BAMTC 2025: ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋತರೂ ಭಾರತ ಕ್ವಾರ್ಟರ್ ಫೈನಲ್‌ಗೆ ಲಗ್ಗೆ, ಜಪಾನ್ ವಿರುದ್ಧ ಸೆಣಸಾಟ
BWF Asia Mixed Team Championships 2025: ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್ 2025 ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋತರೂ ಭಾರತ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಗುರುವಾರ (ಫೆಬ್ರವರಿ 13) ಚೀನಾದ ಕ್ವಿಂಗ್ಡಾವೊ ಕಾನ್ಸನ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್ 2025ರ (BWF Asia Mixed Team Championship 2025) ಗ್ರೂಪ್ ಡಿ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ 2-3 ಅಂತರದಿಂದ ಸೋಲು ಕಂಡಿತು. ಸೋತರೂ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಭಾರತ, ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಳಿಸುವಲ್ಲಿ ಯಶಸ್ವಿಯಾಯಿತು. ಚೀನಾದ ಮಕಾವು ವಿರುದ್ಧ ಭಾರತ 5-0 ಅಂತರದ ಪ್ರಬಲ ಜಯ ಸಾಧಿಸಿದ ಒಂದು ದಿನದ ನಂತರ ಈ ಸೋಲು ಸಂಭವಿಸಿದೆ. ಇದೀಗ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ವಿರುದ್ಧ ಸೆಣಸಾಟ ನಡೆಸಲಿದೆ.
ಮಿಶ್ರ ಡಬಲ್ಸ್ ಜೋಡಿ ಧ್ರುವ್ ಕಪಿಲಾ ಮತ್ತು ತನಿಶಾ ಕ್ರಾಸ್ಟೊ ಅವರು ಜು ಡಾಂಗ್ ಕಿ ಮತ್ತು ಯುನ್ ನಾ ಜಿಯೊಂಗ್ ವಿರುದ್ಧ 21-11, 12-21, 15-21 ಅಂತರದಲ್ಲಿ ಸೋತರು. ಜಿನ್ ಯು ಸಿಮ್ ವಿರುದ್ಧ ಮಾಲ್ವಿಕಾ ಬನ್ಸೋದ್ 27 ನಿಮಿಷಗಳ ನೇರ ಗೇಮ್‌ಗಳಿಂದ ಪರಾಭವಗೊಂಡರು. ಹಾಗಾಗಿ ಕೊರಿಯನ್ನರು 2-0 ಮುನ್ನಡೆ ಸಾಧಿಸಿದರು.
ಜಿಯೋನಿಯೊಪ್ ಚೋ ವಿರುದ್ಧ ಸತೀಶ್ ಕರುಣಾಕರನ್ 17-21, 21-18, 21-19 ಅಂತರದ ಭರ್ಜರಿ ಗೆಲುವು ಭಾರತದ ಪುನರಾಗಮನಕ್ಕೆ ಕಾರಣವಾಯಿತು. ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ - ಸತೀಶ್ ಅವರಂತೆಯೇ ತಮ್ಮ ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಹಿನ್ನಡೆಯಲ್ಲಿದ್ದರು. ಬಳಿ ಕಂಬ್ಯಾಕ್ ಮಾಡಿದ ಭಾರತದ ಜೋಡಿ, ಜಿ ಮಿನ್ ಕಿಮ್ ಮತ್ತು ಜಂಗ್ ಯು ಕಿಮ್ ಅವರನ್ನು 19-21, 21-16, 21-11 ಅಂತರದಿಂದ ಸೋಲಿಸಿದ ನಂತರ ಭಾರತ ತಂಡ ಸಮಬಲ ಸಾಧಿಸಿತು.
ಪ್ರತಿರೋಧಕ್ಕೂ ಜಗ್ಗದ ಕೊರಿಯಾ ಜೋಡಿ
ಪುರುಷರ ಡಬಲ್ಸ್‌ನಲ್ಲಿ 2-2 ಸಮಬಲದಲ್ಲಿದ್ದಾಗ ಭಾರತವನ್ನು ಗೆಲುವಿನ ಗೆರೆ ದಾಟಿಸುವ ಜವಾಬ್ದಾರಿ ಎಂಆರ್ ಅರ್ಜುನ್ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರ ಮೇಲಿತ್ತು. ಆದರೆ ಯೋಂಗ್ ಜಿನ್ ಮತ್ತು ಸೆಯುಂಗ್ ಸಂಗ್ ನಾ ಜೋಡಿಯು ಭಾರತೀಯ ಜೋಡಿ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರಿತು. 2ನೇ ಗೇಮ್‌ನಲ್ಲಿ ಅರ್ಜುನ್ ಮತ್ತು ಸಾತ್ವಿಕ್ ಅವರ ಸ್ವಲ್ಪ ಪ್ರತಿರೋಧದ ಹೊರತಾಗಿಯೂ ಕೊರಿಯಾ ಜೋಡಿ 21-14, 25-23 ಅಂತರದಲ್ಲಿ ಜಯ ಸಾಧಿಸುವ ಮೂಲಕ ತಮ್ಮ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಭಾರತವು ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ವಿರುದ್ಧ ಆಡಲಿದ್ದು, ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಕನಿಷ್ಠ ಕಂಚಿನ ಪದಕ ಖಚಿತವಾಗುತ್ತದೆ. ಆದರೆ ಗಾಯಗೊಂಡ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರ ಅನುಪಸ್ಥಿತಿ ಕಾಡಿದ್ದಂತೂ ಸುಳ್ಳಲ್ಲ. ಫೆಬ್ರವರಿ 12ರಂದು ಕ್ವಿಂಗ್ಡಾವೊ ಕಾನ್ಸನ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದಿದ್ದ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮಕಾವು ವಿರುದ್ಧ 5-0 ಅಂತರದ ಪ್ರಬಲ ಜಯ ಸಾಧಿಸುವ ಮೂಲಕ ತನ್ನ ಮೊದಲ ಟೈ ಅನ್ನು ಕ್ಲೀನ್-ಸ್ವೀಪ್ ಮಾಡಿತು.
