ಪಿಂಕ್ ಬಾಲ್ ಟೆಸ್ಟ್ ಇತಿಹಾಸ, ಹಗಲು-ರಾತ್ರಿ ಟೆಸ್ಟ್ ಆರಂಭಕ್ಕೆ ಕಾರಣವೇನು, ಮೊದಲ ಪಂದ್ಯ ನಡೆದಿದ್ದು ಯಾವಾಗ?
Pink Ball Test History: ಪಿಂಕ್ ಬಾಲ್ ಟೆಸ್ಟ್ ಇತಿಹಾಸವೇನು? ಹಗಲು-ರಾತ್ರಿ ಟೆಸ್ಟ್ ಆರಂಭಕ್ಕೆ ಕಾರಣವೇನು, ಗುಲಾಬಿ ಬಣ್ಣದ ಚೆಂಡಿನೊಂದಿಗೆ ಮೊದಲ ಪಂದ್ಯ ನಡೆದಿದ್ದು ಯಾವಾಗ? ಇಲ್ಲಿದೆ ಎಲ್ಲಾ ವಿವರ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಇಂದಿನಿಂದ (ಡಿಸೆಂಬರ್ 6) ಆರಂಭವಾಗಲಿದೆ. ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯುವ ಈ ಪಂದ್ಯವು ಇಂಡೋ-ಆಸೀಸ್ ನಡುವಿನ 2ನೇ ಹಗಲು-ರಾತ್ರಿ ಟೆಸ್ಟ್ ಆಗಿದೆ. 2 ದೇಶಗಳ ನಡುವಿನ ಮೊದಲ ಗುಲಾಬಿ-ಚೆಂಡಿನ ಟೆಸ್ಟ್ ಪಂದ್ಯ 2020ರಲ್ಲಿ ನಡೆದಿತ್ತು. ಆ ಪಂದ್ಯ ಕೂಡ ಅಡಿಲೇಡ್‌ನಲ್ಲೇ ಜರುಗಿತ್ತು. ಆದರೆ ಭಾರತ ಸೋಲು ಕಂಡಿತ್ತು. ಆಸ್ಟ್ರೇಲಿಯಾ 12 ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 11ರಲ್ಲಿ ಜಯಿಸಿದೆ. ಆದರೆ, ಭಾರತ ಆಡಿರುವ 4 ಪಿಂಕ್ ಬಾಲ್ ಟೆಸ್ಟ್ಗಳಲ್ಲಿ ಮೂರರಲ್ಲಿ ಗೆದ್ದಿದೆ.
ಭಾರತ ತಂಡವು ತನ್ನ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆಡಿದ್ದು ಬಾಂಗ್ಲಾದೇಶ ವಿರುದ್ಧ 2019ರಲ್ಲಿ. ಕೋಲ್ಕತ್ತಾದಲ್ಲಿ ಪಂದ್ಯ ನಡೆದಿತ್ತು. ಅಹ್ಮಾದಾಬಾದ್ನಲ್ಲಿ ಇಂಗ್ಲೆಂಡ್ ವಿರುದ್ಧ (2021), ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ (2022) ಗೆದ್ದಿತ್ತು. ಆದರೆ 2020ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಸೋತಿತ್ತು. ಇದೀಗ ಟೀಮ್ ಇಂಡಿಯಾ ಕಳೆದ ಬಾರಿ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಸರಣಿಯಲ್ಲಿ ಮುನ್ನಡೆ ಸಾಧಿಸಲು ಈ ಪಂದ್ಯದ ಗೆಲುವು ಅನಿವಾರ್ಯವಾಗಲಿದೆ. ಡಬ್ಲ್ಯುಟಿಸಿ ಫೈನಲ್ ಹಾದಿಯನ್ನು ಸುಗಮಗೊಳಿಸಲು ಸಹ ಗೆಲ್ಲುವುದು ಅನಿವಾರ್ಯವಾಗಿದೆ. ಹಾಗಾದರೆ, ಪಿಂಕ್ ಬಾಲ್ ಟೆಸ್ಟ್ ಇತಿಹಾಸವೇನು ಎಂಬುದನ್ನು ಒಮ್ಮೆ ಗಮನಿಸೋಣ.
ಟೆಸ್ಟ್ ಕ್ರಿಕೆಟ್ಗೆ ಸುದೀರ್ಘವಾದ ಇತಿಹಾಸ ಇದೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಹೊಂದಿದೆ. ಇದೆಲ್ಲವೂ ಏಕದಿನ ಮತ್ತು ಟಿ20 ಫಾರ್ಮೆಟ್ ಬರುವುದಕ್ಕೂ ಮುನ್ನ. ಅದರಲ್ಲೂ ಟಿ20 ಕ್ರಿಕೆಟ್ ಬಂದ ನಂತರ ಟೆಸ್ಟ್ ಕ್ರಿಕೆಟ್ ವೀಕ್ಷಿಸುವವರ ಸಂಖ್ಯೆ ಕ್ಷೀಣಿಸಿತು. ಹೀಗಾಗಿ ಟೆಸ್ಟ್ ಕ್ರಿಕೆಟ್ ರಕ್ಷಿಸುವ ಅನಿವಾರ್ಯ ಎದುರಾಯಿತು. ವರ್ಷಗಳ ಚರ್ಚೆ, ಹಲವು ಪ್ರಯೋಗಗಳ ಬಳಿಕ ಐಸಿಸಿ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳನ್ನು ಆರಂಭಿಸಿತು. ಆದರೆ ಇದಕ್ಕೂ ಮುನ್ನ ಹಗಲು-ರಾತ್ರಿ ಟೆಸ್ಟ್ ಹೇಗೆ ಆರಂಭಿಸಬೇಕು ಎನ್ನುವುದರ ಕುರಿತು ಸಂಶೋಧನೆ ನಡೆಯಿತು. ಇದು ಹಂತ ಹಂತವಾಗಿ ಜನಪ್ರಿಯ ಗಳಿಸಲು ಆರಂಭಿಸಿತು. ಹಗಲು ರಾತ್ರಿ ಪಂದ್ಯ ನಡೆಸಿ ಪ್ರೈಮ್ಟೈಮ್ನಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಿತು.
ಕಿತ್ತಳೆ-ಹಳದಿ ಚೆಂಡಿನೊಂದಿಗೆ ಪ್ರಯೋಗ
ಟೆಸ್ಟ್ ಕ್ರಿಕೆಟ್ ಹಗಲಿನಲ್ಲಿ ಆಡುವ ಮಾದರಿಯಾಗಿತ್ತು. ಆಟಗಾರರು ಬಿಳಿ ಜೆರ್ಸಿ ಧರಿಸುತ್ತಿದ್ದ ಕಾರಣ ಬಿಳಿ ಚೆಂಡಿನ ಬದಲಿಗೆ ಚೆಂಡನ್ನು ಗುರುತಿಸಲು ಕೆಂಪು ಚೆಂಡಿನೊಂದಿಗೆ ಆಡುತ್ತಿದ್ದರು. ಆದರೆ ಡೇ-ನೈಟ್ ಪಂದ್ಯದಲ್ಲಿ ಫ್ಲಡ್‌ಲೈಟ್‌ಗಳ ಅಡಿಯಲ್ಲಿ ಕೆಂಪು ಬಣ್ಣವನ್ನು ಗುರುತಿಸಲು ಕಷ್ಟವಾಗುವುದರಿಂದ ಚೆಂಡನ್ನು ಬದಲಾಯಿಸಬೇಕಾಯಿತು. ಕೆಂಪು ಚೆಂಡು ಬೆಳಕಿನ ದೀಪಗಳ ಅಡಿಯಲ್ಲಿ ಗೋಚರಿಸದ ಕಾರಣ ಹಗಲು-ರಾತ್ರಿ ಟೆಸ್ಟ್ಗಳಿಗೆ ಪಿಂಕ್ ಬಾಲ್ ಆಯ್ಕೆ ಮಾಡಲಾಯಿತು. ಪಿಂಕ್ ಬಾಲ್ ಅಂತಿಮಗೊಳಿಸುವುದಕ್ಕೂ ಮುನ್ನ ಹಳದಿ ಮತ್ತು ಕಿತ್ತಳೆ ಚೆಂಡಿನೊಂದಿಗೂ ಪ್ರಯೋಗ ಮಾಡಲಾಗಿತ್ತು. ಗುಲಾಬಿ ಬಣ್ಣದ ಚೆಂಡನ್ನು ಪಾಲಿಯುರೆಥೇನ್‌ನಿಂದ ಲೇಪಿಸಲಾಗುತ್ತದೆ.
ಮೊದಲ ಪಿಂಕ್ ಬಾಲ್ ಟೆಸ್ಟ್
2012ರಲ್ಲಿ ಟೆಸ್ಟ್ ಕ್ರಿಕೆಟ್ ಅನ್ನು ಏಕದಿನ, ಟಿ20ಯಂತೆ ಹಗಲು ಮತ್ತು ರಾತ್ರಿ ನಡೆಸಲು ಐಸಿಸಿ ಅನುಮತಿ ನೀಡಿತು. ಇದಾದ ಮೂರು ವರ್ಷಗಳ ನಂತರ ಅಂದರೆ 2015ರಲ್ಲಿ ಅಧಿಕೃತವಾಗಿ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್ ನಡೆಯಿತು. ಅದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಅಡಿಲೇಡ್ನಲ್ಲಿ ನಡೆಯಿತು. ಇದು ಅಂತಾರಾಷ್ಟ್ರೀಯ ಪಂದ್ಯ ಆಗಿತ್ತು. ಆದರೆ ಇದಕ್ಕೂ ಮೊದಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) 2010ರಲ್ಲಿ ಬಾಂಗ್ಲಾದೇಶದ ವಿರುದ್ಧದ ಲಾರ್ಡ್ಸ್ ಟೆಸ್ಟ್ ಅನ್ನು ಪಿಂಕ್ ಬಾಲ್ ಟೆಸ್ಟ್ ಆಡುವುದಾಗಿ ಎಂದು ಘೋಷಿಸಿತ್ತು. ಆದರೆ 2 ಕೌಂಟಿಗಳು ಪಿಂಕ್ ಬಾಲ್ ಟೆಸ್ಟ್ ಆಯೋಜಿಸಲು ವಿಫಲವಾದವು. ಡರ್ಹ್ಯಾಮ್ ಮತ್ತು ವೋರ್ಸೆಸ್ಟರ್ಶೈರ್ ತಂಡಗಳು ಗುಲಾಬಿ ಬಣ್ಣದ ಟೆಸ್ಟ್ ಪಂದ್ಯಗಳ ಯೋಜನೆಗೆ ನಿರಾಕರಿಸಿದ್ದವು.
ದೇಶೀಯ ಕ್ರಿಕೆಟ್ನಲ್ಲಿ ಪಿಂಕ್ ಬಾಲ್ ಟೆಸ್ಟ್
2009ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ಏಕದಿನದಲ್ಲಿ ಗುಲಾಬಿ ಚೆಂಡನ್ನು ಪ್ರಯೋಗಿಸಲಾಗಿತ್ತು. 2010ರ ಜನವರಿಯಲ್ಲಿ ಆಂಟಿಗುವಾದಲ್ಲಿ ಗಯಾನಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ನಡುವಿನ ಪ್ರಥಮ ದರ್ಜೆ ಪಂದ್ಯವು ಗುಲಾಬಿ ಚೆಂಡಿನೊಂದಿಗೆ ಆಡಲಾಗಿತ್ತು. ಹಾಗೆಯೇ ಡರ್ಹಾಮ್ ಮತ್ತು ಎಂಸಿಸಿ ನಡುವಿನ 2010 ರ ಚಾಂಪಿಯನ್ ಕೌಂಟಿ ಪಂದ್ಯವನ್ನು ಅಬುಧಾಬಿಯಲ್ಲಿ ಫ್ಲಡ್ಫೈಟ್ಗಳ ಅಡಿಯಲ್ಲಿ ಆಡಲಾಗಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ 2010-11ರ ತಮ್ಮ ಪ್ರಥಮ ದರ್ಜೆ ಟೂರ್ನಿಯ ಕ್ವೈಡ್-ಎ-ಅಜಮ್ ಟ್ರೋಫಿಯ ಫೈನಲ್ನಲ್ಲಿ ಕಿತ್ತಳೆ ಚೆಂಡನ್ನು ಪ್ರಯೋಗಿಸಿತ್ತು. 2011-12ರ ಫೈನಲ್ನಲ್ಲಿ ಗುಲಾಬಿ ಬಣ್ಣದ ಚೆಂಡಿನಲ್ಲಿ ಆಡಲಾಗಿತ್ತು. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಎರಡೂ 2012-2013ರಲ್ಲಿ ಪಿಂಕ್ಬಾಲ್ನೊಂದಿಗೆ ಪ್ರಯೋಗ ನಡೆಸಿದ್ದವು. 2014ರಲ್ಲಿ ಆಸ್ಟ್ರೇಲಿಯಾದಲ್ಲಿ ಸಂಪೂರ್ಣ ಸುತ್ತಿನ ಶೆಫೀಲ್ಡ್ ಶೀಲ್ಡ್ ಪಂದ್ಯಗಳನ್ನು ಗುಲಾಬಿ ಕೂಕಬುರಾ ಚೆಂಡಿನೊಂದಿಗೆ ಆಡಲಾಗಿತ್ತು.