ಚಾಂಪಿಯನ್ಸ್ ಟ್ರೋಫಿ 2025 ಹೋರಾಟ ಮುಕ್ತಾಯ; ಪಾಕಿಸ್ತಾನದ ಷರತ್ತನ್ನು ಒಪ್ಪಿದ ಐಸಿಸಿ, ಭಾರತಕ್ಕೆ ಹಿನ್ನಡೆಯಾಯಿತೇ?
Champions trophy 2025: ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವುದಾಗಿ ಒಪ್ಪಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ಮುಂದೆ ಕೆಲವು ಷರತ್ತುಗಳನ್ನು ಇರಿಸಿದೆ. ಐಸಿಸಿ ಕೂಡ ಕೆಲ ಷರತ್ತುಗಳಿಗೆ ಒಪ್ಪಿಗೆ ನೀಡಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಸಂಬಂಧಿಸಿ ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಡುವಿನ ಹೈಬ್ರಿಡ್ ಮಾಡೆಲ್ ವಿವಾದ ಕೊನೆಗೂ ಮುಕ್ತಿಯಾಗಿದೆ. ಈ ಮಹತ್ವದ ಟೂರ್ನಿಗೆ ಪಾಕ್ ಆತಿಥ್ಯ ವಹಿಸಿದ್ದು, ಎಲ್ಲಾ ಪಂದ್ಯಗಳು ಇಲ್ಲೇ ನಡೆಯಬೇಕಿತ್ತು. ಆದರೆ ಬಿಸಿಸಿಐ ತನ್ನ ತಂಡವನ್ನು ನೆರೆಯ ಪಾಕಿಸ್ತಾನ ದೇಶಕ್ಕೆ ಕಳುಹಿಸಲು ನಿರಾಕರಿಸಿದೆ. ಹೀಗಾಗಿ 2 ಮಂಡಳಿಗಳ ನಡುವೆ ಮಾತುಕತೆ ನಡೆಯುತ್ತಿತ್ತು. ಇದೀಗ ಅಂತಿಮವಾಗಿ ಭಾರತ ತಂಡ ಯಾವಾಗ, ಎಲ್ಲಿ ಆಡಲಾಗುತ್ತದೆ ಎಂಬುದಕ್ಕೆ ಪರಿಹಾರ ಸಿಕ್ಕಿದೆ.
ಪಿಟಿಐ ವರದಿ ಪ್ರಕಾರ, ಮುಂದಿನ ವರ್ಷ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಸಲು ಐಸಿಸಿ ಒಮ್ಮತಕ್ಕೆ ಬಂದಿದೆ. ಹೈಬ್ರಿಡ್ ಮಾದರಿಗೆ ಪಾಕಿಸ್ತಾನ ಸಹ ಒಮ್ಮತ ನೀಡಿದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. ಐಸಿಸಿಯ ಉನ್ನತ ಮೂಲಗಳ ಪ್ರಕಾರ, ಹೊಸ ಐಸಿಸಿ ಅಧ್ಯಕ್ಷ ಜಯ್ ಶಾ ಮತ್ತು ಪಾಕಿಸ್ತಾನ ಸೇರಿದಂತೆ ನಿರ್ದೇಶಕರ ಮಂಡಳಿಯ ನಡುವೆ ದುಬೈನಲ್ಲಿ ಅನೌಪಚಾರಿಕ ಸಭೆಯಲ್ಲಿ ಅಂತಿಮವಾದ ನಿರ್ಧಾರ ಕೈಗೊಳ್ಳಲಾಯಿತು. ಎಲ್ಲಾ ಮಂಡಳಿಗಳು ಟೂರ್ನಿಯನ್ನು ಯುಎಇ ಮತ್ತು ಪಾಕಿಸ್ತಾನದಲ್ಲಿ ಆಯೋಜಿಸಲು ಒಪ್ಪಿಕೊಂಡಿವೆ.
ಆದರೆ, ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ ಎಂದು ಐಸಿಸಿ ಮೂಲವೊಂದು ಪಿಟಿಐಗೆ ತಿಳಿಸಿದೆ. ಇದರೊಂದಿಗೆ ಇಷ್ಟು ವರ್ಷಗಳ ಅನುಮಾನಕ್ಕೆ ಅಂತ್ಯ ಸಿಕ್ಕಂತಾಗಿದೆ. ಆದರೆ ಇದಕ್ಕೂ ಮುನ್ನ ಪಿಸಿಬಿ, ಯಾವುದೇ ಕಾರಣಕ್ಕೂ ಹೈಬ್ರಿಡ್ ಮಾದರಿಗೆ ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಬಿಸಿಸಿಐ, ತನ್ನ ಹಠ ಬಿಡಲಿಲ್ಲ. ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದು ಹೇಳಿತ್ತು. ಇದೀಗ ಹೀಗಾಗಿ ಪಾಕ್ ಟೂರ್ನಿಯನ್ನೇ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತ್ತು. ಇದೀಗ ಎಲ್ಲದಕ್ಕೂ ಪರಿಹಾರ ಸಿಕ್ಕಿದೆ. ಹೈಬ್ರಿಡ್ ಮಾದರಿಗೆ ಒಪ್ಪಿರುವ ಪಿಸಿಬಿ, ಕೆಲವು ಷರತ್ತುಗಳನ್ನು ಹಾಕಿದೆ.
ಪಾಕಿಸ್ತಾನದ ಷರತ್ತನ್ನು ಒಪ್ಪಿದ ಐಸಿಸಿ
ಹೈಬ್ರಿಡ್ ಮಾದರಿಯ ಬದಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ಮುಂದೆ ಕೆಲವು ಷರತ್ತುಗಳನ್ನು ಇರಿಸಿದೆ. ಐಸಿಸಿ ಕೂಡ ಕೆಲ ಷರತ್ತುಗಳಿಗೆ ಒಪ್ಪಿಗೆ ನೀಡಿದೆ. ಹೈಬ್ರಿಡ್ ಮಾದರಿಯನ್ನು 2031 ರವರೆಗೆ ಐಸಿಸಿ ಟೂರ್ನಿಗಳಲ್ಲಿ ಬಳಸುವಂತೆ ಸೂಚಿಸಿದೆ. ಭಾರತದಲ್ಲಿ ನಡೆಯುವ ಐಸಿಸಿ ಟೂರ್ನಿಗೆ ನಾವು ಹೋಗುವುದಿಲ್ಲ ಎಂದು ಪಾಕ್ ಹೇಳಿದೆ. 2027ರ ತನಕ ನಡೆಯುವ ಟೂರ್ನಿಗಳಿಗೆ ಐಸಿಸಿ ಒಪ್ಪಿಗೆ ಸೂಚಿಸಿದೆ. ಮುಂದಿನ ವರ್ಷ ಅಕ್ಟೋಬರ್ನಲ್ಲಿ ಮಹಿಳಾ ಏಕದಿನ ವಿಶ್ವಕಪ್ ಮತ್ತು 2026ರಲ್ಲಿ ಪುರುಷರ ಟಿ20ಐ ವಿಶ್ವಕಪ್ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ. ಈ ಟೂರ್ನಿಗಳಿಗೆ ಹೈಬ್ರಿಡ್ ಮಾದರಿ ಬೇಕಿಲ್ಲ. ಏಕೆಂದರೆ ಪಾಕಿಸ್ತಾನದ ಪಂದ್ಯಗಳು ಶ್ರೀಲಂಕಾದಲ್ಲಿ ಆಯೋಜಿಸಬಹುದು.
ಭಾರತಕ್ಕೆ ಹಿನ್ನಡೆಯಾಯ್ತಾ?
2031ರವರೆಗೆ ಷರತ್ತುಗಳನ್ನು ವಿಧಿಸಿರುವ ಪಾಕಿಸ್ತಾನ, ಭಾರತದಲ್ಲಿ ನಡೆಯುವ ಎಲ್ಲಾ ಸ್ಪರ್ಧೆಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಡಬೇಕು ಎಂದು ಸೂಚಿಸಿದೆ. ಐಸಿಸಿ ಮೂಲಗಳ ಪ್ರಕಾರ, 2026ರ ಪುರುಷರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಅಲ್ಲದೆ, ಪಿಸಿಬಿ ಇಟ್ಟಿರುವ ಕೆಲವೊಂದು ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಐಸಿಸಿ ತಿಳಿಸಿದೆ. ಶೀಘ್ರವೇ ವೇಳಾಪಟ್ಟಿ ಪ್ರಕಟಿಸಲು ಐಸಿಸಿ, ಪಿಸಿಬಿಗೆ ಸೂಚಿಸಿದೆ. ಹೀಗಾಗಿ, ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆ ಇದೆ. ಆದರೆ ಭಾರತ ತಂಡಕ್ಕೆ ಇಲ್ಲಿನ ಯಾವುದೇ ಹಿನ್ನಡೆಯಾಗಿಲ್ಲ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವ ಮೂಲಕ ಒಂದು ಹಂತದ ಗೆಲುವು ಸಾಧಿಸಿದೆ. ಜಯ್ ಶಾ ಐಸಿಸಿ ಅಧ್ಯಕ್ಷರಾಗಿರುವುದೇ ಇದಕ್ಕೆ ಕಾರಣ.