ಪದೇ ಪದೇ ರೋಹಿತ್ ಶರ್ಮಾ ತೋರಿಸಿದ ಕ್ಯಾಮೆರಾಮೆನ್; ಬಾಸ್ನ ನೋಡೋಕೆ ಆಗ್ತಿಲ್ಲ, ತೋರಿಸ್ಬೇಡ್ರೋ ಎಂದ ಹಿಟ್ಮ್ಯಾನ್ ಫ್ಯಾನ್ಸ್
Rohit Sharma : ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕತ್ವ ಕಳೆದುಕೊಂಡು ಕೇವಲ ಆಟಗಾರನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಅವರನ್ನು ಕ್ಯಾಮೆರಾಮೆನ್ ಪದೇ ಪದೇ ತೋರಿಸುತ್ತಿದ್ದರು. ಹಾಗಾಗಿ ಪದೇ ಪದೇ ತೋರಿಸಬೇಡಿ, ನಮ್ಮ ಬಾಸ್ನ ನೋಡೋಕೆ ಆಗ್ತಿಲ್ಲ ಎಂದು ಫ್ಯಾನ್ಸ್ ಕೇಳಿದ್ದಾರೆ.
2013ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ನಾಯಕತ್ವ ವಹಿಸಿಕೊಂಡು ಐದು ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ (Rohit Sharma), 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ನಾಯಕನಲ್ಲದೆ ಕೇವಲ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ತನ್ನ ಕ್ಯಾಪ್ಟನ್ಸಿಯಲ್ಲಿ ಬೆಳೆದ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಮೊದಲ ಬಾರಿಗೆ ಆಡುತ್ತಿರುವ ರೋಹಿತ್ ಅವರನ್ನೇ ಕ್ಯಾಮೆರಾಮನ್ ಪದೇ ಪದೇ ತೋರಿಸುವ ಮೂಲಕ ಹಿಟ್ಮ್ಯಾನ್ ಅಭಿಮಾನಿಗಳ ಮನಸ್ಸು ನೋಯಿಸಿದ್ದಾರೆ.
ಐಪಿಎಲ್ನ ಐದನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ರೋಹಿತ್ ಅವರು ಮೈದಾನದಲ್ಲಿ ಕಾಣಿಸಿಕೊಂಡರು. ಈ ಅವಧಿಯಲ್ಲಿ ಅವರ ಮುಖದಲ್ಲಿ ಮೊದಲಿದ್ದ ಕಳೆ ಕಂಡು ಬರಲಿಲ್ಲ. ಈ ಮೊದಲು ನಗು ಮುಖದಲ್ಲೇ ಇರುತ್ತಿದ್ದ ಹಿಟ್ಮ್ಯಾನ್, ನಾಯಕತ್ವ ಕಳೆದುಕೊಂಡು ಮೈದಾನಕ್ಕಿಳಿದ ಮೊದಲ ಪಂದ್ಯದಲ್ಲಿ ಸಪ್ಪಗಿದ್ದರು. ಬೌಲರ್ ವಿಕೆಟ್ ಪಡೆದರೂ ಸಹ ಹೆಚ್ಚು ಸಂಭ್ರಮಿಸಲಿಲ್ಲ. ತಾನು ಕ್ಯಾಚ್ ಹಿಡಿದರೂ ತನ್ನಲ್ಲಿ ಮೊದಲಿದ್ದ ಜೋಶ್ ಕಾಣಿಸಲಿಲ್ಲ.
ಜೋಶ್ ಕಳೆದುಕೊಂಡಿದ್ದ ರೋಹಿತ್ ಅವರನ್ನು ಪಂದ್ಯದ ಮಧ್ಯೆ ಪದೇ ಪದೇ ತೋರಿಸಲಾಗುತ್ತಿತ್ತು. ಅವರು ಸಪ್ಪಗಿರುವುದನ್ನು ನೋಡಿದ ಅಭಿಮಾನಿಗಳು ನೊಂದುಕೊಳ್ಳುತ್ತಿದ್ದಾರೆ. ಈ ಚಿತ್ರಗಳು ಹಿಟ್ಮ್ಯಾನ್ ಅಭಿಮಾನಿಗಳ ಮನಸ್ಸನ್ನು ಹೆಚ್ಚು ಘಾಸಿಗೊಳಿಸಿತು. ಹಾಗಾಗಿ ಕ್ಯಾಮೆರಾಮೆನ್ ರೋಹಿತ್ರನ್ನೇ ಪದೆಪದೇ ತೋರಿಸುತ್ತಿದ್ದ ಕಾರಣ, ಅಭಿಮಾನಿಗಳು ಮನವಿಯೊಂದನ್ನು ಮಾಡಿದ್ದಾರೆ. ನಮ್ಮ ಬಾಸ್ನನ್ನು ಪದೆಪದೇ ತೋರಿಸಬೇಡ್ರೋ, ಅವರನ್ನು ನೋಡೋಕೆ ಆಗ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ರೋಹಿತ್.. ರೋಹಿತ್.. ಘೋಷಣೆ
ಹಾರ್ದಿಕ್ ಪಾಂಡ್ಯ ಮೇಲೆ ಗರಂ ಆಗಿರುವ ಹಿಟ್ಮ್ಯಾನ್ ಫ್ಯಾನ್ಸ್ ಟಾಸ್ ಅವಧಿಯಲ್ಲಿ ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದಾರೆ. ಗುಜರಾತ್ ವಿರುದ್ಧ ಟಾಸ್ ಅವಧಿಯಲ್ಲಿ ಹಾರ್ದಿಕ್ ಮಾತನಾಡುವಾಗ ರೋಹಿತ್... ರೋಹಿತ್.. ರೋಹಿತ್ ಎಂದು ಸ್ಟೇಡಿಯಂ ರೂಫ್ ಕಿತ್ತು ಹೋಗುವಂತೆ ಘೋಷಣೆ ಕೂಗಿದ್ದಾರೆ. ರೋಹಿತ್ ಶರ್ಮಾ ಸಪ್ಪಗಿರುವ ಮತ್ತು ಘೋಷಣೆ ಕೂಗಿರುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ತಮ್ಮ ನಾಯಕನನ್ನು ಕಂಡು ಅಭಿಮಾನಿಗಳು ಭಾವುಕರಾಗಿದ್ದಾರೆ.
ರೋಹಿತ್ ಕೆಳಗಿಳಿಸಿ ಹಾರ್ದಿಕ್ ಕ್ಯಾಪ್ಟನ್
ಐಪಿಎಲ್ 2024ರ ಮಿನಿ ಹರಾಜಿಗೂ ಮುನ್ನ ನಡೆದ ಟ್ರೇಡಿಂಗ್ ವಿಂಡೋದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ 15 ಕೋಟಿಗೆ ತಂಡಕ್ಕೆ ಕರೆಸಿಕೊಂಡಿತು. ಆದರೆ ಹರಾಜು ನಡೆದ ಕೆಲವೇ ದಿನಗಳಲ್ಲಿ 5 ಟ್ರೋಫಿ ಗೆದ್ದುಕೊಟ್ಟ ರೋಹಿತ್ ಅವರನ್ನು ಕೆಳಗಿಳಿಸಿ ಏಕಾಏಕಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಯಿತು. ಇದು ಶರ್ಮಾ ಅಭಿಮಾನಿಗಳಿಗೆ ಕೋಪ ತರಿಸಿತು. ಅಲ್ಲದೆ, ಮುಂಬೈ ಇಂಡಿಯನ್ಸ್ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅನ್ಫಾಲೋ ಮಾಡಿದ್ದರು.
ಮೊದಲ ಬಾರಿಗೆ ಮೌನ ಮುರಿದ ಹಾರ್ದಿಕ್ ಪಾಂಡ್ಯ
ಮುಂಬೈಕ್ಕೆ ಮರಳಿದ ಕುರಿತು ನಾಯಕ ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಎಂಐಗೆ ಮರಳಿದ್ದು ಖುಷಿ ನೀಡುತ್ತಿದೆ. ನಾನು ಹುಟ್ಟಿ ಬೆಳೆದಿದ್ದು ಗುಜರಾತ್ನಲ್ಲಿ. ನನಗಿಲ್ಲಿ ಸಾಕಷ್ಟು ಯಶಸ್ಸು ದೊರೆತಿದೆ. ಅಭಿಮಾನಿಗಳಿಗೆ ಮತ್ತು ಗುಜರಾತ್ಗೆ ನಾನು ಕೃತಜ್ಞನಾಗಿರುತ್ತೇನೆ. ಆದರೆ, ನನ್ನ ಕ್ರಿಕೆಟ್ನಲ್ಲಿ ಜನ್ಮ ಪಡೆದಿದ್ದು ಮುಂಬೈನಲ್ಲಿ. ಹಾಗಾಗಿ ಮರಳಿ ಸೇರಿದ್ದು ನಿಜವಾಗಿಯೂ ಖುಷಿಕೊಡುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.