ಗಣಿತದ ಅಂಕಿ-ಅಂಶಗಳ ಪ್ರಕಾರ ಇನ್ನೂ ಇದೆ ಸಿಎಸ್ಕೆಗೆ ಪ್ಲೇಆಫ್ ಅವಕಾಶ; ಒಂದು ಸೋತರೂ ಮನೆ ಕಡೆ ಪಯಣ!
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2025ರ ಪ್ಲೇಆಫ್ ತಲುಪಲು ಸಾಧ್ಯವೇ? ಅದಕ್ಕೆ ಉತ್ತರ ಹೌದು. ಅದು ಹೇಗೆ ಎಂಬ ಉತ್ತರ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ‘ಚೆಪಾಕ್ ಕೋಟೆ’ ಕುಸಿದು ಬಿದ್ದ ಹಿನ್ನೆಲೆ ಎಂಎಸ್ ಧೋನಿ ನಾಯಕತ್ವದ ತಂಡ ಪ್ಲೇಆಫ್ ಪ್ರವೇಶಿಸಲು ಹೆಣಗಾಡುವಂತ ಪರಿಸ್ಥಿತಿಗೆ ಸಿಲುಕಿದೆ. ಪ್ಲೇಆಫ್ ತಲುಪುವ ಸಿಎಸ್‌ಕೆ ಭರವಸೆಗಳು ಹುಸಿಯಾಗಿದ್ದು, ಪ್ರಸಕ್ತ ಋತುವಿನಲ್ಲಿ ಏಳನೇ ಸೋಲನ್ನು ಅನುಭವಿಸಿದೆ. 9 ಪಂದ್ಯಗಳ ನಂತರ ತಂಡವು ಕೇವಲ ನಾಲ್ಕು ಅಂಕ ಗಳಿಸಲು ಸಾಧ್ಯವಾಗಿದೆ. ತಂಡಕ್ಕೆ ಇನ್ನೂ ಐದು ಪಂದ್ಯಗಳು ಉಳಿದಿವೆ. 5 ಪಂದ್ಯಗಳನ್ನು ಗೆದ್ದ ನಂತರ ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯಲು ಸಾಧ್ಯವೇ? ಅಂಕ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿರುವ ಐದು ಬಾರಿಯ ಚಾಂಪಿಯನ್ ತಂಡ ಪ್ಲೇಆಫ್ ಪ್ರವೇಶಿಸಲು ಏನು ಮಾಡಬೇಕು? ಇಲ್ಲಿದೆ ವಿವರ.
ಚೆನ್ನೈ ಆಡಿದ 9 ಪಂದ್ಯಗಳಲ್ಲಿ 7ರಲ್ಲಿ ಸೋತಿದ್ದರೂ ಪ್ಲೇ ಆಫ್ ರೇಸ್ನಿಂದ ಇನ್ನೂ ಸಂಪೂರ್ಣವಾಗಿ ಹೊರಗುಳಿದಿಲ್ಲ. ಇದಕ್ಕೆ ತಂಡವು ಕಠಿಣ ಪರಿಶ್ರಮ ಹಾಕಬೇಕು. ಗಣಿತದ ಪ್ರಕಾರ, ತಂಡವು ಪ್ಲೇಆಫ್ ರೇಸ್ನಲ್ಲಿ ಇನ್ನೂ ಜೀವಂತವಾಗಿದೆ. ಏಕೆಂದರೆ ತಂಡವು ಉಳಿದ 5 ಪಂದ್ಯಗಳನ್ನು ಗೆದ್ದು 14 ಅಂಕ ಗಳಿಸಲು ಮತ್ತು ಪ್ಲೇಆಫ್ ತಲುಪಲು ಇನ್ನೂ ಸಾಧ್ಯವಿದೆ. ಕಳೆದ ಬಾರಿಯೂ ಆರ್ಸಿಬಿ ಪರಿಸ್ಥಿತಿಯೂ ಹೀಗೆ ಇತ್ತು. ಅಂದು ಆರ್ಸಿಬಿ ಕೊನೆಯ ಆರು ಪಂದ್ಯಗಳನ್ನೂ ಸತತವಾಗಿ ಗೆದ್ದು ಪ್ಲೇಆಫ್ಗೆ ಲಗ್ಗೆ ಇಟ್ಟಿತ್ತು. ಆದರೆ ಸಿಎಸ್‌ಕೆ ತಂಡದ ಪ್ರಸ್ತುತ ಪ್ರದರ್ಶನವನ್ನು ಗಮನಿಸಿದರೆ, ಈ ಕಾರ್ಯವು ಅಸಾಧ್ಯವೆಂದು ತೋರುತ್ತದೆ.
ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳುವುದೂ ಮುಖ್ಯ
ಚೆನ್ನೈ ಉಳಿದ 5 ಪಂದ್ಯ ಗೆದ್ದರೆ ಸಾಲದು. ನೆಟ್ರನ್ರೇಟ್ ಕೂಡ ಹೆಚ್ಚಿಸಿಕೊಳ್ಳಬೇಕು. ಸದ್ಯ -1.302 ನೆಟ್ ರನ್ ರೇಟ್ ಇದೆ. ಇದು ತುಂಬಾ ಕೆಟ್ಟದ್ದು ಎಂದರ್ಥ. ಉಳಿದ ಐದೂ ಪಂದ್ಯಗಳನ್ನು ಗೆದ್ದು 14 ಅಂಕ ಪಡೆಯುವುದರ ಜೊತೆಗೆ ಮೈನಸ್ ನೆಟ್ ರನ್ ರೇಟ್ ಅನ್ನು ಪ್ಲಸ್ ರನ್ ರೇಟ್ ಮಾಡಿಕೊಳ್ಳಬೇಕು. ಇದು ಸಾಲದು ಎಂಬಂತೆ ಉಳಿದ ತಂಡಗಳ ಫಲಿತಾಂಶ ಮೇಲೆಯೂ ಗಮನ ಹರಿಸಬೇಕಾಗುತ್ತದೆ. ಅಗ್ರ 4 ತಂಡಗಳಲ್ಲಿ ಯಾವುದಾದರೂ 14 ಅಥವಾ ಅದಕ್ಕಿಂತ ಕಡಿಮೆ ಅಂಕಗಳನ್ನು ಹೊಂದಿದ್ದರೆ, ಚೆನ್ನೈ ಅಗ್ರ 4 ರಲ್ಲಿ ಉಳಿಯುವ ಅವಕಾಶವನ್ನು ಹೊಂದಿರುತ್ತದೆ.
ಕಳೆದ ಆವೃತ್ತಿಯನ್ನು ಗಮನಿಸಿದರೆ, ಆರ್ಸಿಬಿ 14 ಅಂಕ ಆಧಾರದ ಮೇಲೆ ಪ್ಲೇಆಫ್ಗೆ ಲಗ್ಗೆ ಇಟ್ಟಿತ್ತು. 2019ರ ಋತುವಿನಲ್ಲೂ ಅರ್ಹತೆಗೆ 12 ಅಂಕ ನಿಗದಿಪಡಿಸಲಾಗಿತ್ತು. ಅಂದು 8 ತಂಡಗಳಿದ್ದವು. ಈಗ ತಂಡಗಳಿರುವ ಕಾರಣ ಪ್ಲೇಆಫ್ ಪ್ರವೇಶಿಸಲು 14 ಅಂಕ ಪಡೆಯುವುದು ಖಚಿತವಾಗಿರಯತ್ತದೆ. ಈಗಾಗಲೇ ಮೂರು ತಂಡಗಳು 12 ಅಂಕ ಪಡೆದಿವೆ. ಆದರೆ 3 ಇತರ ತಂಡಗಳು ಸಹ 10-10 ಅಂಕಗಳನ್ನು ಹೊಂದಿವೆ. ಅಂತಹ ಪರಿಸ್ಥಿತಿಯಲ್ಲಿ, 12 ಅಂಕಗಳೊಂದಿಗೆ ಪ್ಲೇಆಫ್ ತಲುಪಲು ಸಾಧ್ಯವಿಲ್ಲ. ಚೆನ್ನೈ ಮತ್ತೊಂದು ಸೋಲನುಭವಿಸಿದರೆ ಲೀಗ್ ಹಂತದಲ್ಲೇ ಕೊನೆಗೊಳಿಸಲಿದೆ.
ಶ್ರೇಣಿ | ತಂಡ | ಪಂದ್ಯ | ಗೆಲುವು | ಸೋಲು | ಎನ್ಆರ್ಆರ್ | ಅಂಕ |
---|---|---|---|---|---|---|
1 | ಗುಜರಾತ್ | 8 | 6 | 2 | 1.104 | 12 |
2 | ಡೆಲ್ಲಿ | 8 | 6 | 2 | 0.657 | 12 |
3 | ಆರ್ಸಿಬಿ | 9 | 6 | 3 | 0.482 | 12 |
4 | ಮುಂಬೈ | 9 | 5 | 4 | 0.67 | 10 |
5 | ಪಂಜಾಬ್ | 8 | 5 | 3 | 0.177 | 10 |
6 | ಲಕ್ನೋ | 9 | 5 | 4 | -0.054 | 10 |
7 | ಕೆಕೆಆರ್ | 8 | 3 | 5 | 0.212 | 8 |
8 | ಎಸ್‌ಆರ್‌ಹೆಚ್ | 9 | 3 | 6 | -1.103 | 6 |
9 | ಆರ್ಆರ್ | 9 | 2 | 7 | -0.625 | 4 |
10 | ಸಿಎಸ್‌ಕೆ | 9 | 2 | 7 | -1.302 | 4 |