ಐಪಿಎಲ್ ನಾಯಕತ್ವ ತೊರೆಯುತ್ತಾರಾ ಎಂಎಸ್ ಧೋನಿ; ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ತಲೆಗೆ ಹುಳ ಬಿಟ್ಟ ಸಿಎಸ್ಕೆ ನಾಯಕ
MS Dhoni : ಟೂರ್ನಿ ಆರಂಭಕ್ಕೂ ಮುನ್ನ ಭಾರತ ತಂಡದ ಮಾಜಿ ನಾಯಕ ಮತ್ತು ಹಾಲಿ ಸಿಎಸ್ಕೆ ನಾಯಕ ಎಂಎಸ್ ಧೋನಿ, ಈ ಐಪಿಎಲ್ನಲ್ಲಿ ಹೊಸ ಪಾತ್ರವನ್ನು ವಹಿಸಿಕೊಳ್ಳುವ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2024) 2024ರ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರು ಸಾಮಾಜಿಕ ಜಾಲತಾಣದಲ್ಲಿ ರಹಸ್ಯ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಅಭಿಮಾನಿಗಳ ಗೊಂದಲ ಹೆಚ್ಚಿಸಿದ್ದಲ್ಲದೆ, ಬೆರಗುಗೊಳಿಸಿದ್ದಾರೆ. ಸೋಷಿಯಲ್ ಮೀಡಿಯಾದಿಂದ ಸದಾ ದೂರ ಇರುವ ಧೋನಿ, ಅಪರೂಪಕ್ಕೆ ಪೋಸ್ಟ್ ಮಾಡುತ್ತಾರೆ. ಇದೀಗ ಫೇಸ್‌ಬುಕ್‌ನಲ್ಲಿ ರಹಸ್ಯ ಪೋಸ್ಟ್ ಹಾಕಿದ್ದು ಸಂಚಲನ ಸೃಷ್ಟಿಸಿದ್ದಾರೆ.
ಮಾರ್ಚ್ 22ರಿಂದ ಐಪಿಎಲ್ ಶುರುವಾಗಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಚೆನ್ನೈನ ಎಂ ಚಿದ್ರಂಬರಂ ಸ್ಟೇಡಿಯಂ (ಚೆಪಾಕ್) ಈ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಮತ್ತೊಮ್ಮೆ ಸಿಎಸ್ಕೆ ತಂಡವನ್ನು ಮುನ್ನಡೆಸಲು ಸಜ್ಜಾಗಿರುವ ಧೋನಿ, ಆರನೇ ಬಾರಿಗೆ ಟ್ರೋಫಿ ಗೆದ್ದುಕೊಡುವ ಗುರಿ ಹೊಂದಿದ್ದಾರೆ. ಇದರ ನಡುವೆ ಅವರ ಪೋಸ್ಟ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ.
ಟೂರ್ನಿ ಆರಂಭಕ್ಕೂ ಮುನ್ನ ಭಾರತ ತಂಡದ ಮಾಜಿ ನಾಯಕ ಮತ್ತು ಹಾಲಿ ಸಿಎಸ್ಕೆ ನಾಯಕ ಎಂಎಸ್ ಧೋನಿ, ಈ ಐಪಿಎಲ್ನಲ್ಲಿ ಹೊಸ ಪಾತ್ರವನ್ನು ವಹಿಸಿಕೊಳ್ಳುವ ಸುಳಿವು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅಭಿಮಾನಿಗಳು ನಾಯಕನ ಸ್ಥಾನ ತ್ಯಜಿಸುತ್ತಾರಾ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಮಾಡಿರುವ ಆಶ್ಚರ್ಯಕರ ಪೋಸ್ಟ್ಗೆ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ಹುಟ್ಟಿಕೊಂಡಿವೆ. ಅಂತಹ ಪಾತ್ರ ಏನಿರಬಹುದು ಎಂದು ಫ್ಯಾನ್ಸ್ ತಲೆ ಕೆಡಿಸಿಕೊಳ್ತಿದ್ದಾರೆ.
ಎಂಎಸ್ ಧೋನಿಯ ಪೋಸ್ಟ್ನಲ್ಲಿ ಏನಿದೆ?
ಪೋಸ್ಟ್ನಲ್ಲಿ ಅವರು ಹೆಚ್ಚೇನು ಬರೆದಿಲ್ಲ. ಹೀಗಿದೆ ನೋಡಿ. "ಹೊಸ ಸೀಸನ್ ಮತ್ತು ಹೊಸ 'ಪಾತ್ರ'ಕ್ಕಾಗಿ ಕಾಯುತ್ತಿದ್ದೇನೆ. ಕಾಯಿರಿ," ಎಂದು ಧೋನಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಕೆಲವರು ಈ ಪೋಸ್ಟ್ಗೆ ಬೆಸ್ಟ್ ಆಫ್ ಲಕ್ ಎಂದು ಶುಭ ಕೋರಿದ್ದರೆ, ಐಪಿಎಲ್ಗೆ ನಿವೃತ್ತಿಯಾಗಿ ಸಿಎಸ್ಕೆ ತಂಡದಲ್ಲೇ ಹೊಸ ಪಾತ್ರವನ್ನು ನಿಭಾಯಿಸಬಹುದು ಎಂದು ಕೆಲವರು ಅಂದಾಜಿಸಿದ್ದಾರೆ.
2008ರ ಐಪಿಎಲ್ನ ಮೊದಲ ಋತುವಿನಿಂದ ಧೋನಿ ಸಿಎಸ್ಕೆ ಭಾಗವಾಗಿದ್ದಾರೆ. ಆದರೆ ಮಧ್ಯದಲ್ಲಿ ಎರಡು ವರ್ಷಗಳ ಕಾಲ (2016 ಮತ್ತು 2017ರಲ್ಲಿ) ಸಿಎಸ್ಕೆ ಬ್ಯಾನ್ ಆಗಿತ್ತು. ಆಗ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ಪರ ಧೋನಿ ಆಡಿದ್ದರು. ಉದ್ಘಾಟನಾ ಋತುವಿನ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದ ಧೋನಿ, ಚೆನ್ನೈ ಪರ ಆಡಿದ 14 ಆವೃತ್ತಿಗಳಲ್ಲೂ ನಾಯಕರಾಗಿದ್ದಾರೆ.
2022ರ ಆವೃತ್ತಿಗೂ ಮುನ್ನ ರವೀಂದ್ರ ಜಡೇಜಾಗೆ ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದರು. ಆದರೆ ಅವರು ಹೊಸ ಪರಿವರ್ತನೆಗೆ ಮುನ್ನಡಿ ಹಾಕಲು ವಿಫಲರಾದರು. ಬಳಿಕ ಟೂರ್ನಿಯ ಮಧ್ಯದಲ್ಲೇ ಧೋನಿ ನಾಯಕನಾಗಿ ಮತ್ತೆ ಮರಳಿದರು. 2023ರಲ್ಲಿ ಪೂರ್ಣ ಋತುವಿನಲ್ಲಿ ತಂಡವನ್ನು ಮುನ್ನಡೆಸಿದ ಧೋನಿ, ಚೆನ್ನೈ ಮೂಲದ ಫ್ರಾಂಚೈಸಿಗೆ 5ನೇ ಟ್ರೋಫಿ ಗೆದ್ದುಕೊಡಲು ಪ್ರಮುಖ ಕಾರಣರಾದರು.
2023ರ ಐಪಿಎಲ್ ನಂತರ ಧೋನಿ ವಿದಾಯ ಹೇಳುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಸಿಎಸ್ಕೆ ಪ್ರಶಸ್ತಿ ಗೆಲುವಿನ ನಂತರ, ಧೋನಿ 2024ರಲ್ಲೂ ಆಡುವ ಸುಳಿವು ನೀಡಿದ್ದರು. ಅಭಿಮಾನಿಗಳು ತಮ್ಮ ಮೇಲೆ ಧಾರೆ ಎರೆದ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಳೆದ ವರ್ಷ ಮೊಣಕಾಲಿನ ಸಮಸ್ಯೆಯೊಂದಿಗೆ ಹೋರಾಡಿದ್ದ ಧೋನಿ ಟೂರ್ನಿಯ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಫಿಟ್ ಆಗಿದ್ದಾರೆ.
ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಪತ್ನಿ ಸಾಕ್ಷಿಯೊಂದಿಗೆ ಧೋನಿ ಕಾಣಿಸಿಕೊಂಡಿದ್ದರು. ಡ್ವೇನ್ ಬ್ರಾವೋ ಅವರೊಂದಿಗೆ ದಾಂಡಿಯಾ ಕೂಡ ಆಡಿದ್ದರು. ಬಾಲಿವುಡ್ ನಟರೊಂದಿಗೆ ಕಾಣಿಸಿಕೊಂಡ ಮಾಹಿ, ವಿಭಿನ್ನ ಶೈಲಿಯ ಉಡುಪಿನಲ್ಲೂ ಮಿಂಚಿದರು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.