ಒಬ್ಬರಿಗೆ ಮೊಣಕಾಲು ನೋವು, ಇನ್ನೊಬ್ಬರಿಗೆ ಅನಾರೋಗ್ಯ; ನ್ಯೂಜಿಲೆಂಡ್ ಪಂದ್ಯಕ್ಕೆ ಭಾರತದ ಈ ಸ್ಟಾರ್ ಆಟಗಾರರು ಅಲಭ್ಯ?
Champions Trophy 2025: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತದ ಇಬ್ಬರು ಸ್ಟಾರ್ ಆಟಗಾರರು ಅಭ್ಯಾಸ ಶಿಬಿರಕ್ಕೆ ದೂರ ಉಳಿದಿದ್ದಾರೆ. ಯಾರವರು? ಇಲ್ಲಿದೆ ವಿವರ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy 2025) ನ್ಯೂಜಿಲೆಂಡ್ ವಿರುದ್ಧದ ಹಾಗೂ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ (Team India) ಆಘಾತವಾಗಿದೆ. ದುಬೈನ ಐಸಿಸಿ ಅಕಾಡೆಮಿಯಲ್ಲಿ ನಡೆದ ತರಬೇತಿ ಶಿಬಿರವನ್ನು ತಂಡದ ಸ್ಟಾರ್ ಆಟಗಾರರು ತಪ್ಪಿಸಿಕೊಂಡಿದ್ದು ಆತಂಕ ಸೃಷ್ಟಿಸಿದೆ. ಹೌದು, ಭಾರತದ ನಾಯಕ ರೋಹಿತ್ ಶರ್ಮಾ, ಉಪನಾಯಕ ಶುಭ್ಮನ್ ಗಿಲ್ ಪ್ರಾಕ್ಟೀಸ್ ಸೆಷನ್ ತಪ್ಪಿಸಿಕೊಂಡಿದ್ದಾರೆ. ಇದು ಕಿವೀಸ್ ಗುಂಪು ಪಂದ್ಯಕ್ಕೆ ಹಾಗೂ ಸೆಮಿಫೈನಲ್ ಪಂದ್ಯಕ್ಕೆ ಲಭ್ಯತೆಯ ಬಗ್ಗೆ ಅನುಮಾನ ಹುಟ್ಟು ಹಾಕಿದೆ.
2025ರ ಚಾಂಪಿಯನ್ಸ್ ಟ್ರೋಫಿ ಗ್ರೂಪ್ ಹಂತದ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಮತ್ತು ಗಿಲ್ ಟೀಮ್ ಇಂಡಿಯಾದ ತರಬೇತಿ ಅವಧಿಯನ್ನು ತಪ್ಪಿಸಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ನಾಯಕ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದರೆ, ಗಿಲ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳುತ್ತಿವೆ. ಫೆ 23ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಮೊಣಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡು ರೋಹಿತ್ ಫೀಲ್ಡಿಂಗ್ ಮಾಡಿದ್ದು ಕಂಡು ಬಂತು.
ಕೆಲ ಹೊತ್ತು ಮೈದಾನ ತೊರೆದು ಡಗೌಟ್ನಲ್ಲಿ ಕೂತು ವಿಶ್ರಾಂತಿ ಪಡೆದಿದ್ದ ರೋಹಿತ್, ಆ ಪಂದ್ಯದಲ್ಲಿ 15 ಎಸೆತಗಳಲ್ಲಿ 20 ರನ್ ಗಳಿಸಿದ್ದರು. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಗಾಯದ ಕಾರಣ ರೋಹಿತ್ ಮೂರು ಗಂಟೆಗಳ ಕಾಲ ಐಸಿಸಿ ಅಕಾಡೆಮಿಯಲ್ಲಿ ಇದ್ದರೂ ಪ್ರಾಕ್ಟೀಸ್ ಸೆಷನ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಭಾರತ ಮತ್ತು ನ್ಯೂಜಿಲೆಂಡ್ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದು, ಉಭಯ ತಂಡಗಳಿಗೂ ಮುಂದಿನ ಪಂದ್ಯವು ಅಷ್ಟೇನು ಪರಿಣಾಮಕಾರಿ ಅಲ್ಲ. ಇದು ಕೇವಲ ಔಪಚಾರಿಕವಷ್ಟೆ.
ಕಿವೀಸ್ ಪಂದ್ಯಕ್ಕೆ ವಿಶ್ರಾಂತಿಯೇ?
ಕಿವೀಸ್ ವಿರುದ್ಧದ ಪಂದ್ಯವು ಹೆಚ್ಚು ಪರಿಣಾಮಕಾರಿಯಲ್ಲದ ಪಂದ್ಯವಾಗಿದ್ದು, ಅಷ್ಟೇನು ತಲೆ ಕೆಡಿಸಿಕೊಳ್ಳದಿದ್ದರೂ ಅಚ್ಚರಿ ಏನಿಲ್ಲ. ಹಾಗಾಗಿ ರೋಹಿತ್ ಅಭ್ಯಾಸ ನಡೆಸದಿದ್ದರೂ ಸಮಸ್ಯೆ ಏನಿಲ್ಲ. ಇದು ಅವರಿಗೆ ವಿಶ್ರಾಂತಿಯೂ ಆಗಿದೆ ಎಂದು ವರದಿ ಉಲ್ಲೇಖಿಸಿದೆ. ಮತ್ತೊಂದೆಡೆ, ಗಿಲ್ ಅಭ್ಯಾಸದ ಸಮಯದಲ್ಲಿ ತಂಡದಲ್ಲಿ ಇರಲಿಲ್ಲ. ಗಿಲ್ಗೆ ಅನಾರೋಗ್ಯ ಕಾಣಿಸಿಕೊಂಡಿದೆ ಎಂದೂ ಹೇಳಲಾಗುತ್ತಿದೆ. ಇದು ಆತಂಕವನ್ನೂ ಸೃಷ್ಟಿಸಿದೆ. ಹಾಗಾಗಿ ಸೆಮಿಫೈನಲ್ಗೆ ಫಿಟ್ ಆಗಿಸುವ ಕಾರಣ ಮುಂದಿನ ಪಂದ್ಯಕ್ಕೆ ಅವರಿಬ್ಬರಿಗೆ ವಿಶ್ರಾಂತಿ ನೀಡಿದರೂ ಅಚ್ಚರಿ ಇಲ್ಲ.
ಪ್ಲೇಯಿಂಗ್ 11ನಲ್ಲಿ ಬದಲಾವಣೆ ಸಾಧ್ಯತೆ?
ಒಂದು ವೇಳೆ ತಂಡದಲ್ಲಿ ಇಬ್ಬರು ಸ್ಪೆಷಲಿಸ್ಟ್ ಓಪನರ್‌ಗಳು ಹೊರಗುಳಿದರೆ ಓಪನರ್‌ಗಳು ಯಾರಾಗಬಹುದು ಎಂಬುದು ಸದ್ಯದ ಕುತೂಹಲ. ರಿಷಭ್ ಪಂತ್ ತಂಡಕ್ಕೆ ಮರಳುತ್ತಾರೆ. ಆದರೆ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆ ಎಂದು ಹಲವು ವರದಿಗಳು ಮಾಡಿವೆ. ಆದರೆ ಟೀಮ್ ಮ್ಯಾನೇಜ್ಮೆಂಟ್ ಯಾವ ನಡೆಯನ್ನು ಅನುಕರಿಸುತ್ತದೆ ಎಂಬುದು ಕುತೂಹಲ ಸೃಷ್ಟಿಸಿದೆ. ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದ ಗಿಲ್, ಪಾಕಿಸ್ತಾನ ಎದುರು 46 ರನ್ ಗಳಿಸಿ ಔಟಾಗಿದ್ದರು. ರೋಹಿತ್ ಕೂಡ ಉತ್ತಮ ಲಯದಲ್ಲಿದ್ದಾರೆ. ಇವರು ಅಲಭ್ಯರಾದರೆ ತಂಡಕ್ಕೆ ಪೆಟ್ಟಾಗಬಹುದು.
