ಕ್ಯಾಮರೂನ್ ಗ್ರೀನ್ ಇನ್, ನಾಲ್ವರು ಔಟ್; 3ನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ಯಾಮರೂನ್ ಗ್ರೀನ್ ಇನ್, ನಾಲ್ವರು ಔಟ್; 3ನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಕ್ಯಾಮರೂನ್ ಗ್ರೀನ್ ಇನ್, ನಾಲ್ವರು ಔಟ್; 3ನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಜೂನ್ 11 ರಿಂದ 15ರ ತನಕ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ.

ಕ್ಯಾಮರೂನ್ ಗ್ರೀನ್ ಇನ್, ನಾಲ್ವರು ಔಟ್; 3ನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ಕ್ಯಾಮರೂನ್ ಗ್ರೀನ್ ಇನ್, ನಾಲ್ವರು ಔಟ್; 3ನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ 2025 ಫೈನಲ್​​ ಪಂದ್ಯಕ್ಕೆ ಆಸ್ಟ್ರೇಲಿಯಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಜೊತೆಗೆ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್​​ ಸರಣಿಗೂ ಇದೇ ತಂಡವನ್ನು ಪ್ರಕಟಿಸಲಾಗಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ ನಡುವಿನ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ. ಜೂನ್ 11 ರಿಂದ 15ರ ತನಕ ಐತಿಹಾಸಿಕ ಲಾರ್ಡ್ಸ್​​​ನಲ್ಲಿ ಐತಿಹಾಸಿಕ ಪಂದ್ಯ ಜರುಗಲಿದೆ. ಬಲಿಷ್ಠ ತಂಡವನ್ನೇ ಪ್ರಕಟಿಸಿರುವ ಆಸೀಸ್​, ಸತತ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಹಿಂದಿನ ಶ್ರೀಲಂಕಾ ಪ್ರವಾಸ ತಪ್ಪಿಸಿಕೊಂಡಿದ್ದ ಜೋಶ್ ಹೇಜಲ್​​ವುಡ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ತಂಡಕ್ಕೆ ಮರಳಿದ್ದಾರೆ. ಗಾಯದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದ ಕ್ಯಾಮರೂನ್ ಗ್ರೀನ್ ಕೂಡ ತಂಡಕ್ಕೆ ಮರಳಿದ್ದಾರೆ. ಭಾರತ ವಿರುದ್ಧ ಚೊಚ್ಚಲ ಪಂದ್ಯವಾಡಿದ ಸ್ಯಾಮ್ ಕಾನ್ಸ್ಟಾಸ್​ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಾಥನ್ ಮೆಕ್‌ಸ್ವೀನಿ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಶ್ರೀಲಂಕಾ ಪ್ರವಾಸದ ಭಾಗವಾಗಿದ್ದ ಟಾಡ್ ಮರ್ಫಿ, ಸೀನ್ ಅಬಾಟ್ ಮತ್ತು ಕೂಪರ್ ಕಾನೊಲಿ ಅವರನ್ನೂ ತಂಡದಿಂದ ಹೊರಗಿಡಲಾಗಿದೆ. ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ ಮತ್ತು ನಾಥನ್ ಲಿಯಾನ್ ಆಸ್ಟ್ರೇಲಿಯಾ ಟೆಸ್ಟ್ ತಂಡದ ಪ್ರಮುಖ ಆಟಗಾರರಾಗಿ ಮುಂದುವರಿಯಲಿದ್ದಾರೆ. ಇದೇ ತಂಡವು ಜೂನ್ 26 ರಿಂದ 3 ಪಂದ್ಯಗಳ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. 2023ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ್ದ ಆಸೀಸ್ ಡಬ್ಲ್ಯುಟಿಸಿ ಚಾಂಪಿಯನ್ ಆಗಿತ್ತು.

ಆಸ್ಟ್ರೇಲಿಯಾ ತಂಡವು ಸಮತೋಲನದಿಂದ ಕೂಡಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಡಬ್ಲ್ಯುಟಿಸಿ ಪ್ರಶಸ್ತಿ ಉಳಿಸಿಕೊಳ್ಳುವ ಕುರಿತು ಆಶಾವಾದ ವ್ಯಕ್ತಪಡಿಸಿದ್ದಾರೆ. ನಾವು ಅದೃಷ್ಟವಂತರು. ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್ ಮತ್ತು ಕ್ಯಾಮರಾನ್ ಗ್ರೀನ್ ತಂಡಕ್ಕೆ ಮರಳಿದ್ದಾರೆ. ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸಜ್ಜಾಗಿದ್ದೇವೆ ಎಂದು ಜಾರ್ಜ್ ಬೈಲಿ ಹೇಳಿಕೆ ನೀಡಿದ್ದಾರೆ.

ಡಬ್ಲ್ಯುಟಿಸಿ ಫೈನಲ್ ಮತ್ತು ವೆಸ್ಟ್ ಇಂಡೀಸ್ ಸರಣಿಗೆ ಆಸ್ಟ್ರೇಲಿಯಾ ತಂಡ

ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕೇರಿ, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್​ವುಡ್, ಟ್ರಾವಿಸ್ ಹೆಡ್, ಜೋಸ್ ಇಂಗ್ಲಿಸ್, ಉಸ್ಮಾನ್ ಖವಾಜ, ಸ್ಯಾಮ್ ಕೊನ್ಸ್ಟಾಸ್, ಮ್ಯಾಥ್ಯೂ ಕುನ್ಹೆಮನ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್​ಸ್ಟರ್. ಮೀಸಲು ಆಟಗಾರ: ಬ್ರೆಂಡನ್ ಡಗೆಟ್.

ನ್ಯೂಜಿಲೆಂಡ್, ಆಸ್ಟ್ರೇಲಿಯಾ ಚಾಂಪಿಯನ್

2019-2021ರ ಆವೃತ್ತಿ ಮತ್ತು 2021-2023ರ ಎರಡೂ ಆವೃತ್ತಿಗಳಲ್ಲಿ ಭಾರತ ತಂಡ ಫೈನಲ್​ಗೆ ಪ್ರವೇಶಿಸಿತ್ತು. ಆದರೆ ಎರಡೂ ಬಾರಿಯೂ ರನ್ನರ್​​ಅಪ್ ಆಯಿತು. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಚಾಂಪಿಯನ್ ಆಗಿತ್ತು. ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿತ್ತು. ಇದೀಗ ಪ್ರಶಸ್ತಿ ಉಳಿಸಿಕೊಳ್ಳಲು ಆಸೀಸ್ ಪ್ರಯತ್ನಿಸುತ್ತಿದೆ.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.