ಬಲಿಷ್ಠ ಆಸೀಸ್ ವಿರುದ್ಧ ಸೋಲು; ಭಾರತದ ಕಳಪೆ ಫೀಲ್ಡಿಂಗ್ ಬಗ್ಗೆ ನಾಯಕಿ ಹರ್ಮನ್ಪ್ರೀತ್ ಕೌರ್ ವಿಷಾದ
India Women vs Australia Women 1st ODI: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅತ್ಯಂತ ಕಳಪೆ ಫೀಲ್ಡಿಂಗ್ ನಡೆಸಿದ ಕಾರಣ ಸೋಲು ಕಾಣಬೇಕಾಯಿತು ಎಂದು ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಬೇಸರ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ವನಿತಾ ತಂಡ (ndia Women vs Australia Women 1st ODI), ಗೌರವಾನ್ವಿತ ಸ್ಕೋರ್ ಗಳಿಸಿತ್ತು. 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತ್ತು. ಆದರೆ ಪ್ರವಾಸಿ ತಂಡ 47 ಓವರ್ನಲ್ಲೇ ಜಯದ ನಗೆ ಬೀರಿತು. ಫೋಬೆ ಲಿಚ್‌ಫೀಲ್ಡ್ ಮತ್ತು ಎಲ್ಲಿಸ್ ಪೆರ್ರಿ ಅವರ 148 ರನ್ಗಳ ಪಾಲುದಾರಿಕೆ ಆಟದಿಂದ ಏಕದಿನ ಸರಣಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತು.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಯಾಸ್ತಿಕಾ ಭಾಟಿಯಾ (49), ಜೆಮಿಮಾ ರೋಡ್ರಿಗಸ್ (82) ಮತ್ತು ಪೂಜಾ ವಸ್ತ್ರಾಕರ್ (64*) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಭಾರತ 282 ರನ್ಗಳ ಮೊತ್ತ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, 46.3 ಓವರ್ಗಳಲ್ಲಿ ಗೆದ್ದು ಬೀಗಿತು. ಫೋಬೆ ಲಿಚ್‌ಫೀಲ್ಡ್ (78), ಎಲ್ಲಿಸ್ ಪೆರ್ರಿ (75), ತಹಿಲಾ ಮೆಗ್ರಾತ್ (68) ಅವರ ಅರ್ಧಶತಕದಿಂದ ಆಸೀಸ್ ಗೆದ್ದಿತು.
ಫೀಲ್ಡಿಂಗ್ ಬಗ್ಗೆ ಹರ್ಮನ್ ವಿಷಾದ
ಪಂದ್ಯದ ನಂತರ ಮಾತನಾಡಿದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur), ತಂಡದ ಕೆಟ್ಟ ಫೀಲ್ಡಿಂಗ್ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನಾವು ಸಮರ್ಥನೀಯ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾದೆವು. ಬೌಲರ್‌ಗಳೂ ಪಂದ್ಯದ ಗೆಲುವಿಗೆ ಶ್ರಮಿಸಿದರು. ಆದರೆ ಫೀಲ್ಡಿಂಗ್ ತೃಪ್ತಿಕೊಡಲಿಲ್ಲ. ಕೆಲವು ಕ್ಯಾಚ್ಗಳನ್ನು ಕೈ ಚೆಲ್ಲಲಾಯಿತು. ಕೆಟ್ಟ ಫೀಲ್ಡಿಂಗ್‌ನಿಂದ ಹೆಚ್ಚು ರನ್ ಕಾಣಿಕೆ ನೀಡಿದೆವು ಎಂದು ಬೇಸರ ಹೊರಹಾಕಿದ್ದಾರೆ.
ಒಂದು ವೇಳೆ ಕ್ಷೇತ್ರ ರಕ್ಷಣೆಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರೆ, ಪಂದ್ಯಕ್ಕೆ ದೊಡ್ಡ ತಿರುವು ಸಿಗುತ್ತಿತ್ತು. ನಮ್ಮ ಫೀಲ್ಡಿಂಗ್‌ನಿಂದ ನಾನು ಅತೃಪ್ತಿ ಹೊಂದಿದ್ದೇನೆ. ಅದೇ ಆಸ್ಟ್ರೇಲಿಯಾ ಅದ್ಭುತ ಫೀಲ್ಡಿಂಗ್ ನಡೆಸಿ ಸಾಕಷ್ಟು ರನ್ ಉಳಿಸಿತು. ಇದು ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದ ಹರ್ಮನ್, ಇಬ್ಬನಿಯೂ ಪಂದ್ಯದ ಮೇಲೆ ಪರಿಣಾಮ ಬೀರಿತು ಎಂದರು. ಅಲ್ಲದೆ, ನಾವು ಹೆಚ್ಚು ಆಕ್ರಮಣಕಾರಿ ಕ್ರಿಕೆಟ್ ಆಡಬೇಕು ಎಂದು ಸಹ ಆಟಗಾರ್ತಿಯರಿಗೆ ಸೂಚಿಸಿದ್ದಾರೆ.
‘ಪೂಜಾ ನಮ್ಮ ಬೆನ್ನೆಲುಬು’
ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಸ್ಪೋಟಕ ಅರ್ಧಶತಕ ಸಿಡಿಸಿದ ಪೂಜಾ ವಸ್ತ್ರಾಕರ್ ಅವರನ್ನು ನಾಯಕಿ ಹರ್ಮನ್ ಹಾಡಿ ಹೊಗಳಿದರು. ಬೌಲಿಂಗ್ನಲ್ಲೂ 1 ವಿಕೆಟ್ ಪಡೆದ ಪೂಜಾ ಗಮನಾರ್ಹ ಪ್ರದರ್ಶನ ತೋರಿದರು. ಪೂಜಾ ಅದ್ಭುತ ಆಡವಾಡಿದರು. ಕೆಳ ಕ್ರಮಾಂಕದಲ್ಲಿ ತಮ್ಮ ತಂಡದ ಬೆನ್ನಲುಬು ಎಂದರು. ಬ್ಯಾಟಿಂಗ್ನಲ್ಲಿ 46 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 62 ರನ್ ಸಿಡಿಸಿದರು. ಬೌಲಿಂಗ್ನಲ್ಲಿ 8 ಓವರ್ಗೆ 41 ರನ್ ನೀಡಿ 1 ವಿಕೆಟ್ ಪಡೆದರು.
‘ಸಹಜ ಆಟವನ್ನಾಡಿದ್ದೇವೆ’
ಇನ್ನು ಆಸೀಸ್ ನಾಯಕಿ ಅಲಿಸಾ ಹೀಲಿ ಮಾತನಾಡಿ, ದೊಡ್ಡ ಮೊತ್ತ ಬೆನ್ನಟ್ಟಿ ಗೆಲುವು ಸಾಧಿಸಿದ್ದು ತಂಡದ ಬಲವನ್ನು ಹೆಚ್ಚಿಸಿದೆ. ಭಾರತ ತಂಡವನ್ನು 250ರ ಆಸುಪಾಸಿನಲ್ಲಿ ಕಟ್ಟಿಹಾಕುವ ಲೆಕ್ಕಾಚಾರ ಹಾಕಿಕೊಂಡಿದ್ದೆವು. ಆದರೆ ಭಾರತ ಅದ್ಭುತ ಬ್ಯಾಟಿಂಗ್ ನಡೆಸಿ ಉತ್ತಮ ಮೊತ್ತವನ್ನು ಕಲೆ ಹಾಕಿತು. ಚೆಂಡು ಸ್ವಲ್ಪಮಟ್ಟಿಗೆ ಸ್ಕಿಡ್ ಕೂಡ ಆಗುತ್ತಿತ್ತು. ನಾವು ಬ್ಯಾಟ್‌ನೊಂದಿಗೆ ನಮ್ಮ ಸಹಜ ಆಟವನ್ನು ಆಡಿದ್ದೇವೆ ಎಂದು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ದೊಡ್ಡ ರನ್ ಮಾಡಿದ ಆಸೀಸ್
ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ಆಗಿದೆ. ಮೆಗ್ ಲ್ಯಾನಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಆಸ್ಟ್ರೇಲಿಯಾ ತಂಡವನ್ನು ಅಲಿಸ್ಸಾ ಹೀಲಿ ಮುನ್ನಡೆಸುತ್ತಿದ್ದಾರೆ. ಭಾರತದ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ್ದ ಆಸೀಸ್, ಏಕದಿನ ಪಂದ್ಯದಲ್ಲಿ ಗೆದ್ದು ಲಯಕ್ಕೆ ಮರಳಿದೆ. ಉಭಯ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ, ಡಿಸೆಂಬರ್ 30ರಂದು ನಡೆಯಲಿದೆ.