ಐದು ಬಾರಿ ಸರಣಿ ಗೆಲುವು ಸಾಧಿಸಿದೆ.
ಕೊನೆಯ ಬಾರಿಗೆ, ಅಂದರೆ 2022–23 ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಸರಣಿಯನ್ನು ಭಾರತವು 2-1ಅಂತರದಿಂದ ಗೆದ್ದಿತ್ತು. ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. ಅದಕ್ಕೂ ಹಿಂದಿನ ಆವೃತ್ತಿ 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಅಮೋಘ ಹಾಗೂ ಐತಿಹಾಸಿಕ ಗೆಲುವು ದಾಖಲಿಸಿತ್ತು. ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಯು ಭಾರತದ ಕೈಯಲ್ಲಿದೆ. ಒಂದು ವೇಳೆ ಈ ಬಾರಿ ನಡೆಯುವ ಸರಣಿ ಸಮಬಲದಲ್ಲಿ ಅಂತ್ಯವಾದರೆ, ಈಗ ಟ್ರೋಫಿಯನ್ನು ಹೊಂದಿರುವ ಭಾರತವೇ ಅದನ್ನು ಉಳಿಸಿಕೊಳ್ಳುತ್ತದೆ.
ಭಾರತ ಮತ್ತು ಆಸ್ಟ್ರೇಲಿಯಾ ಪರಸ್ಪರ ಮುಖಾಮುಖಿ ದಾಖಲೆ
- ಪಂದ್ಯಗಳು: 107
- ಭಾರತದ ಗೆಲುವು :32 ಪಂದ್ಯಗಳು
- ಆಸ್ಟ್ರೇಲಿಯಾ ಗೆಲುವು: 45 ಪಂದ್ಯಗಳು
- ಡ್ರಾ: 29
- ಟೈ: 1
ಇಲ್ಲಿಯವರೆಗೆ ನಡೆದ ಸರಣಿಯ ಫಲಿತಾಂಶ
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈವರೆಗೆ ಭಾರತದ ಆತಿಥ್ಯದಲ್ಲಿ ಒಟ್ಟು 15 ಸರಣಿಗಳಲ್ಲಿ ಆಡಿವೆ. ಇದರಲ್ಲಿ ಭಾರತವು 9 ಸರಣಿಗಳನ್ನುಗೆದ್ದರೆ, ಆಸೀಸ್ 4ರಲ್ಲಿ ಜಯಭೇರಿ ಬಾರಿಸಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಡಿ ಭಾರತದಲ್ಲಿ ಎಂಟು ಟೆಸ್ಟ್ ಸರಣಿಗಳನ್ನು ಆಡಲಾಗಿದೆ. ಇದರಲ್ಲಿ ಆತಿಥೇಯರು 7 ಸರಣಿಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ತವರು ನೆಲದಲ್ಲಿ ಭಾರತವು ಬಲಿಷ್ಠವಾಗಿದ್ದು, ಒಟ್ಟು 25 ಟೆಸ್ಟ್ ಪಂದ್ಯಗಳಲ್ಲಿ 16ರಲ್ಲಿ ಜಯ ಗಳಿಸಿದೆ. 5ರಲ್ಲಿ ಸೋಲು ಅನುಭವಿಸಿದೆ. ಇದೇ ವೇಳೆ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಕೊನೆಯ ಎರಡೂ ಸರಣಿಗಳಲ್ಲಿ ಭಾರತವೇ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಬಾರಿ ಗೆದ್ದರೆ, ಕಾಂಗರೂ ನೆಲದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗುತ್ತದೆ.