ಕೇಸರಿ ಶಾಲು ಹೊದಿಸಿ ಭವ್ಯ ಸ್ವಾಗತ ಕೋರಿದ ಬೆನ್ನಲ್ಲೇ ಬಾಬರ್ ಪೋಸ್ಟ್; ಭಾರತದ ಆತಿಥ್ಯಕ್ಕೆ ಮಾರುಹೋದ ಪಾಕ್ ಕ್ರಿಕೆಟರ್ಸ್
Pakistan Cricket Team: ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕ ಭವ್ಯ ಸ್ವಾಗತವನ್ನು ಕಂಡು ಬಾಬರ್ ಅಜಮ್ ಪಡೆ, ಫಿದಾ ಆಗಿದ್ದಾರೆ. ಪಾಕ್ ಆಟಗಾರರು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಶ್ಲಾಘಿಸಿದ್ದಾರೆ
ಭಾರತದಲ್ಲಿ ಅಕ್ಟೋಬರ್ 5ರಿಂದ ಪ್ರಾರಂಭವಾಗುವ ಕ್ರಿಕೆಟ್ ಜಾತ್ರೆ ಏಕದಿನ ವಿಶ್ವಕಪ್ ಟೂರ್ನಿಗೆ (ICC ODI World Cup 2023) ಪಾಕಿಸ್ತಾನ ಕ್ರಿಕೆಟ್ ತಂಡ (Pakistan Cricket Team) ಹೈದರಾಬಾದ್ಗೆ ಬಂದಿಳಿದಿದ್ದು, ತಂಡಕ್ಕೆ ಭವ್ಯವಾದ ಸ್ವಾಗತ ಸಿಕ್ಕಿದೆ. ಮುಂದಿನ 15 ದಿನಗಳ ಕಾಲ ಹೈದರಾಬಾದ್ನಲ್ಲೇ (Hyderbad) ಉಳಿಯಲಿರುವ ಪಾಕಿಸ್ತಾನ ತಂಡದ ಆಟಗಾರರು, ಭಾರತದ ಭವ್ಯ ಸ್ವಾಗತಕ್ಕೆ ಮಾರು ಹೋಗಿದ್ದಾರೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Rajiv Gandhi International Airport) ಸಿಕ್ಕ ಭವ್ಯ ಸ್ವಾಗತವನ್ನು ಕಂಡು ಬಾಬರ್ ಅಜಮ್ (Babar Azam) ಪಡೆ, ಫಿದಾ ಆಗಿದ್ದಾರೆ. ಮೂಕ ವಿಸ್ಮಿತರಾಗಿರುವ ಪಾಕ್ ಆಟಗಾರರು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಶ್ಲಾಘಿಸಿದ್ದಾರೆ. ಅದರಲ್ಲೂ ಪಾಕ್ ತಂಡದ ನಾಯಕ ಬಾಬರ್ ಅಜಮ್, ಕೊಂಡಾಡಿದ್ದಾರೆ.
ಬಾಬರ್, ಶಾಹೀನ್, ರಿಜ್ವಾನ್ ಪೋಸ್ಟ್
ನಾಯಕ ಬಾಬರ್ ಅಜಮ್ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು, ಹೈದರಾಬಾದ್‌ನಲ್ಲಿ ನಮಗೆ ಪ್ರೀತಿ ಮತ್ತು ಅಪಾರ ಬೆಂಬಲ ಮಂತ್ರಮುಗ್ಧರನ್ನಾಗಿಸಿದೆ ಎಂದು ಬರೆದಿದ್ದಾರೆ. ಶಾಹೀನ್ ಶಾ ಅಫ್ರಿದಿ ಕೂಡ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು, ಅದ್ಭುತ ಸ್ವಾಗತ ಸಿಕ್ಕಿದೆ ಎಂದು ಬರೆದಿದ್ದಾರೆ. ಮೊಹಮ್ಮದ್ ರಿಜ್ವಾನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಅದ್ಭುತ ಸ್ವಾಗತ ಸಿಕ್ಕಿದೆ. ಎಲ್ಲವೂ ಅದ್ಭುತವಾಗಿತ್ತು. ಮುಂದಿನ 1.5 ತಿಂಗಳಿಗೆ ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ಹಾಗೆಯೇ ಹಲವು ಆಟಗಾರರು ಭಾರತಕ್ಕೆ ಧನ್ಯವಾದ ಹೇಳಿದ್ದಾರೆ.
ಕೇಸರಿ ಬಣ್ಣದ ಶಾಲು ಹೊದಿಸಿ ವೆಲ್ಕಮ್
ಭಾರತಕ್ಕೆ ಬಂದಿಳಿದ ಪಾಕಿಸ್ತಾನ ವಿಶ್ವಕಪ್ ತಂಡದ ಆಟಗಾರರನ್ನು ವಿಮಾನ ನಿಲ್ದಾಣ ಮತ್ತು ತಂಡದ ಹೋಟೆಲ್‌ನಲ್ಲಿ ಭಾರತೀಯ ಶೈಲಿಯಲ್ಲಿ ಸ್ವಾಗತ ಮಾಡಿಕೊಳ್ಳಲಾಯಿತು. ಹೋಟೆಲ್‌ನಲ್ಲಿ ಕೇಸರಿ ಶಾಲು ಬಣ್ಣದ ಶಾಲು ಹೊದಿಸಿ ಸ್ವಾಗತ ಮಾಡಿಕೊಳ್ಳಲಾಯಿತು. ಆಟಗಾರರು ಕೇಸರಿ ಶಾಲು ಧರಿಸಿರುವ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.
ಬಿಗಿ ಭದ್ರತೆಯ ನಡುವೆ ಭಾರತಕ್ಕೆ ಬಂದಿಳಿದ ಪಾಕ್
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಪದಾಧಿಕಾರಿಗಳು ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ ತಂಡಕ್ಕೆ ಸ್ವಾಗತ ಕೋರಲಾಯಿತು. ಅಲ್ಲಿಂದ ಪಾಕಿಸ್ತಾನ ತಂಡವನ್ನು ಬಂಜಾರಾ ಹಿಲ್ಸ್‌ನ ಪಾರ್ಕ್ ಹಯಾತ್ ಹೋಟೆಲ್‌ಗೆ ಪೊಲೀಸರ ಬಿಗಿ ಭದ್ರತೆಯ ನಡುವೆ ಕರೆದುಕೊಂಡು ಹೋಗಲಾಯಿತು.
2016ರ ನಂತರ ಭಾರತಕ್ಕೆ ಪ್ರಯಾಣ
ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ 2016ರ ನಂತರ ಇದೇ ಮೊದಲ ಬಾರಿಗೆ ಕಾಲಿಟ್ಟಿದೆ. 2016ರ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಪಾಕ್, ಭಾರತಕ್ಕೆ ಆಗಮಿಸಿತ್ತು. ಉಭಯ ದೇಶಗಳ ನಡುವೆ 2012/13ರಲ್ಲಿ ಕೊನೆ ದ್ವಿಪಕ್ಷೀಯ ಸರಣಿ ನಡೆದಿದೆ. ಆ ಬಳಿಕ ಏಷ್ಯಾಕಪ್ ಮತ್ತು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಮೊಹಮ್ಮದ್ ನವಾಜ್ ಬಿಟ್ಟರೆ, ಉಳಿದ ಪಾಕಿಸ್ತಾನ ತಂಡದ ಆಟಗಾರರು ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ.
ಸೆ. 29ರಂದು ಪಾಕ್-ಕಿವೀಸ್ ಅಭ್ಯಾಸ ಪಂದ್ಯ
ಅಕ್ಟೋಬರ್ 5ರಿಂದ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಅದಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿವೆ. ಅದರಂತೆ ಸೆಪ್ಟೆಂಬರ್ 29ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಅಭ್ಯಾಸ ಪಂದ್ಯವನ್ನಾಡಲಿವೆ. ಆದರೆ ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಮುಂದಿನ 15 ದಿನಗಳ ಕಾಲ ಪಾಕಿಸ್ತಾನ ಹೈದರಾಬಾದ್ನಲ್ಲೇ ಇರಲಿದೆ.
ಏಕದಿನ ವಿಶ್ವಕಪ್ಗೆ ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಶಾಹೀನ್ ಶಾ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸೀಂ.