Rohit Sharma: ತಾನು ಟ್ರೋಫಿ ಸ್ವೀಕರಿಸದೆ ರಾಹುಲ್ಗೆ ಹಸ್ತಾಂತರಿಸಿದ ರೋಹಿತ್; ನಾಯಕನ ನಿಸ್ವಾರ್ಥ ಸೇವೆಗೆ ಭಾರಿ ಮೆಚ್ಚುಗೆ, VIDEO
Rohit Sharma - KL Rahul: ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯ ಮುಕ್ತಾಯದ ನಂತರ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾರ ನಡೆಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಆಸ್ಟ್ರೇಲಿಯಾ ಎದುರಿನ ಅಂತಿಮ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಸೋಲನುಭವಿಸಿತು. ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಜರುಗಿದ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 66 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಭಾರತ ವೈಟ್ವಾಶ್ ಗುರಿಗೆ ಕೊಳ್ಳಿ ಇಟ್ಟಿತು. ಅಂತಿಮ ಏಕದಿನದಲ್ಲಿ ಸೋತರೂ ಭಾರತ 2-1ರಲ್ಲಿ ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಪಂದ್ಯ ಮುಕ್ತಾಯದ ನಂತರ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾರ ನಡೆಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಸರಣಿ ಗೆದ್ದ ಭಾರತ ತಂಡದ ಪರ ಟ್ರೋಫಿಯನ್ನು ನಾಯಕ ರೋಹಿತ್ ಪಡೆಯಬೇಕಿತ್ತು. ಆದರೆ, ತಾನು ಟ್ರೋಫಿ ಪಡೆಯಲು ನಿರಾಕರಿಸಿದರು. ತಾನು ಟ್ರೋಫಿ ಪಡೆಯುವ ಬದಲಿಗೆ ಕೆಎಲ್ ರಾಹುಲ್ ಅವರಿಗೆ ಟ್ರೋಫಿ ತೆಗೆದುಕೊಳ್ಳುವಂತೆ ಸೂಚಿಸಿದರು. ಅದಕ್ಕೆ ಪ್ರಮುಖ ಕಾರಣ ಇದೆ ಎಂಬುದು ವಿಶೇಷ.
ಟ್ರೋಫಿ ರಾಹುಲ್ಗೆ ಹಸ್ತಾಂತರ, ಮೆಚ್ಚುಗೆ
ಇಂಡೋ-ಆಸೀಸ್ ಸರಣಿಗೆ ಮೊದಲ ಎರಡು ಪಂದ್ಯಗಳಿಗೆ ನಾಯಕ ರೋಹಿತ್ ಶರ್ಮಾ ಸೇರಿ ನಾಲ್ವರಿಗೆ ರೆಸ್ಟ್ ನೀಡಲಾಗಿತ್ತು. ಮೂರನೇ ಪಂದ್ಯಕ್ಕೆ ತಂಡಕ್ಕೆ ಮರಳಿದರು. ಆದರೆ ರೋಹಿತ್ ಅಲಭ್ಯತೆಯಲ್ಲಿ ಹಂಗಾಮಿ ನಾಯಕನಾಗಿ ರಾಹುಲ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ, ತಾನು ಮುನ್ನಡೆಸಿದ ಮೊದಲ 2 ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟು ಸರಣಿ ವಶಪಡಿಸಿಕೊಳ್ಳಲು ಕಾರಣರಾದರು. ಇದೇ ಕಾರಣಕ್ಕೆ ಟ್ರೋಫಿಯನ್ನು ರಾಹುಲ್ ಪಡೆಯಲು ರೋಹಿತ್ ಸೂಚಿಸಿದರು. ರೋಹಿತ್ರ ಈ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಟ್ರೋಫಿ ಪಡೆಯುವಾಗ ಜೊತೆಗೆ ಕೈ ಹಾಕುವಂತೆ ರೋಹಿತ್ಗೆ ರಾಹುಲ್ ಸೂಚಿಸಿದರು. ಆದರೆ, ಪರವಾಗಿಲ್ಲ ಟ್ರೋಫಿ ನಿನ್ನ ಬಳಿಯೇ ಇರಲಿ. ನೀನೇ ಪಡೆದುಕೋ ಎಂದು ರೋಹಿತ್ ಹೇಳಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಟ್ರೋಫಿ ಹಿಡಿದು ಎಲ್ಲ ಆಟಗಾರರು ಫೋಟೋಗೆ ಪೋಸ್ ಕೊಡುವಾಗಲೂ ನಾಯಕ ರೋಹಿತ್, ರಾಹುಲ್ ಸ್ಥಳೀಯ ಸೌರಾಷ್ಟ್ರ ಆಟಗಾರರಿಗೆ ಟ್ರೋಫಿ ಕೊಟ್ಟರು. ಸೌರಾಷ್ಟ್ರ ಆಟಗಾರರಾದ ಪ್ರೇರಕ್ ಮಂಕಡ್, ಧರ್ಮೇಂದ್ರ ಜಡೇಜಾ, ವಿಶ್ವರಾಜ್ ಜಡೇಜಾ, ಹಾರ್ವಿಕ್ ದೇಸಾಯಿ ಅವರಿಗೆ ಟ್ರೋಫಿ ಹಸ್ತಾಂತರಿಸಲಾಯಿತು.
ಸೌರಾಷ್ಟ್ರದ ಆಟಗಾರರನ್ನು ಆಯ್ಕೆ ಮಾಡಿದ್ದೇಕೆ?
ಸೌರಾಷ್ಟ್ರದ ಈ ಆಟಗಾರರು ಮೈದಾನದಲ್ಲಿ ಆಡುತ್ತಿದ್ದ ಭಾರತದ ಆಟಗಾರರಿಗೆ ಡ್ರಿಂಕ್ಸ್ ಬ್ರೇಕ್ ವೇಳೆ ವಾಟರ್ ಬಾಯ್ ಆಗಿರಲು ಮತ್ತು ತಂಡದ ಆಟಗಾರರಿಗೆ ಬೆಂಬಲ ನೀಡಲು ಸೇರಿಸಲಾಗಿತ್ತು. ಆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಒಂದು ಕಾರಣ ಇದೆ. ಏಕೆಂದರೆ ಭಾರತ ತಂಡದ ಆಟಗಾರರು ಕೆಲವರು ತಮ್ಮ ತವರಿಗೆ ತೆರಳಿದ್ದರು. ಅಲ್ಲದೆ, ಕೆಲವರಿಗೆ ವಿಶ್ರಾಂತಿ ನೀಡಲಾಗಿತ್ತು. ಇನ್ನು ಕೆಲವರಿಗೆ ವೈರಲ್ ಫೀವರ್ ಬಂದಿತ್ತು. ಇದರಿಂದ ತಂಡದಲ್ಲಿ ಆಟಗಾರರ ಕೊರತೆ ಕಾಡಿತ್ತು. ಹೀಗಾಗಿ ಸೌರಾಷ್ಟ್ರದ ಆಟಗಾರರನ್ನು ನೇಮಿಸಲಾಗಿತ್ತು. ಹಾಗಾಗಿ ರೋಹಿತ್ - ರಾಹುಲ್ ಆ ಆಟಗಾರರ ನಡೆಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಂಗ್ ನಡೆಸಿತು. ಮಿಚೆಲ್ ಮಾರ್ಷ್ 96, ಡೇವಿಡ್ ವಾರ್ನರ್ 56, ಸ್ಟೀವ್ ಸ್ಮಿತ್ 74, ಮಾರ್ನಸ್ ಲಬುಶೇನ್ 72 ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಆಸೀಸ್ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ಗಳ ಬೃಹತ್ ಮೊತ್ತ ಗಳಿಸಿತು. ಈ ಗುರಿ ಬೆನ್ನತ್ತಿದ ಭಾರತ 49.4 ಓವರ್ಗಳಲ್ಲಿ 286 ರನ್ಗೆ ಸರ್ವಪತನ ಕಂಡಿತು. ರೋಹಿತ್ ಶರ್ಮಾ 81, ವಿರಾಟ್ ಕೊಹ್ಲಿ 56, ಶ್ರೇಯಸ್ ಅಯ್ಯರ್ 48 ರನ್ ಗಳಿಸಿದರೆ, ಉಳಿದವರು ವೈಫಲ್ಯ ಅನುಭವಿಸಿದರು. ಆಸೀಸ್ ಪರ ಗ್ಲೆನ್ ಮ್ಯಾಕ್ಸ್ವೆಲ್ 4 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು.