ಚಾಂಪಿಯನ್ಸ್ ಟ್ರೋಫಿಯಲ್ಲಿ ಮೂರನೇ ಪಂದ್ಯ ಮಳೆಯಿಂದ ರದ್ದು; ಸೆಮಿಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ, ಆಫ್ಘನ್ಗೂ ಜೀವಂತ
Champions Trophy 2025: ಲಾಹೋರ್‌ನಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಆದರೆ ಆಸೀಸ್ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.

ಶುಕ್ರವಾರ (ಫೆ.28) ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ದಾಯಿತು. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಳೆಯಿಂದ ರದ್ದಾದ 3ನೇ ಪಂದ್ಯ ಇದು. ರದ್ದಾದರೂ 'ಬಿ' ಗುಂಪಿನಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಮೊದಲ ತಂಡವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಒಟ್ಟು ನಾಲ್ಕು ಅಂಕ ಪಡೆಯಿತು. ಮತ್ತೊಂದೆಡೆ ಅಫ್ಘಾನಿಸ್ತಾನಕ್ಕೆ ಇನ್ನೂ ಸೆಮಿಫೈನಲ್ ಕನಸು ಜೀವಂತವಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಆಫ್ರಿಕನ್ನರು ಭಾರೀ ಅಂತರದಿಂದ ಸೋತರೆ ಮಾತ್ರ ಅಫ್ಘನ್ಗೆ ನಾಲ್ಕರ ಘಟ್ಟಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳಿಗೆ 273 ರನ್ ಗಳಿಸಿತು. ತಂಡಕ್ಕೆ ಸೆಡಿಕುಲ್ಲಾ ಅಟಲ್ (85) ಮತ್ತು ಅಜ್ಮತುಲ್ಲಾ ಒಮರ್ಜಾಯ್ (67) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 274 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭವನ್ನು ಪಡೆಯಿತು. ಮಳೆಯಿಂದ ಆಟ ಸ್ಥಗಿತಗೊಂಡಾಗ ಆಸ್ಟ್ರೇಲಿಯಾ 12.5 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತ್ತು. ಆದರೆ ನಂತರ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಮತ್ತು ಔಟ್‌ಫೀಲ್ಡ್ ಒದ್ದೆಯಾಗಿದ್ದ ಕಾರಣ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಿದರು.
ಅಫ್ಘಾನಿಸ್ತಾನ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ಮಾಡಲು ಬಂದ ಅಫ್ಘಾನಿಸ್ತಾನ ಆರಂಭ ತುಂಬಾ ಕೆಟ್ಟದಾಗಿತ್ತು. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಅವರನ್ನು ಮೊದಲ ಓವರ್‌ನಲ್ಲೇ ಪೆವಿಲಿಯನ್‌ಗೆ ಮರಳಿದರು. ಅವರು ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಇದಾದ ನಂತರ, ಇಬ್ರಾಹಿಂ ಜದ್ರಾನ್ ಮತ್ತು ಅಟಲ್ ನಡುವೆ 67 ರನ್‌ಗಳ ಪಾಲುದಾರಿಕೆ ಬಂತು. ಇಬ್ರಾಹಿಂ ಜದ್ರಾನ್ 28 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು. ರೆಹಮತ್ ಶಾ 21 ಎಸೆತಗಳಲ್ಲಿ 12 ರನ್ ಗಳಿಸಿ ನಿರಾಸೆ ಮೂಡಿಸಿದರು. 95 ಎಸೆತಗಳಲ್ಲಿ 85 ರನ್ ಗಳಿಸಿ ಸೆಡಿಕುಲ್ಲಾ ಅಟಲ್ ಶತಕ ವಂಚಿತರಾದರು. ನಾಯಕ ಶಾಹಿದಿ 49 ಎಸೆತಗಳಲ್ಲಿ 20 ರನ್ ಕಲೆ ಹಾಕಿದರು. ನಬಿ ಒಂದು ರನ್ನಿಗೆ ರನೌಟಾದರೆ, ಗುಲ್ಬದಿನ್ ನೈಬ್ 12 ಎಸೆತಗಳಲ್ಲಿ 4 ರನ್ ಗಳಿಸಿ ಗಳಿಸಿದರು. ರಶೀದ್ ಖಾನ್ 17 ಎಸೆತಗಳಲ್ಲಿ 19 ರನ್‌ಗಳ ಕಾಣಿಕೆ ನೀಡಿದರು.
ತಂಡ (ಬಿ ಗುಂಪು) | ಪಂದ್ಯ | ಗೆಲುವು | ಸೋಲು | ಅಂಕ | NRR |
---|---|---|---|---|---|
ಆಸ್ಟ್ರೇಲಿಯಾ (Q) | 3 | 1 | 0 | 4 | +0.475 |
ದಕ್ಷಿಣ ಆಫ್ರಿಕಾ | 2 | 1 | 0 | 3 | +2.140 |
ಅಫ್ಘಾನಿಸ್ತಾನ | 3 | 1 | 1 | 3 | -0.990 |
ಇಂಗ್ಲೆಂಡ್ (E) | 2 | 0 | 2 | 0 | -0.305 |
ತಂಡ (ಎ ಗುಂಪು) | ಪಂದ್ಯ | ಗೆಲುವು | ಸೋಲು | ಅಂಕ | NRR |
---|---|---|---|---|---|
ನ್ಯೂಜಿಲೆಂಡ್ (Q) | 2 | 2 | 0 | 4 | +0.863 |
ಭಾರತ (Q) | 2 | 2 | 0 | 4 | +0.647 |
ಬಾಂಗ್ಲಾದೇಶ (E) | 3 | 0 | 2 | 1 | -0.443 |
ಪಾಕಿಸ್ತಾನ (E) | 3 | 0 | 2 | 1 | -1.087 |
